ರಿಷಬ್ ಪಂತ್‌ಗೆ ಕೋಟಿ ನಾಮ – ನಕಲಿ ಕ್ರಿಕೆಟರ್ ಮೋಸದಾಟ ಹೇಗಿತ್ತು ಗೊತ್ತಾ?
ನಮ್ಮ ಕೆಲ ಕ್ರಿಕೆಟಿಗರಿಗೆ ಎಷ್ಟೇ ಹಣ ಇದ್ದರೂ ಕೂಡ ಸಾಕಾಗುವುದಿಲ್ಲ. ಬಿಸಿಸಿಐನಿಂದ, ಐಪಿಎಲ್ನಿಂದ ಸಿಗೋದು ಬಿಡಿ ಅಡ್ವಟೈಸ್ಮೆಂಟ್ಗಳಿಂದ ಕೋಟಿ ಕೋಟಿ ರೂಪಾಯಿ ಜೇಬಿಗಿಳಿಸಿಕೊಳ್ತಾರೆ. ಇಷ್ಟಾದ್ರೂ ನಮ್ಮ ಕೆಲ ಕ್ರಿಕೆಟರ್ಸ್ಗಳಿಗೆ ಹಣ ಸಾಕಾಗೋದಿಲ್ಲ. ಹೀಗಾಗಿ ಇನ್ಯಾವುದೋ ಮಾರ್ಗಗಗಳಲ್ಲಿ ಹಣ ಮಾಡೋಕೆ ನೋಡ್ತಾರೆ. ಹೀಗೆ ಕಾಸು ಮಾಡೋಕೆ ಹೋಗಿ ಕೊನೆಗೆ ಮೋಸ ಹೋಗ್ತಾರೆ. ಈಗ ಆಗಿರೋದು ಕೂಡ ಇದೇ. ಟೀಂ ಇಂಡಿಯಾದ ಪ್ಲೇಯರ್ ರಿಷಬ್ ಪಂತ್ ಮೋಸದಾಟದ ಬಲೆಗೆ ಬಿದ್ದು ಹಣ ಕಳ್ಕೊಂಡು ನಾಮ ಎಳೆಸ್ಕೊಂಡಿದ್ದಾರೆ. ಈ ಎಪಿಸೋಡ್ನಲ್ಲಿ ರಿಷಬ್ ಪಂತ್ ಯಾವ ರೀತಿ ಮೋಸ ಹೋದ್ರು? ಟೀಂ ಇಂಡಿಯಾ ಕ್ರಿಕೆಟಿಗನಿಗೆ ಪಂಗನಾಮ ಹಾಕಿದ್ದು ಯಾರು? ಈ ಹಿಂದೆ ಯಾವೆಲ್ಲಾ ಕ್ರಿಕೆಟಿಗರು ಈ ರೀತಿ ಚೀಟಿಂಗ್ಗೆ ಒಳಗಾಗಿದ್ದಾರೆ ಅನ್ನೋ ಬಗ್ಗೆ ವಿವರ ಇಲ್ಲಿದೆ.
ಇದನ್ನೂ ಓದಿ: ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಭಾರತಕ್ಕೆ ಹೀನಾಯ ಸೋಲು – ರೋಹಿತ್ ಶರ್ಮಾ ಲೆಕ್ಕಾಚಾರ ಫೇಲ್?
ಮ್ರಣಾಂಕ್ ಸಿಂಗ್.. 25 ವರ್ಷದ ಈ ಯಂಗ್ ಮ್ಯಾನ್ ಹರಿಯಾಣ ಪರ ಅಂಡರ್-19 ಟೀಮ್ನಲ್ಲಿ ಆಡಿದ್ದ. ಒಂದು ಕಾಲದಲ್ಲಿ ಕ್ರಿಕೆಟರ್ ಆಗಿದ್ದ ಮ್ರಣಾಂಕ್ ಸಿಂಗ್ ಈಗ ಮೋಸದಾಟಗಾರ. ಹೈಫೈ ರೆಸ್ಟೋರೆಂಟ್ಗಳಲ್ಲಿ, ಫೈವ್ ಸ್ಟಾರ್ ಹೋಟೆಲ್ಗಳಲ್ಲಿ ಕಾಲ ಕಳ್ಕೊಂಡು ಫುಲ್ ಬಿಂದಾಸ್ ಆಗಿ ಲೈಫ್ ಲೀಡ್ ಮಾಡ್ತಿದ್ದ. ಲಕ್ಸೂರಿಯಸ್ ಲೈಫ್ ಈತನ ಖಯಾಲಿ. ಈ ಅತಿಬುದ್ಧಿವಂತ ತಾನು ಉಳಿದುಕೊಂಡಿದ್ದ ಫೈವ್ ಸ್ಟಾರ್ ಹೋಟೆಲ್ ಮತ್ತು ರೆಸಾರ್ಟ್ಗಳ ಮಾಲೀಕರನ್ನ ಮಂಗ ಮಾಡೋದ್ರ ಜೊತೆಗೆ ಕ್ರಿಕೆಟರ್ ರಿಷಬ್ ಪಂತ್ರನ್ನೂ ಖೆಡ್ಡಾಗಿ ಕೆಡವಿದ್ದು. ಅದು ಹೇಗೆ ಅನ್ನೋದೆ ಇಲ್ಲಿರೋ ಅಸಲಿ ಕಹಾನಿ.
ಹರಿಯಾಣ ಅಂಡರ್-19 ಟೀಮ್ನಲ್ಲಿ ಆಡಿದ್ದು ಬಿಟ್ರೆ ಕ್ರಿಕೆಟರ್ ಆಗಿ ಮ್ರಣಾಂಕ್ ಸಿಂಗ್ ಮಾಡಿರೋ ಸಾಧನೆ ಏನೂ ಇಲ್ಲ. ಯಾವಾಗ ಕ್ರಿಕೆಟ್ನಲ್ಲಿ ಕೆರಿಯರ್ ಕಟ್ಟಿಕೊಳ್ಳೋಕೆ ಆಗಿಲ್ವೋ ಈತ ಕ್ರಿಕೆಟರ್ ಸೋಗಿನಲ್ಲೇ ಹೊಸ ದಂಧೆಗೆ ಇಳಿದುಬಿಡ್ತಾನೆ. ತಾನೊಬ್ಬ ಐಪಿಎಲ್ ಕ್ರಿಕೆಟರ್. 2014-2018ರವರೆಗೆ ಮುಂಬೈ ಇಂಡಿಯನ್ಸ್ ಪರ ಆಡಿದ್ದೇನೆ ಅಂತಾ ರೈಲು ಬಿಟ್ಟು ಬಿಲ್ಡಪ್ ತಗೊಂಡು ತನ್ನನ್ನ ತಾನು ಸೆಲೆಬ್ರಿಟಿ ಮಾಡಿಕೊಂಡಿದ್ದ. ಇದನ್ನೇ ಬಂಡವಾಳ ಮಾಡಿಕೊಂಡು ಮಹಿಳೆಯರನ್ನ ವಂಚಿಸೋಕೆ ಶುರು ಮಾಡ್ತಾನೆ. ಎಕ್ಸ್ಪೆನ್ಸಿವ್ ರೆಸ್ಟೋರೆಂಟ್ಗಳಲ್ಲಿ ಗರ್ಲ್ಫ್ರೆಂಡ್ಸ್ ಜೊತೆ ಡಿನ್ನರ್ ಪಾರ್ಟಿ ಮಾಡ್ತಿರ್ತಾನೆ. ಅದು ಕೂಡ ಒಂದೇ ಒಂದು ರೂಪಾಯಿ ಬಿಲ್ ಕೊಡದೆ. ಈತ ಎಷ್ಟರ ಮಟ್ಟಿಗೆ ಇನ್ಫ್ಲ್ಯುಯೆನ್ಸ್ ಮಾಡಿದ್ದ ಅಂದ್ರೆ, 2022ರಲ್ಲಿ ದೆಹಲಿಯಲ್ಲಿರೋ ಫೈವ್ಸ್ಟಾರ್ ತಾಜ್ ಪ್ಯಾಲೆಸ್ ಹೋಟೆಲ್ನಲ್ಲಿ ಒಂದು ವಾರಗಳ ಕಾಲ ನಯಾಪೈಸೆ ನೀಡದೆ ಸ್ಟೇಯಾಗಿದ್ದ. ಒಂದು ವಾರಕ್ಕೆ 5.53 ಲಕ್ಷ ಬಿಲ್ ಆಗಿದ್ರೂ ಒಂದು ರೂಪಾಯಿನೂ ನೀಡದೆ ಐಷಾರಾಮಿ ಹೋಟೆಲ್ನಲ್ಲೇ ಟೈಮ್ಪಾಸ್ ಮಾಡಿ ಜಾಗ ಖಾಲಿ ಮಾಡಿದ್ದ. ಅಷ್ಟೇ ಅಲ್ಲ, ಹೋಗೋವಾಗ ಹೋಟೆಲ್ ಸ್ಟಾಫ್ ಮೆಂಬರ್ಸ್ ಬಳಿ ನಾನೊಬ್ಬ ಕ್ರಿಕೆಟರ್. ಹೀಗಾಗಿ ಅಡಿಡಾಸ್ ಕಂಪನಿ ಸ್ಪಾನ್ಸರ್ಶಿಪ್ನಲ್ಲಿ ಈ ಹೋಟೆಲ್ನಲ್ಲಿ ಸ್ಟೇಯಾಗಿದ್ದೆ. ಅಡಿಡಾಸ್ನವರೇ 5.53 ಲಕ್ಷ ಬಿಲ್ ಪೇ ಮಾಡ್ತಾರೆ ಅಂತಾ ಹೇಳಿದ್ದ. ಆತನ ಮಾತು ನಂಬಿ ಹೋಟೆಲ್ ಸ್ಟಾಫ್ ಮೆಂಬರ್ ಕೂಡ ತಾಜ್ ಪ್ಯಾಲೆಸ್ನ ಬ್ಯಾಂಕ್ ಅಕೌಂಟ್ ನಂಬರ್ನ್ನ ಶೇರ್ ಮಾಡಿದ್ರು. ಬಳಿಕ ಸುಮಾರು 2 ಲಕ್ಷ ರೂಪಾಯಿ ಪೇಮೆಂಟ್ ಆಗಿರೋ ಫೇಕ್ ಐಡಿಯನ್ನ ಮ್ರಣಾಂಕ್ ಸಿಂಗ್ ಹೋಟೆಲ್ ಸ್ಟಾಫ್ಗೆ ಶೇರ್ ಮಾಡಿದ್ದ. ಬಾಕಿ ಉಳಿದಿರೋ 3 ಲಕ್ಷ ರೂಪಾಯಿ ಪಾವತಿಸುವಂತೆ ಹೋಟೆಲ್ ಸಿಬ್ಬಂದಿ ಆತನನ್ನ ಕಾಂಟ್ಯಾಕ್ಟ್ ಮಾಡೋಕೆ ಯತ್ನಿಸಿದ್ರೂ ಖದೀಮ ಕಾಂಟ್ಯಾಕ್ಟ್ಗೇ ಸಿಕ್ಕಿಲ್ಲ.
ಇದು ಮ್ರಣಾಂಕ್ ಸಿಂಗ್ ಫೈವ್ಸ್ಟಾರ್ ಹೋಟೆಲ್ಗೆ ಪಂಗನಾಮ ಹಾಕಿದ ಕಥೆಯಾಯ್ತು. ಆದ್ರೆ ಆತನ ಮೋಸದಾಟ ಇಷ್ಟಕ್ಕೇ ಸೀಮಿತವಾಗಿಲ್ಲ. ಈ ನಕಲಿ ಕ್ರಿಕೆಟರ್ ತನ್ನ ಅಸಲಿ ಆಟ ಆಡಿರೋದು ರಿಷಬ್ ಪಂತ್ ಜೊತೆಗೆ. ಒಬ್ಬ ಇಂಟರ್ನ್ಯಾಷನಲ್ ಲೆವೆಲ್ ಕ್ರಿಕೆಟರ್ಗೆ ಖೆಡ್ಡಾ ತೋಡಿದ್ದಾನೆ ಅಂದ್ರೆ ಈತ ಎಂಥಾ ಖತರ್ನಾಕ್ ಆಗಿರ್ಬೇಡ. 2020-2021ರ ಅವಧಿಯಲ್ಲಿ ರಿಷಬ್ ಪಂತ್‌ಗೆ ಬರೋಬ್ಬರಿ 1.63 ಕೋಟಿ ರೂಪಾಯಿ ವಂಚಿಸಿದ್ದಾನೆ. ಐಷಾರಾಮಿ ಹೋಟೆಲ್ನಲ್ಲಿ ರಿಷಬ್ ಪಂತ್ ಭೇಟಿಯಾಗಿದ್ದಾಗ ಲಕ್ಸೂರಿ ಐಟಮ್ಗೆ ಸಂಬಂಧಿಸಿ ಹೊಸ ಬ್ಯುಸಿನೆಸ್ ಆರಂಭಿಸ್ತಾ ಇದ್ದೇನೆ. ರೀಸನೇಬಲ್ ಪ್ರೈಸ್ಗೆ ಲಕ್ಸೂರಿ ಐಟಂಗಳನ್ನ ನೀಡೋದಾಗಿ ರಿಷಬ್ ಪಂತ್ರನ್ನ ನಂಬಿಸಿದ್ದ. ಹೀಗಾಗಿ ರಿಷಬ್ ಪಂತ್ ನಂಗೆ ಎಕ್ಸ್ಪೆನ್ಸಿವ್ ವಾಚ್ಗಳ ಜೊತೆಗೆ ಇನ್ನೊಂದಷ್ಟು ಲಕ್ಸೂರಿ ಐಟಂಗಳು ಬೇಕು ಅಂತಾ ಮ್ರಿಣಾಂಕ್ ಸಿಂಗ್ಗೆ ಒಂದಷ್ಟು ಹಣ ಕೂಡ ಟ್ರಾನ್ಸ್ಫರ್ ಮಾಡಿದ್ರು. ಅಷ್ಟೇ ಅಲ್ಲ, ತಮ್ಮ ಬಳಿ ಇದ್ದ ಜ್ಯುವೆಲ್ಲರಿ ಸೇರಿದಂತೆ ಇನ್ನೂ ಕೆಲ ಲಕ್ಸೂರಿ ಐಟಂಗಳನ್ನ ಹೆಚ್ಚಿಣ ಹಣಕ್ಕೆ ರೀಸೆಲ್ ಮಾಡಬಹುದು ಅಂತಾ ವಂಚಕನ ಕೈಗೆ ಕೊಟ್ಟಿದ್ರು. ಆದ್ರೆ ಮ್ರಣಾಂಕ್ ಸಿಂಗ್ ಕಡೆಯಿಂದ ಬಳಿಕ ಯಾವುದೇ ರೆಸ್ಪಾನ್ಸ್ ಬರಲಿಲ್ಲ. ಯಾವ ಲಕ್ಸೂರಿ ಐಟಂ ಕೂಡ ಸಿಗಲಿಲ್ಲ. ರೀಸೆಲ್ಗೆ ಕೊಟ್ಟ ವಸ್ತುವಿನ ಹಣವೂ ಬರಲಿಲ್ಲ. ಹೀಗಾಗಿ ರಿಷಬ್ ಪಂತ್ ಲೀಗಲ್ ನೋಟಿಸ್ ಕಳಿಸ್ತಾರೆ. ಆಗ ಇಬ್ಬರೂ 1.63 ಕೋಟಿ ರೂಪಾಯಿ ಮ್ಯೂಚ್ಯುವೆಲ್ ಸೆಟ್ಲ್ಮೆಂಟ್ಗೆ ಮುಂದಾಗ್ತಾರೆ. ಇದಕ್ಕಾಗಿ ಮ್ರಿಣಾಂಕ್ 1.63 ಕೋಟಿ ರೂಪಾಯಿ ಮೊತ್ತದ ಚೆಕ್ ನೀಡ್ತಾನೆ. ರಿಷಬ್ ಪಂತ್ ಬ್ಯಾಂಕ್ಗೆ ತೆರಳಿ ಚೆಕ್ ಕೊಟ್ಟು ಕ್ಯಾಶ್ ಪಡೆಯೋಕೆ ಮುಂದಾದಾಗ ಇನ್ಸಫೀಶಿಯಂಟ್ ಫಂಡ್ನಿಂದಾಗಿ ಚೆಕ್ ಬೌನ್ಸ್ ಆಗಿದೆ ಅನ್ನೋದು ಗೊತ್ತಾಗುತ್ತೆ. ಅಂತೂ ರಿಷಬ್ ಪಂತ್‌ಗೆ 1.63 ಕೋಟಿ ರೂಪಾಯಿ ಚೆಕ್ ಕೊಟ್ಟು ಎಸ್ಕೇಪ್ ಆಗಿದ್ದ. ರಿಷಬ್ ಪಂತ್ ಮಾತ್ರವಲ್ಲ ಇನ್ನೂ ಹಲವರಿಗೆ ಇದೇ ರೀತಿ ವಂಚನೆ ಮಾಡಿದ್ದಾನೆ. ಕ್ಯಾಬ್ ಡ್ರೈವರ್ಗಳು, ಮಹಿಳೆಯರಿಂದಲೂ ಲಕ್ಷ ಲಕ್ಷ ರೂಪಾಯಿ ಪೀಕಿದ್ದಾನೆ. ಕೇವಲ ಕ್ರಿಕೆಟರ್ ಅಂತಷ್ಟೇ ಅಲ್ಲ, ಕರ್ನಾಟಕದ ಸೀನಿಯರ್ ಪೊಲೀಸ್ ಆಫೀಸರ್ ಅಂತಾನೂ ಹೇಳ್ಕೊಂಡು ದಂಧೆ ನಡೆಸಿದ್ದಾನೆ. ಕಳೆದ ಒಂದು ವರ್ಷದಿಂದಲೂ ಪೊಲೀಸರು ಈತನ ಬೆನ್ನು ಬಿದ್ದಿದ್ರು. ಆದ್ರೆ ತನ್ನ ಫೋನ್ನನ್ನ ಸ್ವಿಚ್ ಆಫ್ ಮಾಡಿಕೊಂಡಿದ್ದ. ತಾನು ದುಬೈನಲ್ಲಿರೋದಾಗಿ ಸ್ನೇಹಿತರು, ಸಂಬಂಧಿಕರನ್ನ ನಂಬಿಸಿದ್ದ. ಮ್ರಿಣಾಂಕ್ ಸಿಂಗ್ ವಿರುದ್ಧ ಲುಕ್ಔಟ್ ನೋಟಿಸ್ ನೀಡಲಾಗಿತ್ತು. ಆದ್ರೆ ಡಿಸೆಂಬರ್ 25ರಂದು ದೆಹಲಿಯಿಂದ ಹಾಂಗ್ಕಾಂಗ್ಗೆ ಎಸ್ಕೇಪ್ ಆಗೋಕೆ ಯತ್ನಿಸಿದಾಗ ದೆಹಲಿ ಏರ್ಪೋರ್ಟ್ನ ವಲಸೆ ಅಧಿಕಾರಿಗಳು ಮ್ರಣಾಂಕ್ ಸಿಂಗ್ನನ್ನ ವಶಕ್ಕೆ ಪಡೆದಿದ್ದಾರೆ.
ಅರೆಸ್ಟ್ ಆದ ಬಳಿಕ ಕೂಡ ಈತನ ಕಳ್ಳಾಟ ಮಾತ್ರ ನಿಂತಿಲ್ಲ. ವಿಚಾರಣೆ ವೇಳೆ ಪೊಲೀಸರನ್ನ ಕೂಡ ಯಾಮಾರಿಸೋಕೆ ನೋಡಿದ್ದಾನೆ. ನನ್ನ ತಂದೆ ಅಶೋಕ್ ಕುಮಾರ್ ಸಿಂಗ್ 80ರ ದಶಕದಲ್ಲಿ ಭಾರತೀಯ ಕ್ರಿಕೆಟ್ ತಂಡದ ಪರ ಆಡಿದ್ದಾರೆ. ಸದ್ಯ ಏರ್ಇಂಡಿಯಾದಲ್ಲಿ ಮ್ಯಾನೇಜರ್ ಆಗಿದ್ದಾರೆ. ದೆಹಲಿಯ ಇಂದಿರಾ ಗಾಂಧಿ ಇಂಟರ್ನ್ಯಾಷನಲ್ ಏರ್ಪೋರ್ಟ್ನಲ್ಲಿ ಕೆಲಸ ಮಾಡ್ತಾ ಇದ್ದಾರೆ ಅಂತಾ ಮ್ರಣಾಂಕ್ ಸಿಂಗ್ ಪೊಲೀಸರ ಬಳಿಯೂ ಕತೆ ಬಿಟ್ಟಿದ್ದಾನೆ. ಅಂತೂ ಸದ್ಯ ಈ ಕಿರಾತಕ ಪೊಲೀಸರ ವಶದಲ್ಲಿದ್ದು, ಈಗ ರಿಷಬ್ ಪಂತ್ 1.63 ಕೋಟಿ ರೂಪಾಯಿಗೆ ಕಾಯ್ತಾ ಇದ್ದಾರೆ. ಹೀಗಾಗಿ ಕ್ರಿಕರ್ಸ್ಗಳಾಗಲಿ, ಸಿನಿಮಾ ಸ್ಟಾರ್ಸ್ ಆಗಲಿ, ಹಣದಾಸೆಗೆ ಬಿದ್ದು ಈ ರೀತಿ ಮೋಸ ಹೋಗಂದಂತೆ ಎಚ್ಚರಿಕೆ ವಹಿಸಲೇಬೇಕು. ಇಲ್ಲವಾದಲ್ಲಿ ಕೋಟಿ ಕೋಟಿ ನಾಮ ಹಾಕಿಸಿಕೊಳ್ಳೋದು ಗ್ಯಾರಂಟಿ.