ಮಣಿಪುರದಲ್ಲಿ ಇಬ್ಬರು ವಿದ್ಯಾರ್ಥಿಗಳ ಭೀಕರ ಹತ್ಯೆ ಪ್ರಕರಣ – ಕುಕಿ ಸಮುದಾಯದ ನಾಲ್ವರು ಅರೆಸ್ಟ್

ಮಣಿಪುರದಲ್ಲಿ ಇಬ್ಬರು ವಿದ್ಯಾರ್ಥಿಗಳ ಭೀಕರ ಹತ್ಯೆ ಪ್ರಕರಣ – ಕುಕಿ ಸಮುದಾಯದ ನಾಲ್ವರು ಅರೆಸ್ಟ್

ಮಣಿಪುರದಲ್ಲಿ ನಡೆದ ಇಬ್ಬರು ವಿದ್ಯಾರ್ಥಿಗಳ ಭೀರಕ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳ ನಾಲ್ವರನ್ನು ಬಂಧಿಸಿದೆ ಎಂದು ವರದಿಯಾಗಿದೆ.

ಜನಾಂಗೀಯ ಹಿಂಸಾಚಾರದಲ್ಲಿ ಬೆಂದುಹೋಗಿರುವ ಮಣಿಪುರದಲ್ಲಿ ವಿದ್ಯಾರ್ಥಿಗಳಿಬ್ಬರ ಹತ್ಯೆಯಿಂದಾಗಿ ಮತ್ತಷ್ಟು ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು. ಇದೀಗ ಕೇಂದ್ರೀಯ ತನಿಖಾ ದಳ ರಾಜ್ಯ ರಾಜಧಾನಿ ಇಂಫಾಲ್‌ನಲ್ಲಿ ನಾಲ್ವರು ಆರೋಪಿಗಳನ್ನು ಬಂಧಿಸಿದೆ. ಬಂಧನಕ್ಕೊಳಗಾದ ನಾಲ್ವರಲ್ಲಿ ಇಬ್ಬರು ಪುರುಷರು ಮತ್ತು ಇಬ್ಬರು ಮಹಿಳೆಯರಿದ್ದಾರೆ. ವಶಕ್ಕೆ ಪಡೆಯಲಾಗಿರುವ ಇಬ್ಬರು ಹುಡುಗಿಯರು ಎನ್ನಲಾಗಿದೆ. ಬಂಧಿತ ನಾಲ್ವರನ್ನು ಅಸ್ಸಾಂನ ಗುವಾಹಟಿಗೆ ರವಾನಿಸಲಾಗಿದೆ.

ಇದನ್ನೂ ಓದಿ: ಗಾಂಧಿ ಜಯಂತಿ ಹಿನ್ನೆಲೆ ರಾಜ್‌ಘಾಟ್‌ನಲ್ಲಿ ಗಾಂಧಿ ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸಿದ ಪ್ರಧಾನಿ ಮೋದಿ, ದ್ರೌಪದಿ ಮುರ್ಮು

ಆರೋಪಿಗಳನ್ನು ಪಾವೊಮಿನ್ಲುನ್ ಹಾಕಿಪ್, ಮಲ್ಸಾವ್ನ್ ಹಾಕಿಪ್, ಲಿಂಗ್ನಿಚಾಂಗ್ ಬೈಟ್ ಮತ್ತು ತಿನ್ನೆಖೋಲ್ ಎಂದು ಗುರುತಿಸಲಾಗಿದೆ. ಲಿಂಗ್ನೀಚಾಂಗ್ ಬೈಟ್ ಕೊಲೆಯಾದ ವಿದ್ಯಾರ್ಥಿನಿಯ ಸ್ನೇಹಿತ. ಶಂಕಿತರಲ್ಲಿ ಒಬ್ಬಾಕೆ ಚುರಾಚಂದ್‌ಪುರ ಮೂಲದ ದಂಗೆಕೋರ ಗುಂಪಿನ ವ್ಯಕ್ತಿಯೊಬ್ಬನ ಪತ್ನಿ ಎಂದು ಹೇಳಲಾಗಿದೆ. ಮಣಿಪುರ ಪೋಲೀಸ್ ಮತ್ತು ಭಾರತೀಯ ಸೇನೆಯ ಜಂಟಿ ಕಾರ್ಯಾಚರಣೆಯಲ್ಲಿ ಕ್ರ್ಯಾಕ್ ಘಟಕವು ಶಂಕಿತರನ್ನು ಇಂಫಾಲ್‌ನಿಂದ 51 ಕಿಮೀ ದೂರದಲ್ಲಿರುವ ಬೆಟ್ಟದ ಜಿಲ್ಲೆ ಚುರಚಂದ್‌ಪುರದಿಂದ ಸೆರೆಹಿಡಿದಿದೆ.

ಪ್ರಕರಣ ಕುರಿತು ಮಾತನಾಡಿರುವ ಮುಖ್ಯಮಂತ್ರಿ ಬಿರೇನ್‌ ಸಿಂಗ್‌ ಅವರು, ವಿದ್ಯಾರ್ಥಿಗಳ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಅಪರಾಧಿಗಳನ್ನು ಬಂಧಿಸಲಾಗಿದೆ. ಹತ್ಯೆಗೆ ಕಾರಣವಾದ ಕೆಲವು ಪ್ರಮುಖ ಆರೋಪಿಗಳನ್ನು ಚುರಚಂದ್‌ಪುರದಿಂದ ಬಂಧಿಸಿರುವುದು ಸಮಾಧಾನ ತಂದಿದೆ ಎಂದು ತಿಳಿಸಿದ್ದಾರೆ.

ಜುಲೈ 6 ರಂದು ಇಬ್ಬರು ಮಣಿಪುರಿ ಯುವಕರು ನಾಪತ್ತೆಯಾಗಿದ್ದರು. ಸೆಪ್ಟೆಂಬರ್ 25 ರಂದು ಈಶಾನ್ಯ ರಾಜ್ಯದಲ್ಲಿ ಮತ್ತೆ ಪ್ರತಿಭಟನೆಗಳು ಭುಗಿಲೆದ್ದವು. ಕಾಣೆಯಾಗಿದ್ದ ಫಿಜಾಮ್ ಹೇಮಾನ್‌ಜಿತ್ ಮತ್ತು ಹಿಜಾಮ್ ಲಿಂಥೋಯಿಂಗಂಬಿ ಅವರ ಪಾರ್ಥಿವ ಶರೀರವನ್ನು ತೋರಿಸುವ ವೀಡಿಯೋ ಕ್ಲಿಪ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಯಿತು. ಇದರಿಂದ ಮಣಿಪುರದಲ್ಲಿ ಮತ್ತೆ ಆಕ್ರೋಶ ವ್ಯಕ್ತವಾಗಿತ್ತು.

Shwetha M