ಭೀಕರ ರೈಲು ದುರಂತದಲ್ಲಿ ಸಾವಿನ ಸಂಖ್ಯೆ 13 ಕ್ಕೆ ಏರಿಕೆ – 12 ರೈಲುಗಳ ಸಂಚಾರ ರದ್ದು
ಒಡಿಶಾದ ರೈಲು ದುರಂತ ಮಾಸುವ ಮುನ್ನವೇ ಭಾನುವಾರ ಮತ್ತೊಂದು ರೈಲು ದುರಂತ ಸಂಭವಿಸಿದೆ. ಆಂಧ್ರ ಪ್ರದೇಶದ ವಿಜಯನಗರದಲ್ಲಿ ರೈಲು ಅಪಘಾತ ಸಂಭವಿಸಿದ್ದು, ದುರಂತದಲ್ಲಿ ಸಾವಿನ ಸಂಖ್ಯೆ 13ಕ್ಕೆ ಏರಿಕೆಯಾಗಿದೆ ಎಂದು ವರದಿಯಾಗಿದೆ.
ಭಾನುವಾರ ಆಂಧ್ರ ಪ್ರದೇಶದ ವಿಜಯನಗರದಲ್ಲಿ ಎರಡು ಪ್ಯಾಸೆಂಜರ್ ರೈಲುಗಳ ಮಧ್ಯೆ ಅಪಘಾತ ಸಂಭವಿಸಿದೆ. ಈ ದುರಂತದಲ್ಲಿ ಸಾವಿನ ಸಂಖ್ಯೆ 13ಕ್ಕೆ ಏರಿಕೆಯಾಗಿದ್ದು, 40ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಮೃತರ ಕುಟುಂಬಸ್ಥರಿಗೆ ಆಂಧ್ರ ಸರ್ಕಾರ 10 ಲಕ್ಷ ಪರಿಹಾರ ಹಾಗೂ ಗಾಯಾಳುಗಳಿಗೆ 2.5 ಲಕ್ಷ ಸಾವಿರ ಪರಿಹಾರ ಘೋಷಿಸಿದೆ. ಎರಡು ರೈಲುಗಳ ಮಧ್ಯೆ ಸಂಭವಿಸಿದ ಅಪಘಾತದಿಂದಾಗಿ 12 ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ. ಅಲ್ಲದೇ 15 ರೈಲುಗಳ ಮಾರ್ಗಗಳನ್ನು ಬದಲಾಯಿಸಲಾಗಿದ್ದು, 7 ಇತರ ರೈಲುಗಳನ್ನು ಭಾಗಶಃ ರದ್ದುಗೊಳಿಸಲಾಗಿದೆ ಎಂದು ಪೂರ್ವ ಕರಾವಳಿ ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ನಿದ್ದೆ ಮಂಪರಿನಲ್ಲಿದ್ದ ಭ್ರಷ್ಟ ಅಧಿಕಾರಿಗಳಿಗೆ ಶಾಕ್! – ಬೆಳ್ಳಂಬೆಳಗ್ಗೆ 90ಕ್ಕೂ ಹೆಚ್ಚು ಕಡೆಗಳಲ್ಲಿ ಲೋಕಾಯುಕ್ತ ದಾಳಿ
ಘಟನೆಯಲ್ಲಿ ಇಲ್ಲಿಯವರೆಗೆ 40 ಮಂದಿ ಗಾಯಗೊಂಡಿದ್ದು, 32 ಮಂದಿಯನ್ನು ವಿಜಯನಗರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೆಡಿಕೋವರ್ ಆಸ್ಪತ್ರೆಯಲ್ಲಿ ಇಬ್ಬರನ್ನು ದಾಖಲಿಸಿದ್ದು, ಎನ್‌ಆರ್‌ಐ ಆಸ್ಪತ್ರೆಯಲ್ಲಿ ಒಬ್ಬರನ್ನು ದಾಖಲಿಸಲಾಗಿದೆ. 4 ಮಂದಿ ಚಿಂತಾಜನಕ ಸ್ಥಿತಿಯಲ್ಲಿದ್ದಾರೆ. ಗಾಯಗೊಂಡವರೆಲ್ಲರೂ ಆಂಧ್ರಪ್ರದೇಶದವರಾಗಿದ್ದಾರೆ ಎಂದು ವಿಜಯನಗರ ಜಿಲ್ಲಾಡಳಿತ ತಿಳಿಸಿದೆ.
ವಿಶಾಖಪಟ್ಟಣದಿಂದ ಪಲಾಸಕ್ಕೆ ಹೋಗುತ್ತಿದ್ದ ವಿಶೇಷ ಪ್ಯಾಸೆಂಜರ್ ರೈಲು ಸಿಗ್ನಲ್ ಇಲ್ಲದ ಕಾರಣ ಕೊತ್ಸವತ್ಸಲ ಬಳಿಯ ಅಳಮಂಡ ಮತ್ತು ಕಂಟಕಪಲ್ಲಿ ನಡುವೆ ಹಳಿಗಳ ಮೇಲೆ ನಿಂತಿದ್ದು, ವೈಜಾಗ್-ರಾಯಗಡ ಪ್ಯಾಸೆಂಜರ್ ರೈಲು ಡಿಕ್ಕಿ ಹೊಡೆದ ಪರಿಣಾಮ ಮೂರು ಬೋಗಿಗಳು ಹಳಿತಪ್ಪಿವೆ. ಮಾನವ ದೋಷದಿಂದ ದುರಂತ ಸಂಭವಿಸಿದೆ ಎಂದು ರೈಲ್ವೆ ಮೂಲಗಳು ತಿಳಿಸಿದ್ದು, ಸಿಗ್ನಲಿಂಗ್ ಅನ್ನು ಲೋಕೋ ಪೈಲಟ್ ಗಮನಿಸದ ಪರಿಣಾಮ ದುರಂತ ಸಂಭವಿಸಿದೆ ಎಂದು ವರದಿಗಳು ತಿಳಿಸಿವೆ.