ಬಾಲಕ ‘ಸಿದ್ದಗೊಂಡ’.. ‘ಶತಮಾನದ ಸಂತ’ನಾಗಿದ್ದು ಹೇಗೆ?

ಬಾಲಕ ‘ಸಿದ್ದಗೊಂಡ’.. ‘ಶತಮಾನದ ಸಂತ’ನಾಗಿದ್ದು ಹೇಗೆ?

ವಿಜಯಪುರ: ಸಿದ್ದಗೊಂಡ ಎಂಬ ಸೌಮ್ಯ ಸ್ವಭಾವದ ಬಾಲಕ ಸಿದ್ದೇಶ್ವರ ಶ್ರೀ ಆಗಿ, ನಾಡು ಕಂಡ ಅಪರೂಪದ ಸಂತನಾಗಿ ಬೆಳೆದು ಬಂದ ದಾರಿಯೇ ಅತ್ಯದ್ಭುತ. 1940, ಸೆಪ್ಟೆಂಬರ್ 5ರಂದು ವಿಜಯಪುರ ಜಿಲ್ಲೆಯ ತಾಳ ಬಿಜ್ಜರಗಿಯಲ್ಲಿ ಮಹಾಮಹಿಮೆಯುಳ್ಳ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರ ಜನನವಾಗಿತ್ತು. ಕೃಷಿಕರಾದ ಓಗೆಪ್ಪ ಗೌಡ ಬಿರಾದಾರ ಮತ್ತು ಸಂಗವ್ವ ದಂಪತಿಯ ಆರು ಜನ ಮಕ್ಕಳಲ್ಲಿ ಹಿರಿಯ ಪುತ್ರನಾಗಿ ಜನಿಸಿದ ಸಿದ್ದಗೊಂಡ ಓಗೆಪ್ಪ ಬಿರಾದಾರ ಬಾಲ್ಯದಿಂದಲೇ ಆಧ್ಯಾತ್ಮದತ್ತ ಒಲವು ಬೆಳೆಸಿಕೊಂಡಿದ್ದರು.  ಬಾಲಕ ಸಿದ್ದಗೊಂಡ ಜಯಪುರ ಜಿಲ್ಲೆಯ ತಿಕೋಟಾ ತಾಲ್ಲೂಕಿನ ಬಿಜ್ಜರಗಿ ಗ್ರಾಮದ ಶಾಲೆಯಲ್ಲಿಯೇ ನಾಲ್ಕನೇ ತರಗತಿವರೆಗೆ ಓದಿದರು. ತನ್ನ ಒಂಬತ್ತನೇ ವಯಸ್ಸಿನಲ್ಲಿ ಬಾಲಕ ಸಿದ್ದಗೊಂಡ ಬಿಜ್ಜರಗಿ ಗ್ರಾಮದ ಹೊರವಲಯದಲ್ಲಿ ಇರುವ ಸನ್ಯಾಸಿ ಮಠದಲ್ಲಿ ಧ್ಯಾನ ಮಾಡುತ್ತಿದ್ದ. ಗುಡ್ಡ ಬೆಟ್ಟದ ಮಧ್ಯೆಯಿರುವ ಹಳ್ಳದ ದಂಡೆಯಲ್ಲಿರುವ ಮಠದಲ್ಲಿ ಬಾಲಕ ಸಿದ್ದಗೊಂಡ ಧ್ಯಾನ ಮಾಡುತ್ತಿದ್ದ. ಅಷ್ಟೇ ಅಲ್ಲ, ಮಠದಲ್ಲಿರುವ ಬಿಳಿ ಬಣ್ಣದ ಈಶ್ವರಲಿಂಗ ಇರುವ ದೇವಸ್ಥಾನದಲ್ಲೂ ಬಾಲಕ ಸಿದ್ದಗೊಂಡ ಧ್ಯಾನ ಮಾಡುತ್ತಿದ್ದ. ಯಾರಿಗೂ ಕಾಣದಂತೆ ದೇವಸ್ಥಾನದ ಬಾಗಿಲಿಗೆ ಕಲ್ಲು ಅಡ್ಡ ನಿಲ್ಲಿಸಿ ಶಿವದ್ಯಾನ ಮಾಡುತ್ತಿದ್ದ ಬಾಲಕ ಸಿದ್ದಗೊಂಡನ ಬಾಲ್ಯವೇ ಅಚ್ಚರಿಯಿಂದ ಕೂಡಿತ್ತು. ಅದೂ ಅಲ್ಲದೇ, ತಂದೆ ತಾಯಿ ಸ್ನೇಹಿತರ ಕಣ್ತಪ್ಪಿಸಿ ಗರ್ಭಗುಡಿಯಲ್ಲಿ ದ್ಯಾನ ಮಾಡುತ್ತಿದ್ದ ಬಾಲಕ ಸಿದ್ದಗೊಂಡ ನಂತರ ಶತಮಾನದ ಸಂತನಾಗಿ ಅಪಾರ ಭಕ್ತರ ಮನದಲ್ಲಿ ನೆಲೆಸಿದ್ದೇ ಅದ್ಭುತ. ಬಿಜ್ಜರಗಿಯ ಸರ್ಕಾರಿ ಗಂಡು ಮಕ್ಕಳ ಪ್ರಾಥಮಿಕ ಶಾಲೆಯಲ್ಲಿ ಏಳನೇ ತರಗತಿಯವರೆಗೆ ಅಭ್ಯಾಸ ಮಾಡಿದ್ದರು. ಬಾಲ್ಯದಲ್ಲಿ ತನ್ನ ಸ್ನೇಹಿತರೊಂದಿಗೆ ಈಜುವುದು, ಸೈಕಲ್ ಓಡಿಸುವುದು ಅಚ್ಚು ಮೆಚ್ಚಾಗಿತ್ತು.

ಇದನ್ನೂ ಓದಿ:  ‘ಶತಮಾನದ ಸಂತ’ ಅಸ್ತಂಗತ – ಭಕ್ತರಿಂದ ಸಿದ್ದೇಶ್ವರ ಶ್ರೀಗಳ ಅಂತಿಮ ದರ್ಶನ

ಬಾಲಕ ಸಿದ್ದಗೊಂಡ ತನ್ನ ನಾಲ್ಕನೇ ತರಗತಿಯ ವಿದ್ಯಾಭ್ಯಾಸ ಮುಗಿಸಿ, ವಿಜಯಪುರದ ಜ್ಞಾನಯೋಗಾಶ್ರಮಕ್ಕೆ ಬಂದರು. ಇಲ್ಲಿ ಗದುಗಿನ ಶಿವಾನಂದ ಶ್ರೀಗಳ ಪರಂಪರೆಯಲ್ಲಿ ಬಂದ ಈ ಆಶ್ರಮದ ಗುರುಗಳಾದ ವೇದಾಂತ ಕೇಸರಿ ಮಲ್ಲಿಕಾರ್ಜುನ ಸ್ವಾಮಿಗಳ ನೆರಳಲ್ಲಿ ವಿದ್ಯಾಬ್ಯಾಸ ಮಾಡಿದರು. 19ನೇ ವಯಸ್ಸಿನಲ್ಲಿ, ಸ್ವಾಮೀಜಿಯವರು ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ತತ್ವ ಶಿರೋಮಣಿ ಪುಸ್ತಕವನ್ನು ಬರೆದರು. ಸಿದ್ದೇಶ್ವರರು ಕರ್ನಾಟಕ ವಿಶ್ವವಿದ್ಯಾನಿಲಯದಿಂದ ಪದವಿ ಪಡೆದ ನಂತರ, ಕೊಲ್ಲಾಪುರ ವಿಶ್ವವಿದ್ಯಾಲಯದಿಂದ ತತ್ವಶಾಸ್ತ್ರದಲ್ಲಿ ಎಂಎ ಪದವಿಯನ್ನು ಮುಗಿಸಿದ್ದರು.

ವಿಜಯಪುರ ಜ್ಞಾನಯೋಗಾಶ್ರಮದ ಸಂಸ್ಥಾಪಕರಾದ ವೇದಾಂತ ಕೇಸರಿ ಮಲ್ಲಿಕಾರ್ಜುನ ಶಿವಯೋಗಿಗಳ ಪ್ರವಚನ ಕೇಳಿ ಆಕರ್ಷಿತರಾಗಿದ್ದ ಸಿದ್ದೇಶ್ವರ ಶ್ರೀಗಳು ಮುಂದೆ ಅದೇ ಆಶ್ರಮದ ಅಧ್ಯಕ್ಷರಾಗಿದ್ದು ವಿಶೇಷವೇ ಸರಿ. ಸದಾಕಾಲ ಶ್ವೇತವಸ್ತ್ರಧಾರಿಯಾಗಿರುತ್ತಿದ್ದ ಶ್ರೀಗಳು, ಎಂದಿಗೂ ಹಣ, ಅಧಿಕಾರ, ಕೀರ್ತಿಗೆ ಆಸೆಪಟ್ಟವರಲ್ಲ. ಕಿಸೆಯಿಲ್ಲದ ಅಂಗಿತೊಟ್ಟ ವೈರಾಗ್ಯ ಮೂರ್ತಿಯಾಗಿದ್ದರು.

ನಡೆದಾಡುವ ದೇವರು ಎಂದೇ ಪ್ರಖ್ಯಾತರಾಗಿದ್ದ ಶ್ರೀ ಸಿದ್ದೇಶ್ವರ ಸ್ವಾಮೀಜಿ ಕರ್ನಾಟಕ ಕಂಡ ಅತ್ಯುತ್ತಮ ಆಧ್ಯಾತ್ಮಿಕ ಚಿಂತಕರು ಮತ್ತು ಪ್ರೇರಕ ಭಾಷಣಕಾರರು. ಅವರ ಭಾಷಣಗಳು ಪ್ರತಿಯೊಬ್ಬರ ಜೀವನದಲ್ಲಿ ಅದ್ಭುತ ರೂಪಾಂತರವನ್ನು ತರುತ್ತಿತ್ತು ಮತ್ತು ಅಂತಿಮವಾಗಿ ಶಾಂತಿಯುತ ಮತ್ತು ಸಂತೋಷದ ಜೀವನಕ್ಕೆ ಕಾರಣವಾಗುತ್ತಿತ್ತು. ದಕ್ಷ ಶಿಕ್ಷಕ, ನಿಜವಾದ ಆಧ್ಯಾತ್ಮಿಕ ಆತ್ಮ, ಮಾನವತಾವಾದಿ ಮತ್ತು ಅನೇಕ ಉಪನ್ಯಾಸಗಳಲ್ಲಿ ವಿದ್ವಾಂಸರಾಗಿದ್ದ ಸಿದ್ದೇಶ್ವರ ಸ್ವಾಮೀಜಿ ಅವರು ಈ ಯುಗ ಕಂಡ ನಡೆದಾಡುವ ದೇವರಾಗಿದ್ದರು.

suddiyaana