ಕೆಂಪು ಸಮುದ್ರದಲ್ಲಿ ಹೌತಿ ಬಂಡುಕೋರರ ಅಟ್ಟಹಾಸ! – ಮತ್ತೆ ಎರಡು ಹಡಗುಗಳ ಮೇಲೆ ದಾಳಿ!

ಕೆಂಪು ಸಮುದ್ರದಲ್ಲಿ ಹೌತಿ ಬಂಡುಕೋರರ ಅಟ್ಟಹಾಸ! – ಮತ್ತೆ ಎರಡು ಹಡಗುಗಳ ಮೇಲೆ ದಾಳಿ!

ಕೆಂಪು ಸಮುದ್ರದಲ್ಲಿ ಹೌತಿ ಬಂಡುಕೋರರ ಅಟ್ಟಹಾಸ ಮುಂದುವರಿದಿದೆ. ಇದೀಗ ಮತ್ತೆ ಎರಡು ಹಡಗುಗಳ ಮೇಲೆ ಯಮನ್‌ನಲ್ಲಿರುವ ಇರಾನ್ ಬೆಂಬಲಿತ ಹೌತಿ ಬಂಡುಕೋರರು ಕ್ಷಿಪಣಿ ದಾಳಿ ನಡೆಸಿದ್ದಾರೆ ಎಂದು ವರದಿಯಾಗಿದೆ.

ಕೆಂಪು ಸಮುದ್ರ ಹಾಗೂ ಏಡನ್ ಕೊಲ್ಲಿಯಲ್ಲಿ ಹೌತಿ ಬಂಡುಕೋರರು ಎರಡು ಹಡಗುಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದ್ದಾರೆ. ಘಟನೆಯಲ್ಲಿ ಒಂದು ಹಡಗಿಗೆ ಅಲ್ಪ ಹಾನಿಯಾಗಿದ್ದು, ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದು ಅಮೆರಿಕ ಸೇನೆ ತಿಳಿಸಿದೆ.

ಇದನ್ನೂ ಓದಿ: ಪುತ್ತಿಲ ಪರಿವಾರದಿಂದ ಬಿಜೆಪಿಗೆ 3 ದಿನ ಡೆಡ್ ಲೈನ್ – ಚುನಾವಣಾ ರಾಜಕೀಯಕ್ಕೆ ಪುತ್ತಿಲ ಪರಿವಾರ ಸಿದ್ಧ ಅಂತ ಎಚ್ಚರಿಕೆ

ಸ್ಟಾರ್ ನಾಸಿಯಾ ಹಾಗೂ ಮಾರ್ನಿಂಗ್ ಟೈಡ್ಸ್ ಎನ್ನುವ ಹಡಗುಗಳು ದಾಳಿಗೆ ಒಳಗಾಗಿವೆ. ಗ್ರೀಕ್‌ನ ಸ್ಟಾರ್ ನಾಸಿಯಾ ಹಡಗಿಗೆ ಹಾನಿಯಾಗಿದ್ದು, ಸಿಬ್ಬಂದಿಗಳು ಸುರಕ್ಷಿತವಾಗಿದ್ದಾರೆ ಎಂದು ಗ್ರೀಕ್ ಅಧಿಕಾರಿಗಳು ತಿಳಿಸಿದ್ದಾರೆ.

‘ಹಡಗಿನ ಸಮೀಪ ಸ್ಫೋಟ ಸಂಭವಿಸಿದ್ದು, ಯಾವುದೇ ಹಾನಿಯಾಗಿಲ್ಲ. ಸಿಬ್ಬಂದಿಗಳೂ ಸುರಕ್ಷಿತವಾಗಿದ್ದಾರೆ. ಹಡಗು ತನ್ನ ಮಾರ್ಗದಲ್ಲಿ ಮುಂದುವರಿಯುತ್ತಿದೆ’ ಎಂದು ಮಾರ್ನಿಂಗ್‌ ಟೈಡ್‌ನ ಮಾಲೀಕ ಸಂಸ್ಥೆ ಬ್ರಿಟನ್‌ನ ಫುರಡಿನೊ ಶಿಪ್ಪಿಂಗ್ ಲಿಮಿಟೆಡ್ ತಿಳಿಸಿದೆ.

ಇನ್ನೂ ಈ ದಾಳಿ ಕುರಿತು ಹೌತಿ ಬಂಡುಕೋರರ ನಾಯಕ ಅಬ್ದುಲ್ ಮಲಿಕ್ ಅಲ್-ಹುತಿ ಎಚ್ಚರಿಕೆಯನ್ನು ನೀಡಿದ್ದಾನೆ. ಒಂದು ವೇಳೆ ಇಸ್ರೇಲ್‌ ಹಾಗೂ ಹಮಾಸ್ ನಡುವೆ ಯುದ್ಧ ನಿಲ್ಲದೇ ಹೋದರೆ ಇನ್ನಷ್ಟು ದಾಳಿ ನಡೆಸಲಾಗುವುದು ಎಂದು ಹೇಳಿದ್ದಾನೆ.

ಇಸ್ರೇಲ್- ಗಾಜಾ ಯುದ್ಧದಲ್ಲಿ ಪ್ಯಾಲೆಸ್ಟೀನಿಯನ್ನರ ಪರ ಬೆಂಬಲ ಸೂಚಿಸುವ ಸಲುವಾಗಿ, ಹುತಿ ಬಂಡುಕೋರರು, ಕೆಂಪು ಸಮುದ್ರದಲ್ಲಿ ಸಂಚರಿಸುವ ಅಮೆರಿಕದ ಹಡುಗುಗಳ ಮೇಲೆ ನವೆಂಬರ್ ತಿಂಗಳಿನಿಂದ ಡೋನ್ ಹಾಗೂ ಕ್ಷಿಪಣಿ ದಾಳಿಗಳನ್ನು ನಡೆಸುತ್ತಿದ್ದಾರೆ.

Shwetha M