ಕೆಂಪು ಸಮುದ್ರದಲ್ಲಿ ಹೌತಿಗಳ ಅಟ್ಟಹಾಸ! – ಕಡಲ ಭದ್ರತೆ ಬಗ್ಗೆ ಆಂಥೋನಿ ಬ್ಲಿಂಕೆನ್’ಗೆ ಕರೆ ಮಾಡಿ ಜೈಶಂಕರ್ ಕಳವಳ!
ವ್ಯಾಪಾರಿ ಹಡಗುಗಳ ಮೇಲೆ ಡ್ರೋನ್‌ಗಳು ಮತ್ತು ಕ್ಷಿಪಣಿಗಳ ದಾಳಿ ದಿನೇ ದಿನೇ ಹೆಚ್ಚಾಗುತ್ತಿದೆ. ಹೌತಿ ಬಂಡುಕೋರರು ಕೆಂಪು ಸಮುದ್ರದ ಹಡಗು ಮಾರ್ಗಗಳಲ್ಲಿ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳ ಮೂಲಕ ಅಂತಾರಾಷ್ಟ್ರೀಯ ಹಡಗುಗಳಿಗೆ ತೊಂದರೆ ನೀಡುತ್ತಿದ್ದಾರೆ. ಹೌತಿಗಳು ಇಲ್ಲಿಯವರೆಗೆ 27 ಹಡಗುಗಳ ಮೇಲೆ ದಾಳಿ ಮಾಡಿದ್ದಾರೆ. ಈ ದಾಳಿಗಳ ಬೆನ್ನಲ್ಲೇ ಭಾರತೀಯ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ಅಮೆರಿಕದ ವಿದೇಶಾಂಗ ಸಚಿವ ಆಂಥೋನಿ ಬ್ಲಿಂಕೆನ್’ಗೆ ಕರೆ ಮಾಡಿ ಕಳವಳ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಕಾಡಾನೆ ಸೆರೆಗೆ ಕಾರ್ಯಾಚರಣೆ ಮತ್ತೆ ಆರಂಭ – ಕಾಡಾನೆಗಳನ್ನು ಹೆಡೆಮುರಿ ಕಟ್ಟಲು ಅಭಿಮನ್ಯು ಎಂಟ್ರಿ!
ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ಟ್ವೀಟ್ ಮಾಡುವ ಮೂಲಕ ಸಂಭಾಷಣೆಯ ಬಗ್ಗೆ ಮಾಹಿತಿ ನೀಡಿದ್ದಾರೆ. ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಜೈಶಂಕರ್ ನಾನು ಗುರುವಾರ ಸಂಜೆ ಅಮೆರಿಕಾ ವಿದೇಶಾಂಗ ಕಾರ್ಯದರ್ಶಿ ಆಂಥೋನಿ ಬ್ಲಿಂಕೆನ್ ಅವರೊಂದಿಗೆ ಚರ್ಚೆ ನಡೆಸಿದ್ದೇನೆ. ನಾವು ಸಮುದ್ರ ಭದ್ರತಾ ಸವಾಲುಗಳ ಬಗ್ಗೆ ಮಾತನಾಡಿದ್ದೇವೆ. ಕೆಂಪು ಸಮುದ್ರಕ್ಕೆ ಹೆಚ್ಚಿನ ಒತ್ತು ನೀಡಲಾಯಿತು. ಗಾಜಾ ಸೇರಿದಂತೆ ಪಶ್ಚಿಮ ಏಷ್ಯಾದ ದೇಶಗಳ ಬಗ್ಗೆ ನಡೆಯುತ್ತಿರುವ US ನೀತಿಗಳನ್ನು ನಾನು ಪ್ರಶಂಸಿಸಿದ್ದೇನೆ ಎಂದು ತಿಳಿಸಿದ್ದಾರೆ.
ಜೈಶಂಕರ್ ಹಾಗೂ ಆಂಥೋನಿ ಬ್ಲಿಂಕೆನ್ ಉಭಯ ಸಚಿವರು ಕೆಂಪು ಸಮುದ್ರದಲ್ಲಿನ ಪ್ರಕ್ಷುಬ್ಧತೆ ಕುರಿತು ವಿವರವಾಗಿ ಚರ್ಚಿಸಿದ್ದಾರೆ. ಅಲ್ಲದೆ ಗಾಜಾದ ಪರಿಸ್ಥಿತಿಯ ಬಗ್ಗೆಯೂ ಚರ್ಚಿಸಿದ್ದಾರೆ. ರಷ್ಯಾ ಮತ್ತು ಉಕ್ರೇನ್ ನಡುವೆ ನಡೆಯುತ್ತಿರುವ ಸಂಘರ್ಷದ ಕುರಿತು ನಾವು ನಮ್ಮ ಅಭಿಪ್ರಾಯಗಳನ್ನು ಸಹ ಪ್ರಸ್ತುತಪಡಿಸಿದ್ದೇವೆ. ಕೆಂಪು ಸಮುದ್ರದ ಸಂಘರ್ಷವು ವ್ಯಾಪಾರದ ಮೇಲೆ ಪರಿಣಾಮ ಬೀರಲು ಪ್ರಾರಂಭಿಸಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಸಾರಿಗೆ ವೆಚ್ಚ ಹೆಚ್ಚಾಗಿದೆ. ಸಮುದ್ರದಲ್ಲಿರುವ ವ್ಯಾಪಾರಿ ಹಡಗುಗಳ ಮೇಲೆ ಹೌತಿಗಳು ದಾಳಿ ನಡೆಸುತ್ತಿದ್ದಾರೆ. ಇದು ಆತಂಕಕಾರಿ ಸಂಗತಿಯಾಗುತ್ತಿದೆ. ಹೌತಿ ಭಯೋತ್ಪಾದಕರ ಬಂಡಾಯವು ಇಸ್ರೇಲ್-ಹಮಾಸ್ ಯುದ್ಧದ ಪರಿಣಾಮವಾಗಿದೆ. ಆದರೆ, ಶೀಘ್ರದಲ್ಲೇ ಅದನ್ನು ಪರಿಹರಿಸಲು ಪ್ರಯತ್ನಿಸುವುದಾಗಿ ಅಮೆರಿಕ ಹೇಳಿದೆ ಎಂದರು.
ಗ್ಲೋಬಲ್ ಟ್ರೇಡ್ ರಿಸರ್ಚ್ ಇನಿಶಿಯೇಟಿವ್ ಪ್ರಕಾರ, ಪ್ರಸ್ತುತ ಪರಿಸ್ಥಿತಿಯಿಂದಾಗಿ ಭಾರತವು ದೀರ್ಘಾವಧಿಯ ಶಿಪ್ಪಿಂಗ್ ಅಡೆತಡೆಗಳಿಗೆ ಸಿದ್ಧರಾಗಿರಬೇಕು. ವ್ಯಾಪಾರಿ ಹಡಗುಗಳ ಮೇಲೆ ಡ್ರೋನ್‌ಗಳು ಮತ್ತು ಕ್ಷಿಪಣಿಗಳ ದಾಳಿಯು ಹಡಗು ವೆಚ್ಚವನ್ನು ಹೆಚ್ಚಿಸುತ್ತದೆ. ಸರಕುಗಳನ್ನು ತಲುಪಿಸಲು ತೆಗೆದುಕೊಳ್ಳುವ ಸಮಯವನ್ನು ಹೆಚ್ಚಿಸುತ್ತದೆ. ಇದು ರಫ್ತುದಾರರ ಮೇಲೆ ಪರಿಣಾಮ ಬೀರುತ್ತದೆ. ಪಶ್ಚಿಮ ಆಫ್ರಿಕಾ, ಅಮೆರಿಕ ಮತ್ತು ಮೆಡಿಟರೇನಿಯನ್ ಪ್ರದೇಶಗಳಿಂದ ಕಚ್ಚಾ ತೈಲ ಆಮದುಗಳನ್ನು ವೈವಿಧ್ಯಗೊಳಿಸುವುದು ಅವಶ್ಯಕ. ಭಾರತವು ತನ್ನ ಕಡಲ ಹಿತಾಸಕ್ತಿಗಳನ್ನು ರಕ್ಷಿಸಲು ಕ್ರಮಗಳನ್ನು ತೆಗೆದುಕೊಳ್ಳಬಹುದು. ದಾಳಿಯಿಂದಾಗಿ, ಸಾಗಣೆದಾರರು ಕೇಪ್ ಆಫ್ ಗುಡ್ ಹೋಪ್ ಮೂಲಕ ಸರಕುಗಳನ್ನು ಸಾಗಿಸುತ್ತಿದ್ದಾರೆ. ಇದು 20 ದಿನಗಳ ವಿಳಂಬವನ್ನು ಉಂಟುಮಾಡುತ್ತದೆ.