ವಿಜಯ್ ದೇವರಕೊಂಡ ವಿರಾಟ ರೂಪ – ಕಿಂಗ್‌ಡಮ್ ಸಿನಿಮಾಗೆ ಸಿಕ್ಕ ಪ್ರತಿಕ್ರಿಯೆ ಹೇಗಿದೆ?

ಟಾಲಿವುಡ್ ಹೀರೋ ವಿಜಯ್ ದೇವರಕೊಂಡ ನಟನೆಯ ಕಿಂಗ್‌ಡಮ್ ಸಿನಿಮಾ ರಿಲೀಸ್ ಆಗಿದೆ. ಬಹಳ ದಿನಗಳ ನಂತರ ಹಿಟ್ ಸಿನಿಮಾ ನಿರೀಕ್ಷೆ ಮಾಡುತ್ತಿದ್ದಾರೆ ನಟ ವಿಜಯ್. ಹೀಗಾಗಿ ಮೊದಲ ದಿನವೇ ಈ ಸಿನಿಮಾಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ವಿಜಯ್ ವಿರಾಟ ರೂಪ ನೋಡಿ ವೀಕ್ಷಕರು ಖುಷಿ ಪಟ್ಟಿದ್ದಾರೆ.
ಇದನ್ನೂ ಓದಿ:ಬಣ್ಣದ ಲೋಕಕ್ಕೆ ಮತ್ತೆ ಬಂದ ಐಶು – ರಿಯಾಲಿಟಿ ಶೋಗೆ ಜಡ್ಜ್ ಆಗಿ ಅಮೂಲ್ಯ ಎಂಟ್ರಿ
ವಿಜಯ್ ದೇವರಕೊಂಡ ನಟನೆಯ ಕಿಂಗ್‌ಡಮ್ ಸಿನಿಮಾ ಬಿಡುಗಡೆ ಆಗಿದೆ. ರಾಷ್ಟ್ರಪ್ರಶಸ್ತಿ ವಿಜೇತ ‘ಜೆರ್ಸಿ’ ಸಿನಿಮಾ ನಿರ್ದೇಶಿಸಿದ್ದ ಗೌತಮ್ ತಿನರೂರಿ ಈ ಸಿನಿಮಾ ನಿರ್ದೇಶನ ಮಾಡಿದ್ದರು. ಭಾರಿ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದ ಈ ಸಿನಿಮಾಗೆ ಮೊದಲ ದಿನವೇ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಿನಿಮಾದಲ್ಲಿ ವಿಜಯ್ ದೇವರಕೊಂಡ ವಿರಾಟ್ ರೂಪ ನೋಡಿ ವೀಕ್ಷಕರು ಥ್ರಿಲ್ ಆಗಿದ್ದಾರೆ. ಲವ್, ರೋಮ್ಯಾನ್ಸ್‌ನಲ್ಲಿ ಫ್ಯಾನ್ಸ್ ಮನಗೆದ್ದಿರುವ ವಿಜಯ್ ದೇವರಕೊಂಡ ಈ ಸಿನಿಮಾದಲ್ಲಿ ಡಿಫರೆಂಟ್ ಲುಕ್‌ನಲ್ಲಿ ಅಭಿಮಾನಿಗಳೆದುರು ಬಂದಿದ್ದಾರೆ. ಭಾಗ್ಯಶ್ರೀ ಬೋರ್ಸೆ ಈ ಸಿನಿಮಾದ ನಾಯಕಿ.
ವಿಜಯ್ ದೇವರಕೊಂಡ ಎಂಟ್ರಿ ಸರಳವಾಗಿ ಕಂಡರು ಕತೆ ಮುಂದುವರೆದಂತೆ ನಾಯಕನ ವಿರಾಟ್ ರೂಪ ಪ್ರೇಕ್ಷಕರಿಗೆ ಎದುರಾಗುತ್ತದೆ. ಪೊಲೀಸ್ ಕಾನ್ಸ್ಟೇಬಲ್ ಆಗಿ ಪ್ರೇಕ್ಷಕರಿಗೆ ಪರಿಚಯವಾಗುವ ನಾಯಕ ನಂತರ ಸ್ಪೈ ಆಗಿ ರೂಪುಗೊಳ್ಳುತ್ತಾನೆ. ಅದರ ಹಿಂದೆ ಬಲವಾದ ಕಾರಣವಿದೆ.
ಸೂರಿ (ವಿಜಯ್ ದೇವರಕೊಂಡ) ಒಬ್ಬ ಕಾನ್ಸ್‌ಟೇಬಲ್. ಅಣ್ಣ ಶಿವ (ಸತ್ಯದೇವ್) ಚಿಕ್ಕವನಿದ್ದಾಗ ತಂದೆಯನ್ನು ಕೊಂದು ಮನೆಯಿಂದ ಓಡಿಹೋಗುತ್ತಾನೆ. ಅಣ್ಣನಿಗಾಗಿ 18 ವರ್ಷಗಳಿಂದ ಹುಡುಕುತ್ತಿರುತ್ತಾನೆ ಸೂರಿ. ಅಣ್ಣ ದೊಡ್ಡವರಾದ ಮೇಲೆ ಹೇಗಿರುತ್ತಾರೆ ಎಂದು ಚಿತ್ರ ಬಿಡಿಸಲು ಕಮಿಷನರ್ ಕಚೇರಿಗೆ ಹೋದಾಗ, ಅಲ್ಲಿ ನಕ್ಸಲೈಟ್‌ನನ್ನು ಬಂಧಿಸಿ, ಅವನ ತಂದೆಯನ್ನು ಪೊಲೀಸರು ಹೊಡೆಯುತ್ತಿರುತ್ತಾರೆ. ವೃದ್ಧರನ್ನು ರಕ್ಷಿಸುವಾಗ ಪೊಲೀಸರನ್ನು ಹೊಡೆಯುತ್ತಾನೆ ಸೂರಿ. ನಕ್ಸಲೈಟ್ ತಪ್ಪಿಸಿಕೊಳ್ಳುತ್ತಾನೆ. ಹೀಗಾಗಿ ಸೂರಿಯನ್ನು ಅಮಾನತು ಮಾಡಲು ಮೇಲಧಿಕಾರಿಗಳು ಒತ್ತಡ ಹೇರುತ್ತಾರೆ. ಆದರೆ ದೊಡ್ಡ ಅಧಿಕಾರಿಗೆ ಸೂರಿ ಹೇಳಿದ ಉತ್ತರ ಇಷ್ಟವಾಗುತ್ತದೆ. ಅವರ ತರ್ಕ, ವಿಚಾರಣೆ ಇಷ್ಟಪಟ್ಟು ಗೂಢಚಾರನ ತರಬೇತಿ ನೀಡುತ್ತಾರೆ. ಶ್ರೀಲಂಕಾದಲ್ಲಿ ಮಾಫಿಯಾವನ್ನು ಹಿಡಿಯುವ ಜವಾಬ್ದಾರಿಯನ್ನು ನೀಡುತ್ತಾರೆ. ಅಲ್ಲಿನ ಬುಡಕಟ್ಟು ಜನಾಂಗದ ನಾಯಕನನ್ನು ಹಿಡಿಯಲು ಹೇಳುತ್ತಾರೆ. ಆ ಬುಡಕಟ್ಟು ನಾಯಕ ಶಿವ. ಇವರೆಲ್ಲರೂ ಸ್ಥಳೀಯ ಚಿನ್ನ ಕಳ್ಳಸಾಗಣೆದಾರರ ಅಡಿಯಲ್ಲಿ ಕೆಲಸ ಮಾಡುತ್ತಿರುತ್ತಾರೆ. ಅಣ್ಣನನ್ನು ಭೇಟಿಯಾಗುವ ಅವಕಾಶವಿದೆ ಎಂದು ಹೇಳಿದಾಗ ಸೂರಿ ಒಪ್ಪುತ್ತಾನೆ. ಶ್ರೀಲಂಕಾಕ್ಕೆ ಹೋದ ಸೂರಿ ಜೈಲಿನಲ್ಲಿ ಅಣ್ಣ ಶಿವನನ್ನು ಭೇಟಿಯಾಗುತ್ತಾನೆ. ಹೀಗೆ ಅವರ ಬುಡಕಟ್ಟಿನಲ್ಲಿ ಒಬ್ಬರಾಗಿ ಉಳಿಯುತ್ತಾನೆ. ಅಣ್ಣನನ್ನು ಬದಲಾಯಿಸಿ ಭಾರತಕ್ಕೆ ಕರೆದೊಯ್ಯಲು ಯೋಜನೆ ರೂಪಿಸುತ್ತಾನೆ. ಅದೇ ಸಮಯದಲ್ಲಿ ಪೊಲೀಸರಿಗೆ ಮಾಹಿತಿದಾರನಾಗಿಯೂ ಕೆಲಸ ಮಾಡುತ್ತಾನೆ. ಒಮ್ಮೆ ಚಿನ್ನ ತರುವಾಗ ಪೊಲೀಸರು ಬೆನ್ನಟ್ಟುತ್ತಾರೆ. ತಮ್ಮಲ್ಲಿ ಯಾರೋ ಮಾಹಿತಿದಾರರಿದ್ದಾರೆ ಎಂದು ಮುರುಗನ್ (ವೆಂಕಟೇಶ್ ವೈಪಿ) ತಂಡಕ್ಕೆ ತಿಳಿಯುತ್ತದೆ. ಹಾಗಾದರೆ ಆ ಮಾಹಿತಿದಾರ ಯಾರು? ಸೂರಿಗಾಗಿ ಅಣ್ಣ ಶಿವ ಮಾಡಿದ ತ್ಯಾಗ ಏನು? ಭಾರತದಿಂದ ಓಡಿಹೋದ ಆ ಬುಡಕಟ್ಟು ಜನಾಂಗದ ನಾಯಕ ಯಾರು? ಅವರು ಭಾರತದಿಂದ ಏಕೆ ಓಡಿಹೋದರು? 70 ವರ್ಷಗಳ (1920) ಹಿಂದೆ ಏನಾಯಿತು? ಅದಕ್ಕೂ ಇದಕ್ಕೂ ಏನು ಸಂಬಂಧ? ಅನ್ನೋದು ಸಿನಿಮಾ ಕಥೆ.
ಆಕ್ಷನ್ ದೃಶ್ಯಗಳು ಅದ್ಭುತವಾಗಿವೆ. ಆಕ್ಷನ್ ಜೊತೆಗೆ ಭಾವುಕತೆಯೂ ಬೆರೆಸಿದ್ದಾರೆ ನಿರ್ದೇಶಕ. ಸಿನಿಮಾಟೊಗ್ರಫಿ ಅದ್ಭುತವಾಗಿದೆ. ಅದ್ಬುತ ಲೊಕೇಶನ್ ಗಳಲ್ಲಿ ಶೂಟಿಂಗ್ ಮಾಡಲಾಗಿದೆ. ಸಾಮಾನ್ಯ ಕಮರ್ಶಿಯಲ್ ಸಿನಿಮಾಗಳಿಗಿಂತ ಭಿನ್ನವಾಗಿ ಸಿನಿಮಾ ಕಟ್ಟಲಾಗಿದೆ. ಮೊದಲಾರ್ಧದಲ್ಲಿ ಬರುವ ಹಾಡುಗಳು ಚೆನ್ನಾಗಿದೆ.
“ಕಿಂಗ್‌ಡಮ್ ಸಿನಿಮಾ ನನಗೆ ಆವರೇಜ್ ಸಿನಿಮಾ ಅಂತ ಅನಿಸಿತು. ವಿಜಯ್ ದೇವರಕೊಂಡ ಚೆನ್ನಾಗಿ ನಟಿಸಿದ್ದಾರೆ. ಅದ್ಭುತವಾಗಿ ತೆರೆಮೇಲೆ ಕಾಣಿಸಿಕೊಂಡರೂ ಕ್ರೇಜಿ ಎನ್ನುವಂತಹದ್ದನ್ನು ಏನೂ ನಿರೀಕ್ಷಿಸುವುದಕ್ಕೆ ಆಗುವುದಿಲ್ಲ. ಎಂದು ಅಭಿಮಾನಿಯೊಬ್ಬರು ಪೋಸ್ಟ್ ಶೇರ್ ಮಾಡಿಕೊಂಡಿದ್ದಾರೆ.
“ದ್ವಿತಿಯಾರ್ಧದಲ್ಲಿ ಬೋಟ್ ಸೀನ್ ಬೆಂಕಿಯಾಗಿದೆ. ವಿಜಯ್ ದೇವರಕೊಂಡ ಪರ್ಫಾಮೆನ್ಸ್ ಅಂತೂ ಮ್ಯಾಡ್‌ನೆಸ್‌ನಿಂದ ಕೂಡಿದೆ. ಕ್ಯಾಮರಾಮ್ಯಾನ್ ಅಂತೂ ಅತ್ಯದ್ಬುತ. ಅನಿರುದ್ಧ್ ಈ ಸಿನಿಮಾವನ್ನು ವೈಯಕ್ತಿಕವಾಗಿ ತೆಗೆದುಕೊಂಡಿದ್ದು, ಬಿರುಗಾಳಿಯನ್ನೇ ಎಬ್ಬಿಸಿದ್ದಾರೆ. ಎರಡೂ ತೆಲುಗು ರಾಜ್ಯಗಳಲ್ಲಿ ಧಗೆ ಹೊತ್ತಿಸೋದು ಕನ್ಫರ್ಮ್” ಎಂದು ಮತ್ತೊಬ್ಬರು ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಹೀಗೆ ಅಭಿಮಾನಿಗಳು ವಿಭಿನ್ನ ರೀತಿಯಲ್ಲಿ ಸಿನಿಮಾ ನೋಡಿ ಪ್ರತಿಕ್ರಿಯೆ ನೀಡುತ್ತಿದ್ದಾರೆ.

ನೋಡಿರಿ

