ಹಾಟ್ ಬೀಚ್ ನಲ್ಲಿ ಬಾತ್ ಟಬ್ ನಿರ್ಮಿಸಿ ಸ್ನಾನ ಮಾಡೋದೇ ಮಜಾ – ಬಿಸಿನೀರಿನ ಸಮುದ್ರದ ಬಗ್ಗೆ ನಿಮಗೆಷ್ಟು ಗೊತ್ತು..?

ಹಾಟ್ ಬೀಚ್ ನಲ್ಲಿ ಬಾತ್ ಟಬ್ ನಿರ್ಮಿಸಿ ಸ್ನಾನ ಮಾಡೋದೇ ಮಜಾ – ಬಿಸಿನೀರಿನ ಸಮುದ್ರದ ಬಗ್ಗೆ ನಿಮಗೆಷ್ಟು ಗೊತ್ತು..?

ಪ್ರವಾಸಕ್ಕೆ ಹೋಗೋದು ಅದ್ರಲ್ಲೂ ಬೀಚ್ ಸೈಡ್ ಹೋಗೋದು ಅಂದ್ರೆ ಯಾರಿಗಿಷ್ಟ ಆಗಲ್ಲ ಹೇಳಿ. ಕಡಲತೀರದಲ್ಲಿ ಹಾಯಾಗಿ ರೌಂಡ್ ಹೊಡೆಯೋದೇ ಸಖತ್ ಖುಷಿ. ತೇಲಿ ತೇಲಿ ಬರೋ ಅಲೆಗಳನ್ನ ನೋಡ್ತಾ ಅಲೆಗಳ ನಡುವೆ ಆಟ ಆಡ್ತಾ ಪ್ರವಾಸಿಗರು ಎಂಜಾಯ್ ಮಾಡುತ್ತಿರುತ್ತಾರೆ. ಆದ್ರೆ, ಬೀಚ್ ನಲ್ಲಿ ಆಟವಾಡುತ್ತಾ ತಣ್ಣೀರಲ್ಲಿ ಮೋಜು ಮಸ್ತಿ ಮಾಡೋದನ್ನ ನೋಡಿದ್ದೀವಿ. ನಾವೂ ಕೂಡಾ ಕಡಲತೀರದಲ್ಲಿ ವಿಹರಿಸಿದ್ದೀವಿ. ಆದ್ರೆ, ಯಾವತ್ತಾದ್ರೂ ಬಿಸಿನೀರಿನ ಬೀಚ್ ನಲ್ಲಿ ರೌಂಡ್ ಹಾಕಿದ್ದೀರಾ. ಹಾಟ್ ಬೀಚ್ ಲ್ಲಿ ಟಬ್ ಬಾತ್ ಮಾಡಿದ್ದೀರಾ. ನಾವ್ ಈಗ ಅಂಥಾದ್ದೊಂದು ಹಾಟ್ ವಾಟರ್ ಬೀಚ್ ನ ಬಗ್ಗೆ ನಿಮಗೆ ಮಾಹಿತಿ ನೀಡುತ್ತೇವೆ.

ಇದನ್ನೂ ಓದಿ : ಕೋಡಿಬೆಂಗ್ರೆ ಬೀಚ್‌ನಲ್ಲಿ ಮೀನಿನ ಸುಗ್ಗಿ – ಸಮುದ್ರದ ದಡದಲ್ಲಿ ನಿಂತು ಹಾಕಿದ ಬಲೆಗೆ ಬಿತ್ತು ಟನ್‌ಗಟ್ಟಲೆ ಮೀನು

ಸಮುದ್ರ ಅಂದ ಮೇಲೆ ತೇಲಿ ಬರುತ್ತಿರೋ ಅಲೆಗಳು, ತೀರದಲ್ಲಿ ಸುತ್ತಾಟ ಮಾಡೋ ಪ್ರವಾಸಿಗರನ್ನ ನಾವ್ ನೋಡಿರುತ್ತೇವೆ. ಇನ್ನು ಕೆಲ ಪ್ರವಾಸಿಗರಂತೂ ಬಿಸಿಲಬೇಗೆಯಿಂದ ತಪ್ಪಿಸಿಕೊಳ್ಳಲು ಬೀಚ್ ಹತ್ರ ನೀರು ತಾಗಿಸಿಕೊಂಡು ಮಲಗಿರುತ್ತಾರೆ. ಆದ್ರೆ, ಜೋರು ಚಳಿಯಾಗ್ತಿದೆ. ಬೀಚ್ ಗೆ ಹೋಗಿ ಹಾಟ್ ಹಾಟ್ ವಾಟರ್ ನಲ್ಲಿ ಟಬ್ ಬಾತ್ ಮಾಡ್ಬೇಕು ಅಂತಾ ಪ್ಲಾನ್ ಹಾಕುವವರಿಗೆ ಇಲ್ಲೊಂದ್ ಬೀಚ್ ಇದೆ. ಇಲ್ಲಿ ಬಂದ್ರೆ ಕೋಲ್ಡ್ ಕೋಲ್ಡ್ ಬಾಡಿ ಸಖತ್ ಹಾಟ್ ಹಾಟ್ ಆಗುತ್ತೆ. ಅಂದಹಾಗೆ ಈ ಬಿಸಿ ನೀರಿನ ಕಡಲತೀರ ಇರೋದು ನ್ಯೂಜಿಲೆಂಡ್ ನಲ್ಲಿ. ನ್ಯೂಜಿಲೆಂಡ್ ನ ಕೋರಮ್ಯಾಂಡಲ್ ನ ಪರ್ಯಾಯ ದ್ವೀಪದಲ್ಲಿದೆ ಈ ಹಾಟ್ ವಾಟರ್ ಬೀಚ್. ಇದು ವಿಶ್ವದಲ್ಲೇ ಇರುವ ಹಾಟ್ ವಾಟರ್ ಬೀಚ್ ಗಳಲ್ಲಿ ತುಂಬಾ ಫೇಮಸ್ ಆಗಿದೆ. ಈ ಬೀಚ್ ನಲ್ಲಿ ನೀವು ಕಾಲಿಟ್ರೆ ಬಿಸಿನೀರಿನ ಮೇಲೆ ಕಾಲಿಟ್ಟ ಅನುಭವ ಸಿಗುತ್ತೆ. ಮರಳಿನಿಂದ ತಂತಾನೆ ಮೇಲಕ್ಕೆ ಒಸರುವ ಬಿಸಿ ನೀರು ಮೈಗೆ ಹಾಯೆನಿಸುತ್ತೆ. ಹಾಗಂತಾ ಬೇಸಿಗೆಯಲ್ಲಿ ನೀವು ಇಲ್ಲಿ ಹೋದ್ರೆ ಅಷ್ಟೊಂದು ಮಜಾ ಬರೋದಿಲ್ಲ. ಆದ್ರೆ, ಇದೊಂಥರಾ ಸ್ಪೆಷಲ್ ಬೀಚ್. ಈ ಬೀಚಿನ ಮರಳಿನಿಂದ ಮೇಲೆಳುವ ಬಿಸಿನೀರಿನ ತಾಪಮಾನ ಅಂದಾಜು 147 ಡಿಗ್ರಿ ಪ್ಯಾರನ್ಹೀಟ್ ಇರುತ್ತದೆ. ಅಂದರೆ ಅಂದಾಜು 64 ಡಿಗ್ರಿ ಸೆಂಟಿಗ್ರೇಡ್ ನಷ್ಟು ಇರುತ್ತದೆ. ಈ ಮಟ್ಟದ ಉಷ್ಣಾಂಶದಲ್ಲಿ ಮೇಲೆ ಬರುವ ಬಿಸಿನೀರಿನ ಬುಗ್ಗೆಯು , ಮೇಲ್ಮೈಗೆ ಬಂದ ಕೂಡಲೇ ಸಮುದ್ರದ ನೀರಿನ ಜೊತೆ ಬೆರೆಯುತ್ತೆ. ಆಗ ನೀರು ಸ್ವಲ್ಪಮಟ್ಟಿಗೆ ತಣ್ಣಗಾಗಿ ಸ್ನಾನದ ನೀರಿನ ಬಿಸಿಯ ಹದಕ್ಕೆ ಬರುತ್ತದೆ. ಇಂತಹ ನೀರಲ್ಲಿ ಜಲಕ್ರೀಡೆಯಾಡಲು ಪ್ರವಾಸಿಗರು ಇಲ್ಲಿಗೆ ಬರುತ್ತಾರೆ.

ನ್ಯೂಜಿಲೆಂಡ್ ನ ಈ ಬೀಚ್ ನಲ್ಲಿ ಮಾವೋರಿ ಮತ್ತು ಒರುವಾ ಎಂಬ ಎರಡು ಬಿರುಕುಗಳಿವೆ. ಈ ಜಾಗದ ಮರಳಿನ ಅಡಿಯಿಂದ ಬಿಸಿನೀರು ಹೊರಬರುತ್ತಲೇ ಇರುತ್ತೆ. ಇಲ್ಲಿ ಗಮನಿಸಬೇಕಾದ ಬಹುಮುಖ್ಯ ವಿಷಯವೇನೆಂದ್ರೆ, ಬಿಸಿನೀರು ಎರಡು ಅಲೆಗಳು ಮೂಡುವ ನಡುವಿನ ಸಮಯದಲ್ಲಿ ಹೊರಬರುತ್ತದೆ. ಅಲೆ ಬಂದೊಡನೆ ಮರಳಿನಿಂದ ಮೇಲೆ ಬಂದ ಬಿಸಿನೀರು ಅದರೊಡನೆ ಮಿತವಾಗಿ ಹದವಾದ ಉಷ್ಣತೆಗೆ ಬರುತ್ತದೆ. ಈ ನೀರು ಮತ್ತೆ ಸಮುದ್ರದ ಅಲೆಯ ಜೊತೆ ಸೇರೋದನ್ನ ತಡೆಯಲು ಅಲ್ಲಲ್ಲೇ ಬಾತ್ ಟಬ್ ರೀತಿಯ ಹೊಂಡಗಳನ್ನ ತೆಗೆಯಲಾಗಿದೆ. ಅಂತಹಾ ಬಾತ್ ಟಬ್ ಗಳಲ್ಲಿ ಕುಳಿತು ಕೊಳ್ಳೋ ವ್ಯವಸ್ಥೆಯನ್ನೂ ಮಾಡಲಾಗಿದೆ.

ಇನ್ನು ಈ ಸಮುದ್ರತೀರದಲ್ಲಿ ಯಾರ್ ಬೇಕಾದ್ರೂ ಬಾತ್ ಟಬ್ ರೆಡಿಮಾಡಿಕೊಳ್ಳಬಹುದು. ಕೆಲವೊಮ್ಮೆ ಇಲ್ಲಿಗೆ ಬರೋ ಪ್ರವಾಸಿಗರೇ ಬಾತ್ ಟಬ್ ರೆಡಿಮಾಡಲು ಬೇಕಾದ ಸ್ವಂತ ಉಪಕರಣಗಳನ್ನ ತರುತ್ತಾರೆ. ಒಂದು ವೇಳೆ ಕೆಲವರಿಗೆ ಇದೆಲ್ಲಾ ಐಡಿಯಾ ಈ ಬೀಚ್ ಗೆ ಬಂದ ಮೇಲೆ ಬರುತ್ತೆ. ಅಂಥವ್ರಿಗಾಗಿ ಇಲ್ಲಿ ಬಾಡಿಗೆಗೂ ಉಪಕರಣಗಳು ಸಿಗುತ್ತೆ. ಅದ್ರಲ್ಲೇ ಸಮುದ್ರದಂಡೆ ಮೇಲೆ ಬಾತ್ ಟಬ್ ಗಳನ್ನ ರೆಡಿಮಾಡಿಕೊಳ್ಳಬಹುದು. ಈ ಹಾಟ್ ವಾಟರ್ ಬೀಚ್ ನಲ್ಲಿ ಬಾತ್ ಟಬ್ ರೆಡಿಮಾಡಿಕೊಳ್ಳಲು ಸಲಕರಣೆಗಳಿಗೆ 5 ಡಾಲರ್ ಬಾಡಿಗೆ ತೆಗೆದುಕೊಳ್ತಾರೆ. ಪ್ರವಾಸಿಗರು ಅದನ್ನು ಪಡೆದು ಉಪಯೋಗಿಸಬಹುದು.

ಇನ್ನು ಇಲ್ಲಿ ಬಾತ್ ಟಬ್ ನಿರ್ಮಿಸಿಕೊಳ್ಳಲು ಕೆಲ ಜಾಗ ಮಾತ್ರ ಸೂಕ್ತ. ಮನಸ್ಸಿಗೆ ಬಂದ ಜಾಗದಲ್ಲಿ ಬಾತ್ ಟಬ್ ರಚಿಸಿಕೊಳ್ಳಲು ಸಾಧ್ಯವಿಲ್ಲ. ಈ ಬೀಚ್ ನಲ್ಲಿ ಎಲ್ಲೆಲ್ಲಿ ನೀರಿನ ಗುಳ್ಳೆಗಳು ಮೇಲಕ್ಕೆ ಬರುತ್ತದೆಯೋ ಆ ಜಾಗದಲ್ಲಿ ಬಾತ್ ಟಬ್ ರಚಿಸಲು ಸಾಧ್ಯವಾಗಲ್ಲ. ನೀರಿನ ಗುಳ್ಳೆಗಳು ಮೇಲಕ್ಕೆ ಬರೋ ಜಾಗದ ಅಡಿಯಲ್ಲಿ ನೀರು ಮೈಸುಡುವಷ್ಟು ಬಿಸಿಯಾಗಿರುತ್ತದೆ. ಹಾಗಾಗಿ ಆ ಸ್ಥಳವನ್ನ ಬಾತ್ ಟಬ್ ರಚನೆಗೆ ಉಪಯೋಗಿಸದಿರುವುದು ಸೂಕ್ತ. ಇನ್ನು ಈ ಬೀಚ್ ಬೇರೆ ಸಮುದ್ರತೀರಗಳಂತೆ ಇಲ್ಲದಿರೋದ್ರ ಬಗ್ಗೆ ಸಾಕಷ್ಟು ಅಧ್ಯಯನಗಳೇ ನಡೆದಿವೆ. ವಿಜ್ಞಾನಿಗಳು ಈ ಸಮುದ್ರತೀರದ ವಿಸ್ಮಯದ ಬಗ್ಗೆ ಆಳವಾಗಿ ಅಧ್ಯಯನ ಕೂಡಾ ಮಾಡಿದ್ದಾರೆ. ಈ ಹಾಟ್ ವಾಚರ್ ಬೀಚ್ ನಲ್ಲಿರುವ ಮರಳಿನ ಅಡಿಯಲ್ಲಿ ಸುಮಾರು ಎರಡು ಕಿಲೋಮೀಟರ್ ಆಳದಲ್ಲಿ ನೀರಿನ ಕೊಳ ಮತ್ತು ಬಿಸಿ ಬಂಡೆಗಳಿವೆ ಅಂತಾ ಸಂಶೋಧನೆಯಿಂದಲೂ ತಿಳಿದುಬಂದಿದೆ. ಈ ರೀತಿ ಬಿಸಿನೀರಿನ ಬುಗ್ಗೆ ಸದಾ ಗುಳ್ಳೆರೂಪದಲ್ಲಿ ಮೇಲೆ ಬರಲು 5 ದಶಲಕ್ಷ ವರ್ಷಗಳ ಹಿಂದೆ ಸಂಭವಿಸಿದ ಜ್ವಾಲಾಮುಖಿಯೇ ಕಾರಣ ಎನ್ನಲಾಗುತ್ತಿದೆ. ಇನ್ನು ಈ ಹಾಟ್ ವಾಟರ್ ಬೀಚ್ ವರ್ಷಪೂರ್ತಿ ಪ್ರವಾಸಿಗರಿಗಾಗಿ ತೆರೆದಿರುತ್ತದೆ.

suddiyaana