ಉಡುಪಿ ಭಟ್ಟರ ಮಗ ಸಿನಿಮಾ ಜಗತ್ತಿಗೆ ಕಾಲಿಟ್ಟಿದ್ದು ಹೇಗೆ? – ಹರೀಶ್ ರಾಯ್ ಬದುಕಿನ ಹಾದಿ ಹೇಗಿತ್ತು ಗೊತ್ತಾ?

ಸ್ಯಾಂಡಲ್‌ವುಡ್‌ನಲ್ಲಿ ಖಳನಟ ಹಾಗೂ ಪೋಷಕ ನಟರಾಗಿ ಖ್ಯಾತಿ ಪಡೆದವರು ಹರೀಶ್ ರಾಯ್. ಎರಡು ದಶಕಗಳಿಗಿಂತಲೂ ಹೆಚ್ಚು ಕಾಲ ಕಲಾವಿದರಾಗಿ ಬಣ್ಣ ಹಚ್ಚಿದ್ದರು. ಆದರೆ, ವಿಧಿಯಾಟ. ಕೇವಲ 55 ವರ್ಷಕ್ಕೆ ಬದುಕಿನ ಯಾತ್ರೆ ಮುಗಿಸಿದ್ದಾರೆ ಹರೀಶ್ ರಾಯ್. ಇವರು 100ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ.
ಇದನ್ನೂ ಓದಿ:ಕೆಜಿಎಫ್ ಚಾಚಾ ಇನ್ನು ನೆನಪು ಮಾತ್ರ – ಖ್ಯಾತ ಖಳನಟ ಹರೀಶ್ ರಾಯ್ ನಿಧನ
ಕನ್ನಡ ಚಿತ್ರರಂಗದಲ್ಲಿ ಕೆಜಿಎಫ್ ಚಾಚಾ ಎಂದೇ ಗುರುತಿಸಿಕೊಂಡಿದ್ದ ಹರೀಶ್ ರಾಯ್ ತೀವ್ರ ಅನಾರೋಗ್ಯದಿಂದ ಕೊನೆಯುಸಿರೆಳೆದಿದ್ದಾರೆ. ಹರೀಶ್ ರಾಯ್ ಅವರ ಬಾಲ್ಯ ಹೇಗಿತ್ತು?. ಚಿತ್ರರಂಗಕ್ಕೆ ಹರೀಶ್ ರಾಯ್ ಕಾಲಿಟ್ಟಿದ್ದು ಹೇಗೆ?, ಎಂಬ ಬಗ್ಗೆ ಹರೀಶ್ ರಾಯ್ ಅವರು ಮಾಧ್ಯಮದ ಸಂದರ್ಶನವೊಂದರಲ್ಲಿ ತನ್ನ ಬಗ್ಗೆ ಹೇಳಿಕೊಂಡಿದ್ದರು.
‘ನಾವು ಉಡುಪಿಯವರು. ನನ್ನ ತಾಯಿ ಕಡೆಯವರು ಚಿನ್ನದ ಅಂಗಡಿ ಹೊಂದಿದ್ದರು. ನಮ್ಮ ತಂದೆಯವರು ದೊಡ್ಡ ಜಮೀನುದಾರರು. ಊಳುವವನೇ ಹೊಲದ ಒಡೆಯ ಎಂಬ ಇಂದಿರಾ ಗಾಂಧಿ ತಂದ ನಿಯಮದಿಂದ ಒಂದಷ್ಟು ತೋಟ ಹೋಯಿತು. ಆದರೂ ಸುಮಾರು ತೋಟ ಹಾಗೆಯೇ ಇತ್ತು. ನನಗೆ ತಾಯಿಯ ಪ್ರೀತಿ ನನಗೆ ಸಿಗಲಿಲ್ಲ. ನಾನು ಬೇರೆಯವರ ಮನೆಯಲ್ಲಿ ಬೆಳೆಯಬೇಕಾದ ಪರಿಸ್ಥಿತಿ ಬಂತು. ಒಂದುವರೆ ವರ್ಷ ಇದ್ದಾಗಲೇ ಬೇರೆಯವರ ಮನೆ ಸೇರಿದೆ. ನಾನು ಒಂದನೇ ತರಗತಿವರೆಗೆ ಬೇರೆಯವರ ಮನೆಯಲ್ಲೇ ಇದ್ದೆ. ನಂತರ ಮತ್ತೆ ಮನೆಗೆ ಬಂದೆ. ನನ್ನ ತಂದೆಗೆ ಕೋಪ ಜಾಸ್ತಿ. ನಾಗರ ಬೆತ್ತ ಎಂಬುದಿತ್ತು. ಅದರಲ್ಲಿ ನನ್ನ ತಂದೆ ಹೊಡೆಯುತ್ತಿದ್ದರು. ತುಂಬಾ ಏಟು ತಿಂದಿದ್ದೇನೆ ಎಂದಿದ್ದರು ಹರೀಶ್ ರಾಯ್.
ನಾನು 10ನೇ ತರಗತಿವರೆಗೆ ಮಾತ್ರ ಓದಿದೆ. ಒಂದು ದಿನ ಶಾಲೆಯಲ್ಲಿ ತಪ್ಪು ಮಾಡಿದೆ. ಅಪ್ಪನ ಕರೆದುಕೊಂಡು ಬನ್ನಿ ಎಂದರು. ಭಯದಿಂದ ಸ್ಕೂಲ್ ಬಿಟ್ಟು ಬಾಂಬೆಗೆ ಓಡಿ ಹೋದೆ. 2 ವರ್ಷ ಅಲ್ಲೇ ಇದ್ದೆ. ಉಡುಪಿಯವರ ಜೊತೆ ಇದ್ದೆ. ನಾನು ಉಡುಪಿ ಭಟ್ಟರ ಮಗ ಅನ್ನೋದು ಗೊತ್ತಾಯ್ತು. ಅವರು ಮರಳಿ ಕಳುಹಿಸಿದರು. ಬಾಂಬೆಯಲ್ಲಿ ನನ್ನ ಮೇಲೆ ಕೆಲವು ಕೇಸ್ಗಳು ಇದ್ದವು. ಕೆಲವು ರೌಡಿಗಳನ್ನು ಎದುರು ಹಾಕಿಕೊಂಡಿದ್ದೆ. ಭೂಗತ ಜಗತ್ತಿನ ಪರಿಚಯವೂ ಆಗಿತ್ತು. ಹೀಗಾಗಿ, 1994ರಲ್ಲಿ ಬೆಂಗಳೂರಿಗೆ ಬಂದೆ ಎಂದು ಹರೀಶ್ ರಾಯ್ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ನನ್ನ ಗೆಳೆಯರೊಬ್ಬರು ಉಪೇಂದ್ರ ಅವರನ್ನು ಪರಿಚಯ ಮಾಡಿದರು. ಆ ಬಳಿಕ ಇಂಡಸ್ಟ್ರಿ ಪರಿಚಯ ಆಯಿತು. ಈ ವೇಳೆ ಓಂ ಸಿನಿಮಾದಲ್ಲಿ ನಟಿಸೋ ಅವಕಾಶ ಸಿಕ್ಕಿತು ಎಂದು ಹರೀಶ್ ರಾಯ್ ತಾನು ಸಿನಿಮಾ ಬದುಕಿಗೆ ಬಂದಿದ್ದು ಹೇಗೆ ಎಂಬ ವಿಚಾರವನ್ನು ವಿವರಿಸಿದ್ದರು.
ಕೆಜಿಎಫ್ ಚಿತ್ರದ ಚಾಚಾ ಅಂತಲೆ ಕರೆಸಿಕೊಳ್ಳುವ ಹರೀಶ್ ರಾಯ್ 100 ಕ್ಕೂ ಹೆಚ್ಚು ಸಿನಿಮಾ ಮಾಡಿದ್ದಾರೆ. ಕನ್ನಡ ಓಂ ಚಿತ್ರದಲ್ಲಿ ಡಾನ್ ಆಗಿ ಕಾಣಿಸಿಕೊಂಡಿದ್ದರು. ದರ್ಶನ್ ಅಭಿನಯದ ಮೆಜೆಸ್ಟಿಕ್ ಚಿತ್ರದಲ್ಲಿ ನಾಗ ಅನ್ನೋ ರೋಲ್ ಮಾಡಿದ್ದಾರೆ. ಸಂಜು ವೆಡ್ಸ್ ಗೀತಾ ಚಿತ್ರದಲ್ಲಿ ಕೈದಿ ರೋಲ್ ಮಾಡಿದ್ದಾರೆ. ರಾಜ್ ಬಹದ್ದೂರ್, ಸಂಜು ವೆಡ್ಸ್ ಗೀತಾ, ಸ್ವಯಂವರ, ಭೂಗತ, ನನ್ನ ಕನಸಿನ ಹೂವೆ ಚಿತ್ರದಲ್ಲೂ ವಿಲನ್ ಆಗಿ ಅಬ್ಬರಿಸಿದ್ದರು.

ನೋಡಿರಿ

