ಆಗಸ್ಟ್‌ 1 ರಿಂದ ದುಬಾರಿ ದುನಿಯಾ – ಬಾಯಿ ಸುಡಲಿದೆ ಹೋಟೆಲ್‌ನ ಊಟ, ತಿಂಡಿ

ಆಗಸ್ಟ್‌ 1 ರಿಂದ ದುಬಾರಿ ದುನಿಯಾ – ಬಾಯಿ ಸುಡಲಿದೆ ಹೋಟೆಲ್‌ನ ಊಟ, ತಿಂಡಿ

ಬೆಂಗಳೂರು: ಆಗಸ್ಟ್‌ ತಿಂಗಳಿನಿಂದ ದುನಿಯಾ ತುಂಬಾ ದುಬಾರಿಯಾಗಲಿದೆ.. ಇಡೀ ತಿಂಗಳು ದುಡಿದ ಸಂಬಳ ತಿಂಗಳ ಖರ್ಚಿಗೆ ಸಾಲೋದಿಲ್ಲ.. ಅದಕ್ಕೆ ಕಾರಣ ಬೆಲೆ ಏರಿಕೆ. ಮಾಂಸದ ರೇಟ್‌ ಜಾಸ್ತಿ ಅಂದ್ಕೊಂಡು ತರಕಾರಿ ತಿನ್ನೋಕೆ ಹೋದ್ರೆ, ಟೊಮ್ಯಾಟೋ ಬದಲು ಹುಣಸೆ ಹಣ್ಣು ಹಾಕಿ ಅಡುಗೆ ಮಾಡೋ ಪರಿಸ್ಥಿತಿ ಬಂದಿದೆ. ಇನ್ನು ಹಣ್ಣುಗಳ ದರಗಳನ್ನು ಕೇಳೋದೇ ಬೇಡ. ನೆಮ್ಮದಿಯಾಗಿ ಟೀ-ಕಾಫಿ ಕುಡಿಯೋಣ ಎಂದರೆ ಆಗಸ್ಟ್‌ 1 ರಿಂದ  ಅದೂ ಕೂಡ ದುಬಾರಿ. ಹೋಟೆಲ್‌ ಮಾಲೀಕರ ಸಂಘ ಹೋಟೆಲ್‌ ತಿಂಡಿಗಳ ಬೆಲೆಯಲ್ಲಿ ಶೇ.10ರಷ್ಟು ಏರಿಕೆ ಮಾಡಿದೆ.

ಇದನ್ನೂ ಓದಿ: ಮತ್ತೆ ಟೊಮ್ಯಾಟೋ ದರ ಭಾರಿ ಏರಿಕೆ – ಟೊಮ್ಯಾಟೋ ಬೆಲೆ ಕೆಜಿಗೆ 200 ರೂ.!

ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಆಗಸ್ಟ್‌ 1 ರಿಂದ ಹೋಟೆಲ್‌ ಕಾಫಿ, ಟೀ, ತಿಂಡಿ ತಿನಿಸುಗಳ ದರ ಹೆಚ್ಚಳ ಮಾಡಲು ಹೋಟೆಲ್‌ ಸಂಘ ತೀರ್ಮಾನಿಸಿದೆ. ಹೀಗಾಗಿ ಕಾಫಿ ಹಾಗೂ ಟೀ ಬೆಲೆಯನ್ನು 3 ರೂಪಾಯಿ ಏರಿಸಲು ಹಾಗೂ ತಿಂಡಿ ತಿನಿಸುಗಳ ದರ 5 ಹಾಗೂ ಊಟದ ದರ 10 ರೂಪಾಯಿ ಹೆಚ್ಚಳಕ್ಕೆ ನಿರ್ಧರಿಸಲಾಗಿದೆ.

ಬಿಸಿ ಬೇಳೆಬಾತ್ 45 ರಿಂದ 55 ರೂ, ರೈಸ್ ಪೂರಿ 45 ರಿಂದ 50 ರೂ. ಮಸಾಲೆ ದೋಸೆ 60 ರೂ., ಉದ್ದಿನ ವಡೆ 15 ರೂ. ಪೂಳಿಯೊಗರೆ 40-50 ರೂ., ಇಡ್ಲಿ ವಡೆ 30 ರಿಂದ 50 ರೂ.ವರೆಗೆ, ಟಿ ಮತ್ತು ಕಾಫಿ 12 ರಿಂದ 15 ರೂ. ಬಾದಾಮಿ ಹಾಲು 18 ರೂಗೆ ಏರಿಕೆ ಮಾಡಲಾಗುತ್ತದೆ. ಕರ್ಡ್ ರೈಸ್ 45-55 ರೂಗೆ ಏರಿಕೆಯಾಗಲಿದೆ. ಅನ್ನಸಾಂಬಾರ್ 50 ರೂ. ನಿಂದ 60 ಕ್ಕೆ ಏರಿಸಲಾಗಿದೆ. ಫುಲ್ ಮೀಲ್ಸ್ ಬೆಲೆ 50 ರಿಂದ 70 ರೂ. ಏರಿಕೆ ಮಾಡಲಾಗಿದೆ. ಕಾಫಿ ಹಾಗೂ ಟೀ ಬೆಲೆ 3 ರೂಪಾಯಿ ಹೆಚ್ಚಳವಾಗಲಿದೆ. ತಿಂಡಿ ತಿನಿಸುಗಳ ಬೆಲೆ 5ರಿಂದ 10 ರೂಪಾಯಿಗಳಷ್ಟು ಏರಿಕೆಯಾಗಲಿದೆ. ರೈಸ್ ಬಾತ್ 40 ರಿಂದ 45 ರೂ ಗೆ ಹೆಚ್ಚಳ, ಇಡ್ಲಿ (2 ಕ್ಕೆ) 40-50, ಸೆಟ್ ದೋಸೆ 60-65, ಬೆಣ್ಣೆ ಮಸಾಲೆ ದೋಸೆ 70-80 ರೂಗೆ ಏರಿಕೆಯಾಗಲಿದೆ.

ಹಾಲಿನ ದರ 3 ರೂಪಾಯಿ ಏರಿಕೆ

ಹೊಸ ಸರ್ಕಾರ ಇನ್ನೇನು ಅಧಿಕಾರ ವಹಿಸಿಕೊಂಡಿತ್ತು ಎನ್ನುವಾಗಲೇ, ಕೆಎಂಎಫ್‌ ಹಾಲಿನ ದರ ಏರಿಕೆ ಮಾಡುವ ಪ್ರಸ್ತಾಪ ಇಟ್ಟಿತ್ತು. ಲೀಟರ್‌ಗೆ 5 ರೂಪಾಯಿ ಏರಿಕೆ ಮಾಡುವ ನಿರ್ಧಾರ ಮಾಡಿದ್ದ ಕೆಎಂಎಫ್‌, ಸರ್ಕಾರದ ಜೊತೆಗಿನ ಚರ್ಚೆಯ ಬಳಿಕ 3 ರೂಪಾಯಿ ಏರಿಕೆಗೆ ನಿರ್ಧಾರ ಮಾಡಿದೆ. ಆಗಸ್ಟ್‌ 1 ರಿಂದ ನಂದಿನಿ ಪ್ಯಾಕೆಟ್ ಹಾಲಿನ ದರ 3 ರೂಪಾಯಿ ಏರಿಕೆ ಆಗಲಿದೆ. ಒಂದು ಲೀಟರ್ ಹಾಲು 42 ರೂಪಾಯಿ ಆಗಲಿದೆ.

ಕೆಎಸ್ಆರ್ಟಿಸಿ ಬಸ್ದರ ಏರಿಕೆ

ಇನ್ನು ಒಪ್ಪಂದದ ಆಧಾರದಲ್ಲಿ ನಿರ್ವಹಿಸುವ ಕೆಎಸ್‌ಆರ್‌ಟಿಸಿ ಬಸ್‌ಗಳ ದರಗಳನ್ನು ಏರಿಕೆ ಮಾಡುವ ನಿರ್ಧಾರವನ್ನು ಸರ್ಕಾರ ಮಾಡಿದೆ. ಪ್ರವಾಸ, ಮದುವೆ ಹಾಗೂ ಇನ್ನಿತರ ಉದ್ದೇಶಗಳಿಗೆ ನೀಡುವ ಸಾಂದರ್ಭಿಕ ಒಪ್ಪಂದದ ಬಸ್‌ಗಳ ಪ್ರಯಾಣ ದರ ಏರಿಸಿದ ಕೆಎಸ್‌ಆರ್‌ಟಿಸಿ, ಪ್ರತಿ ಕಿ.ಮೀ ಗೆ 2 ರೂ.ನಿಂದ 5 ರೂ.ವರೆಗೆ ದರ ಏರಿಕೆಯನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಮಾಡಿದೆ. ಪರಿಷ್ಕೃತ ದರವು ಇದೇ ಆಗಸ್ಟ್‌ 1ರಿಂದಲೇ ಜಾರಿಯಾಗಲಿದೆ.

suddiyaana