₹20 ಕೋಟಿಗಾಗಿ ₹2,000 ಕೋಟಿ ಖರ್ಚು! – IPLನಲ್ಲಿ ಫ್ರಾಂಚೈಸಿಗಳಿಗೆ ಲಾಭ ಹೇಗೆ?
BCCIಗೆ ಸಿಂಹಪಾಲು.. ಆದಾಯ ಎಷ್ಟು?
ಐಪಿಎಲ್ ಮೆಗಾ ಆಕ್ಷನ್ ಮುಗೀತಿದ್ದಂತೆ 18ನೇ ಸೀಸನ್ ಯಾವಾಗ ಶುರುವಾಗತ್ತಪ್ಪ ಅಂತಾ ಕ್ರಿಕೆಟ್ ಅಭಿಮಾನಿಗಳೆಲ್ಲಾ ಕಾಯ್ತಿದ್ದಾರೆ. ಐಪಿಎಲ್ ಅಂದ್ರೆ ಭಾರತೀಯರ ಪಾಲಿಗೆ ಐಸಿಸಿ ಟೂರ್ನಿಗಳಿಗಿಂತಲೂ ಹೆಚ್ಚು. ಹೀಗೆ ಫ್ಯಾನ್ಸ್ ಎಲ್ಲಾ ಹಬ್ಬದಂತೆ ಸೆಲೆಬ್ರೇಟ್ ಮಾಡಿದ್ರೆ ಫ್ರಾಂಚೈಸಿಗಳಿಗೂ ಕೂಡ ಟೂರ್ನಿ ಅಂದ್ರೆ ಪ್ರತಿಷ್ಠೆ. ಬಟ್ ನಿಮಗೆಲ್ಲಾ ಅನ್ನಿಸ್ಬೋದು. ಟ್ರೋಫಿ ಗೆದ್ದ ತಂಡಕ್ಕೆ ಸಿಗೋ ಪ್ರೈಸ್ ಮನಿ 20 ಕೋಟಿ. ಬಟ್ ತಂಡಗಳು 200ಕೋಟಿಗೂ ಹೆಚ್ಚು ಹಣವನ್ನ ಖರ್ಚು ಮಾಡುತ್ವೆ. ಹಾಗಾದ್ರೆ ಇವ್ರಿಗೆ ನಷ್ಟ ಆಗಲ್ವಾ? ಆದಾಯದ ಮೂಲ ಏನು? ಅಷ್ಟೊಂದು ಹಣ ವೆಚ್ಚ ಮಾಡೋದೇಕೆ ಅಂತಾ..? ಬಟ್ ನಿಜ ಏನಂದ್ರೆ ಸೋತ್ರೂ ಕೂಡ ಫ್ರಾಂಚೈಸಿಗಳೂ ಕೋಟಿ ಕೋಟಿ ಲಾಭ ಮಾಡಿಕೊಳ್ತವೆ. ಅದು ಹೇಗೆ ಅನ್ನೋ ಬಗ್ಗೆ ರೋಚಕ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: 2024ಕ್ಕೆ 2040ರ ಝಲಕ್.. UIನಲ್ಲಿ ಜಾತಿ ಮುದ್ರೆ ಇಟ್ಟ ಉಪ್ಪಿ!! – ವಾರ್ನರ್ ಆಗಿ ಮಿಂಚಿದ ಉಪೇಂದ್ರ
17 ಸೀಸನ್. ಭರ್ತಿ 17 ಸೀಸನ್ಗಳನ್ನ ಮುಗಿಸಿರೋ ಇಂಡಿಯನ್ ಪ್ರೀಮಿಯರ್ ಲೀಗ್ ಇಡೀ ಜಗತ್ತಿನಲ್ಲೇ ಅತ್ಯಂತ ಶ್ರೀಮಂತ ಲೀಗ್ ಎನಿಸಿಕೊಂಡಿದೆ. ಎರಡು ತಿಂಗಳುಗಳ ಕಾಲ ನಡೆಯುವ ಮಿಲಿಯನ್ ಡಾಲರ್ ಟೂರ್ನಿಯ ಪಾಪ್ಯುಲಾರಿಟಿ ವರ್ಷದಿಂದ ವರ್ಷಕ್ಕೆ ಹೆಚ್ಚಾಗ್ತಾನೇ ಹೋಗ್ತಿದೆ. ಅದ್ರಲ್ಲೂ ಕಳೆದ ವಾರ ನಡೆದ ಮೆಗಾ ಹರಾಜು ಬಳಿಕ 18ನೇ ಆವೃತ್ತಿಯ ಐಪಿಎಲ್ ಕಣ್ತುಂಬಿಕೊಳ್ಳೋಕೆ ಇಡೀ ಜಗತ್ತೇ ಕಾತರದಿಂದ ಕಾಯ್ತಿದೆ. ಐಪಿಎಲ್ನಿಂದಾಗಿ ಎಷ್ಟೋ ಪ್ರತಿಭಾವಂತ ಆಟಗಾರರು ಬೆಳಕಿಗೆ ಬರ್ತಿದ್ದಾರೆ. ಟೀಂ ಇಂಡಿಯಾಗೂ ಪಾದರ್ಪಣೆ ಮಾಡುತ್ತಿದ್ದಾರೆ. ಅವ್ರ ಲೈಫ್ ಸ್ಟೈಲ್ ಕೂಡ ಸುಧಾರಿಸಿದೆ. ಹಾಗಂತ ಜಗತ್ತಿನ ಅತಿದೊಡ್ಡ ಕ್ರಿಕೆಟ್ ಲೀಗ್ ಆಗಿರುವ ಐಪಿಎಲ್ನಲ್ಲಿ ಚಾನ್ಸ್ ಗಿಟ್ಟಿಸಿಕೊಳ್ಳೋದು ಅಂದ್ರೆ ಅಷ್ಟು ಸುಲಭವೂ ಇಲ್ಲ. ಇತರೆ ದೇಶೀ ಟೂರ್ನಿಗಳಲ್ಲಿ ಅಬ್ಬರಿಸಬೇಕು. ಇದು ಆಟಗಾರರ ಕಥೆಯಾದ್ರೆ ಫ್ರಾಂಚೈಸಿಗಳಿಗೂ ದೊಡ್ಡ ಸವಾಲೇ ಇದೆ. ಬಿಸಿಸಿಐ ಪಾಲಿಗೆ ಚಿನ್ನದ ಮೊಟ್ಟೆ ಇಡುವ ಕೋಳಿಯಾಗಿರುವ ಐಪಿಎಲ್ನಲ್ಲಿ ತಂಡ ನಿರ್ವಹಣೆ ಮಾಡುವುದು ಮುಳ್ಳಿನ ಮೇಲಿನ ನಡಿಗೆಯೇ ಸರಿ. ಒಂದು ಸೀಸನ್ಗೆ 200 ಕೋಟಿಗೂ ಹೆಚ್ಚು ಖರ್ಚು ಮಾಡಬೇಕಾಗುತ್ತದೆ.
ಪ್ರಶಸ್ತಿ ಮೊತ್ತ ಮೀನು.. ಆದಾಯ ತಿಮಿಂಗಿಲ!
20 ಕೋಟಿ. ಐಪಿಎಲ್ ಟೂರ್ನಿಯಲ್ಲಿ ಆಡಿ ಗೆದ್ದರೆ ಸಿಗೋ ಪ್ರಶಸ್ತಿ ಮೊತ್ತ 20 ಕೋಟಿ. ಬಟ್ ಆಟಗಾರರ ಖರೀದಿ ಸೇರಿದಂತೆ ಅವರ ವಸತಿ, ಊಟ, ಫ್ಲೈಟ್… ಹೀಗೆ ಎಲ್ಲವನ್ನೂ ಫ್ರಾಂಚೈಸಿಗಳೇ ನೋಡಿಕೊಳ್ಬೇಕು. ಕೋಟಿಕೋಟಿ ಅನ್ನೋದಕ್ಕೆ ಇಲ್ಲಿ ಲೆಕ್ಕವೇ ಇರೋದಿಲ್ಲ. ಇಷ್ಟೆಲ್ಲಾ ಖರ್ಚು ಮಾಡಿದ್ರೂ ಚಾಂಪಿಯನ್ ತಂಡಕ್ಕೆ 20 ಕೋಟಿ, ರನ್ನರ್ ಅಪ್ 13 ಕೋಟಿ, 3 ಮತ್ತು 4ನೇ ಸ್ಥಾನ ಪಡೆದ ತಂಡಗಳಿಗೆ ತಲಾ 6.5 ಕೋಟಿ ಬಹುಮಾನ ಸಿಗಲಿದೆ. ಹೀಗೆಲ್ಲಾ ಖರ್ಚು ಮಾಡಿ ಫ್ರಾಂಚೈಸಿಗಳು ಇಷ್ಟು ಹಣಕ್ಕೆ ಆಸೆ ಪಡುತ್ತವೆಯೇ ಅಂದ್ರೆ ನೋವೇ ಚಾನ್ಸೇ ಇಲ್ಲ. ಯಾಕಂದ್ರೆ ಪ್ರೈಸ್ ಮನಿ ಅನ್ನೋದು ಒಂದು ಮೀನು ಇದ್ದ ಹಾಗೇ ಅಷ್ಟೇ. ಬಟ್ ಐಪಿಎಲ್ನಿಂದ ಬರೋ ಆದಾಯ ತಿಮಿಂಗಿಲಕ್ಕೆ ಸಮ. ಆರ್ಸಿಬಿ, ಸಿಎಸ್ಕೆ, ಮುಂಬೈ, ಎಸ್ಆರ್ಹೆಚ್, ಡೆಲ್ಲಿ, ಕೆಕೆರ್, ಪಂಜಾಬ್ ಸೇರಿದಂತೆ ಎಲ್ಲಾ 10 ತಂಡಗಳು ಹಣ ಗಳಿಸೋದೇ ಟೂರ್ನಿಯಿಂದ.
ಟೈಟಲ್ ಸ್ಪಾನ್ಸರ್ ಶಿಪ್ ಗೆ ಹರಿದು ಬರುತ್ತೆ ಕೋಟಿ ಕೋಟಿ ಹಣ!
ಐಪಿಎಲ್ ತಂಡಗಳಿಗೆ ಹಲವಾರು ಮೂಲಗಳಿಂದ ಹಣದ ಹೊಳೆಯೇ ಹರಿದು ಬರುತ್ತೆ. ಈ ಪೈಕಿ ಟೈಟಲ್ ಸ್ಪಾನ್ಶರ್ಶಿಪ್ ಕೂಡ ಒಂದು. ಐಪಿಎಲ್ ಲೋಗೋ ಮೇಲೆ ಟಾಟಾ ಅಂತಾ ಬರೆದಿರೋರನ್ನ ನೀವೆಲ್ಲಾ ನೋಡೇ ಇರ್ತಿರಾ. ಟಾಟಾ ಐಪಿಎಲ್ ಅಂತಾನೇ ಕರೆಯಲಾಗುತ್ತೆ. ಇದನ್ನೇ ಟೈಟಲ್ ಅಥವಾ ಶೀರ್ಷಿಕೆ ಪ್ರಾಯೋಜಕತ್ವ ಎನ್ನಲಾಗುತ್ತದೆ. ಟಾಟಾ ಕಂಪನಿ ಪ್ರತಿ ವರ್ಷದ ಟೈಟಲ್ ಸ್ಪಾನ್ಶರ್ಶಿಪ್ಗೆ ಬಿಸಿಸಿಐಗೆ ಬರೋಬ್ಬರಿ 330 ಕೋಟಿ ರೂಪಾಯಿ ಪಾವತಿಸುತ್ತದೆ. ಈ ಮೊತ್ತದಲ್ಲಿ ಶೇ 50ರಷ್ಟು ಬಿಸಿಸಿಐಗೆ, ಉಳಿದ ಶೇ 50ರಷ್ಟು ಉಳಿದ ಎಲ್ಲಾ ತಂಡಗಳಿಗೆ ಹಂಚಿಕೆ ಮಾಡಲಾಗುತ್ತದೆ. ಇದು ಆದಾಯದ ಮೊದಲ ಭಾಗ.
ಮ್ಯಾಚ್ ಸ್ಪಾನ್ಸರ್ ಶಿಪ್ ನಿಂದಲೂ ಹಣದ ಮಳೆ!
ಮ್ಯಾಚ್ ಟೈಮಲ್ಲಿ ನೀವೆಲ್ಲಾ ಕಮರ್ಷಿಯಲ್ಗಳನ್ನ ನೋಡೇ ಇರ್ತೀರಾ. ಅದರಲ್ಲೂ ಮುಖ್ಯವಾಗಿ ಪಂದ್ಯಶ್ರೇಷ್ಠ ನೀಡುವ ವೇಳೆ ರೂಪೆ, ಪೆಟಿಎಂ, ಅಪ್ಸ್ಟಾಕ್ಸ್, ಅರಾಮ್ಕೋ, ಡ್ರೀಮ್ 11, ಟಾಟಾ ನ್ಯೂ, ಸಿಯಟ್ ಟೈಯರ್, ಕ್ರೆಡ್ ಪವರ್ ಸೇರಿ ಹಲವು ಪ್ರಾಯೋಜಕತ್ವ ಇರಲಿದೆ. ಪ್ರತಿಯೊಂದು ಜಾಹೀರಾತುದಾರರು, ಕನಿಷ್ಠ 25 ಕೋಟಿ ರೂಪಾಯಿ ನೀಡ್ತಾರೆ. ಇದರಲ್ಲಿ ಶೇ 50 ರಷ್ಟು ಬಿಸಿಸಿಐಗೆ, ಉಳಿದದ್ದು ತಂಡಗಳ ಮಾಲೀಕರಿಗೆ.
ಪ್ರಸಾರದ ಹಕ್ಕು ಪಡೆಯಲು ಟಿವಿ ಚಾನೆಲ್ ಗಳ ರೇಸ್!
ಐಪಿಎಲ್ ಪ್ರಸಾರದ ಹಕ್ಕುಗಳನ್ನು ಪಡೆಯಲು ಟಿವಿ ಚಾನೆಲ್ಗಳು ಕೋಟಿ ಕೋಟಿ ಸುರಿಯುತ್ತವೆ. ಎಷ್ಟು ಕೋಟಿಯಾದರೂ ನೀಡಲು ಹಲವು ಚಾನೆಲ್ಗಳು ಸಿದ್ಧವಾಗಿವೆ. 2008 ರಿಂದ 2017ರ ತನಕ ಸೋನಿ ನೆಟ್‌ವರ್ಕ್ ಪ್ರಸಾರದ ಹಕ್ಕು ಪಡೆದಿತ್ತು. ವರ್ಷಕ್ಕೆ 820 ಕೋಟಿಯನ್ನು ಬಿಸಿಸಿಐಗೆ ಪಾವತಿಸುತ್ತಿತ್ತು. 2018ರಿಂದ 2022ರ ತನಕ 16,400 ಕೋಟಿಗೆ ಪ್ರಸಾರದ ಹಕ್ಕುಗಳನ್ನು ಸ್ಟಾರ್ಸ್ಪೋರ್ಟ್ಸ್ ಖರೀದಿಸಿತ್ತು. ಆ ಬಳಿಕ 5 ವರ್ಷಗಳ ಅವಧಿಗೆ ಅಂದ್ರೆ 2023 ರಿಂದ 2027ರವರೆಗೆ ಐಪಿಎಲ್ ಮಾಧ್ಯಮ ಹಕ್ಕು 48,390 ಕೋಟಿ ರೂಪಾಯಿಗೆ ಮಾರಾಟವಾಗಿದೆ. ಜಿಯೋ ಸಿನಿಮಾ, ಡಿಸ್ನಿ + ಹಾಟ್ಸ್ಟಾರ್ ಕಂಪನಿ, ವಯೋಕಾಮ್-18 ಪ್ರಸಾರದ ಹಕ್ಕು ಪಡೆದಿವೆ. ಈ ಮೊತ್ತದಲ್ಲೂ 50-50 ಅನುಪಾತದಲ್ಲಿ ಹಂಚಿಕೆಯಾಗಲಿದೆ. ಆದರೆ ಚಾನೆಲ್ಗಳು 10 ಸೆಕೆಂಡ್ಗಳ ಜಾಹೀರಾತು ಸ್ಲಾಟ್ಗೆ 15 ರಿಂದ 20 ಲಕ್ಷ ಚಾರ್ಚ್ ಮಾಡುತ್ತವೆ. ಆ ಮೂಲಕ ಚಾನಲ್ಗಳೂ ಕೂಡ ಆದಾಯ ಗಳಿಸುತ್ತವೆ.
ಜೆರ್ಸಿ ಪ್ರಾಯೋಜಕತ್ವದಲ್ಲೂ ಸಿಗಲಿದೆ ಕೋಟಿಕೋಟಿ ಹಣ!
ಇನ್ನು ಫ್ರಾಂಚೈಸಿಗಳ ಮಾಲೀಕರಿಗೆ ಆದಾಯದ ಮತ್ತೊಂದು ಮಾರ್ಗ ಅಂದ್ರೆ ಜೆರ್ಸಿ ಸ್ಪಾನ್ಸರ್ ಶಿಪ್. ಆಯಾ ತಂಡಗಳ ಮಾಲೀಕರು ತಂಡದ ಜೆರ್ಸಿಯಲ್ಲಿ ವಿವಿಧ ಜಾಹೀರಾತು ಕಂಪನಿಗಳ ಲೋಗೋಗಳು ಇರುತ್ತವೆ. ಮುಂಭಾಗ ಜಾಹೀರಾತು ಪ್ರಕಟಿಸಲು 30 ಕೋಟಿ, ಹಿಂಭಾಗ ಪ್ರಕಟಿಸಲು 15 ಕೋಟಿ ಚಾರ್ಚ್ ಮಾಡಲಾಗುತ್ತದೆ. ಹಾಗೇ ಐಪಿಎಲ್ ಪಂದ್ಯದ ಟಿಕೆಟ್ಗಳ ಮಾರಾಟದಲ್ಲೂ ಮಾಲೀಕರಿಗೆ ಷೇರು ಬರಲಿದೆ. ಆಯಾ ತಂಡಗಳ ತವರು ಮೈದಾನಗಳಲ್ಲಿ ನಡೆಯುವ ಪಂದ್ಯಗಳ ಟಿಕೆಟ್ ಬೆಲೆಯಲ್ಲಿ ಶೇ 80ರಷ್ಟು ಮೊದಲ ಆಯಾ ತಂಡದ ಮಾಲೀಕರಿಗೆ ಸಿಗಲಿದೆ. ಶೇ 20ರಷ್ಟು ರಾಜ್ಯ ಕ್ರಿಕೆಟ್ ಮಂಡಳಿಗೆ ಸಿಗಲಿದೆ.
ಇದೆಲ್ಲಾ ಒಂದುಕಡೆಯಾದ್ರೆ ಫ್ರಾಂಚೈಸಿಗಳ ಮಾಲೀಕರು ತಮ್ಮ ತಂಡಗಳ ಜೆರ್ಸಿ, ಲೋಗೋಗಳು, ಕ್ಯಾಪ್ ಗಳನ್ನ ಮಾರಾಟ ಮಾಡುವ ಮೂಲಕ ಮಾಲೀಕರು ಉತ್ತಮ ಆದಾಯ ಗಳಿಸುತ್ತಾರೆ. ಇದೆಲ್ಲದರ ಜೊತೆಗೆ ಬಹುಮಾನ ರೂಪದಲ್ಲೂ ಆದಾಯ ಗಳಿಸುತ್ತಾರೆ. ಬಹುಮಾನ ಪಡೆಯುವ ಹಣದಲ್ಲಿ ಅರ್ಧದಷ್ಟು ಮೊತ್ತ ಮಾಲೀಕರ ಖಾತೆಗೆ ಹೋಗುತ್ತದೆ. ಉಳಿದ ಮೊತ್ತದಲ್ಲಿ ಆಟಗಾರರು ಮತ್ತು ಕೋಚ್ಗಳಿಗೆ ಸಮಾನವಾಗಿ ಹಂಚಿಕೆ ಮಾಡಲಾಗುತ್ತದೆ. ಹೀಗೆ ಎಲ್ಲಾ ಮೂಲಗಳಿಂದ ಏನಿಲ್ಲವೆಂದರೂ ಒಂದು ಫ್ರಾಂಚೈಸಿ 500 ಕೋಟಿಗಿಂತ ಹೆಚ್ಚು ಆದಾಯ ಗಳಿಸುತ್ತವೆ. ಅದ್ರಲ್ಲೂ ಹೆಚ್ಚು ಪಾಪ್ಯುಲಾರಿಟಿ ಹೊಂದಿರೋ ಆರ್ಸಿಬಿ, ಸಿಎಸ್ಕೆ, ಮುಂಬೈ ತಂಡಗಳು 700 ಕೋಟಿಗೂ ಹೆಚ್ಚು ಸಂಪಾದಿಸುತ್ತವೆ. ಇದಕ್ಕೇ ಹೇಳೋದೂ ಐಪಿಎಲ್ ಅಂದ್ರೆ ಚಿನ್ನದ ಮೊಟ್ಟೆ ಇಡೋ ಕೋಳಿ ಅಂತಾ.