ಚಾಣಕ್ಯ ಸಾವನ್ನಪ್ಪಿದ್ದು ಹೇಗೆ? – ಮಹಾನ್ ವ್ಯಕ್ತಿಯ ಸಾವಿನ ಸತ್ಯ!
ವಿಷ ಕುಡಿದು ಸತ್ರಾ?
![ಚಾಣಕ್ಯ ಸಾವನ್ನಪ್ಪಿದ್ದು ಹೇಗೆ? – ಮಹಾನ್ ವ್ಯಕ್ತಿಯ ಸಾವಿನ ಸತ್ಯ!ವಿಷ ಕುಡಿದು ಸತ್ರಾ?](https://suddiyaana.com/wp-content/uploads/2025/02/57489834.webp)
ಆಚಾರ್ಯ ಚಾಣಕ್ಯನು.. ರಾಜನೀತಿಜ್ಞನಾಗಿ ಮಾತ್ರವಲ್ಲದೆ ಮಹಾನ್ ತತ್ವಜ್ಞಾನಿಯಾಗಿಯೂ ಉತ್ತಮ ಖ್ಯಾತಿಯನ್ನು ಹೊಂದಿದ್ದನು. ಚಾಣಕ್ಯ ನೀತಿ ಹೆಸರಿನಲ್ಲಿ ಅವರ ಬೋಧನೆಗಳು ಇಂದಿಗೂ ಜನರಿಗೆ ಮಾರ್ಗದರ್ಶನ ನೀಡುತ್ತಿವೆ. ಜೀವನವನ್ನು ಹೇಗೆ ಅರ್ಥಮಾಡಿಕೊಳ್ಳಬೇಕು, ಮಾನವರೊಂದಿಗೆ ಹೇಗೆ ವ್ಯವಹರಿಸಬೇಕು ಮತ್ತು ರಾಜ್ಯವನ್ನು ಹೇಗೆ ಆಳಬೇಕು ಎಂಬುದರ ಕುರಿತು ಅವರ ನೀತಿಯು ಉತ್ತಮ ಆಗಿರುತ್ತಿತ್ತು. ಈಗಲು ಸಾಕಷ್ಟು ಜನ ಈ ಚಾಣಕ್ಯನ ನೀತಿಯನ್ನ ಅನುಸರಿಸುತ್ತಾರೆ. ಬೋಧನೆ ಮಾಡುತ್ತಾರೆ. ಇನ್ನು ಆಚಾರ್ಯ ಚಾಣಕ್ಯ ಕ್ರಿಸ್ತಪೂರ್ವ 4ನೇ ಶತಮಾನದಲ್ಲಿ ವಾಸಿಸುತ್ತಿದ್ದ ಒಬ್ಬ ಪ್ರಸಿದ್ಧ ಪ್ರಾಚೀನ ಭಾರತೀಯ ಶಿಕ್ಷಕ, ತತ್ವಜ್ಞಾನಿ ಮತ್ತು ರಾಜಕಾರಣಿ. ಹಾಗಿದ್ರೆ ಈ ಚಾಣಕ್ಯ ಜ್ಞಾನದ ಬಗ್ಗೆ ನೀವು ಕೇಳಿದ್ದೀರಾ. ಆದ್ರೆ ಅವರ ಸಾವು ಹೇಗ್ ಆಯ್ತು ಅನ್ನೋದು ನಿಮ್ಗೆ ಗೊತ್ತಾ.. ಗೊತ್ತಿಲ್ಲ ಅಂದ್ರೆ ಇದನ್ನ ಓದಿ.
ತತ್ವಜ್ಞಾನಿ ಚಾಣಕ್ಯನ ಸಾವಿನ ಬಗ್ಗೆ ಸಾಕಷ್ಟು ಕತೆಗಳಿವೆ. ಕೆಲವರ ಪ್ರಕಾರ ಅವರಿಗೆ ವಯಸ್ಸಾಗಿ ಸಹಜ ಸಾವು ಕಂಡರು ಅಂತ ಹೇಳ್ತಾರೆ. ಇನ್ನು ಕೆಲವರ ಪ್ರಕಾರ ತನ್ನ ಶಿಷ್ಯ ಚಂದ್ರಗುಪ್ತ ಮೌರ್ಯನಂತೆಯೇ ಅವರು ಕೂಡ ಸಲ್ಲೇಖನ ವ್ರತ ತೆಗೆದುಕೊಂಡು ಮರಣವನ್ನಪ್ಪಿದರು ಎನ್ನುತ್ತಾರೆ. ವಿಷ ತೆಗೆದುಕೊಂಡು ಸತ್ತರು ಎಂದು ಕೆಲವು ಇತಿಹಾಸಕಾರರು ಹೇಳಿದರೆ, ಯಾರೋ ವೈರಿಗಳು ವಿಷ ನೀಡಿ ಅವರನ್ನು ಸಾಯಿಸಿದರು ಎಂದು ಕೂಡ ಹೇಳುವವರು ಇದ್ದಾರೆ. ಯಾಕೆಂದರೆ ಚಾಣಕ್ಯರಿಗೆ ಸಾಕಷ್ಟು ಶತ್ರುಗಳಿದ್ದರು. ಹೀಗಾಗಿ ಚಾಣಕ್ಯ ಸಾವಿನ ಬಗ್ಗೆ ಸಾಕಷ್ಟು ಕತೆಗಳು ನಮಗೆ ಸಿಗುತ್ತಾ ಹೋಗುತ್ತೆ..
ಇದನ್ನೂ ಓದಿ: ವಿಶ್ವದ ದೊಡ್ಡ ಸೈನ್ಯ ಯಾವುದು? – USA, ಚೀನಾಗಿಂತ ಈ ದೇಶವೇ ನಂ.1
ಸಾಕಷ್ಟು ಕಥೆಗಳ ನಡುವೆ ಜನಪ್ರಿಯವಾದ ಒಂದು ಕತೆಯಿದೆ. ಚಂದ್ರಗುಪ್ತ ಮೌರ್ಯನನ್ನು ಪಟ್ಟಕ್ಕೇರಿಸಿದ ಬಳಿಕ ಚಂದ್ರಗುಪ್ತನ ಮಂತ್ರಿಯನ್ನಾಗಿಸಿ ಚಾಣಕ್ಯ ವಾನಪ್ರಸ್ಥಕ್ಕೆ ಹೊರಟುಬಿಟ್ಟರು. ಚಾಣಕ್ಯರ ಬಗ್ಗೆ ಅನೇಕರಿಗೆ ಕ್ರೋಧವಿತ್ತು. ಅವರ ಕೆಲವು ಶಿಷ್ಯರು ಕೂಡ ಸೇರಿದಂತೆ ಅವರ ಶಕ್ತಿ ಮತ್ತು ಪ್ರಭಾವದ ಬಗ್ಗೆ ಅಸೂಯೆ ಹೊಂದಿದ್ದರು. ಈ ವಿದ್ಯಾರ್ಥಿಗಳಲ್ಲಿ ಒಬ್ಬನಾದ ಸುಬಂಧು ಚಾಣಕ್ಯರ ಮೇಲೆ ಸೇಡು ತೀರಿಸಿಕೊಳ್ಳಲು ಬಯಸಿದ ಮತ್ತು ಅವರನ್ನು ಕೊಲ್ಲಲು ಸಂಚು ಹೂಡಿದ್ದ.
ಚಾಣಕ್ಯ ನಿಧಿಯನ್ನು ಬಚ್ಚಿಟ್ಟಿದ್ದಾರೆ ಎಂದು ಸುಬಂಧು ತಿಳಿದುಕೊಂಡ. ಈ ನಿಧಿಯನ್ನು ಹುಡುಕುವಂತೆ ಅವನು ರಾಜನಲ್ಲಿ ಕೇಳಿಕೊಂಡ. ಇದರ ನಡುವೆ ಈ ದಂಡಯಾತ್ರೆಯನ್ನು ಮುನ್ನಡೆಸಲು ಚಾಣಕ್ಯರಿಗೆ ಆದೇಶ ನೀಡಲಾಯಿತು. ಈ ನಡುವೆ ಚಾಣಕ್ಯನಿಗೆ ಸುಬಂಧುವಿನ ಪ್ಲ್ಯಾನ್ ಬಗ್ಗೆ ಗೊತ್ತಾಯ್ತು. ಪ್ರಯಾಣದ ಸಮಯದಲ್ಲಿ ಚಾಣಕ್ಯ ಅಸ್ವಸ್ಥನಂತೆ ನಟಿಸಿದ. ತನಗಾಗಿ ಸ್ವಲ್ಪ ಆಹಾರವನ್ನು ತಯಾರಿಸಲು ಕೇಳಿದ.
ಆಗ ಅವರು ನೀಡಿದ ವಿಷಪೂರಿತ ಆಹಾರವನ್ನು ಸೇವಿಸಿದ. ಅದನ್ನ ತಿಂದ್ರೆ ತಾನು ಸಾಯುತ್ತೇನೆ ಅನ್ನೋದು ಚಾಣಕ್ಯನಿಗೆ ಗೊತ್ತಿತ್ತು. ಆದರೆ ಅವನಿಗೆ ತನ್ನ ಜೀವಕ್ಕಿಂತಲೂ ಶಿಷ್ಯನಾದ ಚಂದ್ರಗುಪ್ತನ ಜೀವಿತ ಹಾಗೂ ರಾಜ್ಯದ ಹಿತವೇ ಮುಖ್ಯವಾಗಿತ್ತು. ಹೀಗಾಗಿ ಅವನು ತನ್ನ ಕಾವಲುಗಾರರಿಗೆ ಚಂದ್ರಗುಪ್ತನನ್ನು ರಕ್ಷಿಸಲು ಮತ್ತು ಮೌರ್ಯ ಸಾಮ್ರಾಜ್ಯಕ್ಕೆ ಸಮರ್ಪಣಾಭಾವದಿಂದ ಸೇವೆ ಸಲ್ಲಿಸಲು ಹೇಳಿ ತಾನು ಮೃತನಾದ.
ಚಾಣಕ್ಯನು ಪಾಕಿಸ್ತಾನದಲ್ಲಿರುವ ತಕ್ಷಶಿಲಾದಲ್ಲಿ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದವನು. ಅವನನ್ನು ವಿಷ್ಣುಗುಪ್ತ ಅಥವಾ ಕೌಟಿಲ್ಯ ಎಂದೂ ಕರೆಯಲಾಗುತ್ತಿತ್ತು. ಆತ ಅಸಾಧಾರಣ ಬುದ್ಧಿವಂತಿಕೆ ಮತ್ತು ತೀಕ್ಷ್ಣ ಬುದ್ಧಿಗೆ ಹೆಸರುವಾಸಿಯಾಗಿದ್ದ. ಚಾಣಕ್ಯನು ಚಂದ್ರಗುಪ್ತ ಮೌರ್ಯನಿಗೆ ಪ್ರಮುಖ ಸಲಹೆಗಾರ ಮತ್ತು ಮಾರ್ಗದರ್ಶಕನಾಗಿದ್ದ. ನಂದ ರಾಜವಂಶವನ್ನು ಉರುಳಿಸಲು ಮತ್ತು ಮೌರ್ಯ ಸಾಮ್ರಾಜ್ಯವನ್ನು ಸ್ಥಾಪಿಸಲು ಸಹಾಯ ಮಾಡಿದ. ಹೀಗಾಗಿ ಚಾಣಕ್ಯ ಜಗತ್ತ ಪ್ರಸಿದ್ಧಿಯಾಗಿದ್ದು. ಈತನ ನೀತಿಗೆ ಈಗಲು ಜನ ತಲೆ ಬಾಗುತ್ತಾರೆ.