ಶುಭ್​ಮನ್ ಗಿಲ್ ಕಳಪೆ ಆಟ – ಸಂಜು ಮತ್ತು ಜೈಸ್ವಾಲ್‌ಗೆ ಅವಕಾಶ ತಪ್ಪೋಕೆ ಕಾರಣವಾದ್ರಾ?

ಶುಭ್​ಮನ್ ಗಿಲ್ ಕಳಪೆ ಆಟ – ಸಂಜು  ಮತ್ತು ಜೈಸ್ವಾಲ್‌ಗೆ ಅವಕಾಶ ತಪ್ಪೋಕೆ ಕಾರಣವಾದ್ರಾ?
India's Shubman Gill walks back to the pavilion after his dismissal during the first T20 international cricket match between Zimbabwe and India at Harare Sports Club in Harare on July 6, 2024. (Photo by Jekesai NJIKIZANA / AFP)

ಶುಭ್​ಮನ್ ಗಿಲ್​ಗಾಗಿ ಸಂಜು ಸ್ಯಾಮ್ಸನ್​ಗೆ ಅನ್ಯಾಯ ಆಗ್ತಿದೆ ಅನ್ನೋ ಟೀಕೆಗಳು ಕೇಳಿ ಬರ್ತಿದೆ. 14 ಇನ್ನಿಂಗ್ಸ್‌ಗಳಿಂದ ಒಂದೇ ಅರ್ಧಶತಕವಿಲ್ಲದೆ, ಗಿಲ್ ಅವರ ಸ್ಟ್ರೈಕ್ ರೇಟ್ ತಂಡದ ಮೇಲೆ ಒತ್ತಡ ಹೇರುತ್ತಿದೆ. ಗಿಲ್‌ಗೆ ಅವಕಾಶ ನೀಡಿದ್ರಿಂದ ಸಂಜು ಸ್ಯಾಮ್ಸನ್ ಮತ್ತು ಯಶಸ್ವಿ ಜೈಸ್ವಾಲ್ ಅವರಂತಹ ಆಟಗಾರರಿಗೆ ಅವಕಾಶ ಕಳೆದುಹೋಗುತ್ತಿದೆ  ಅನ್ನೋ ಟೀಕೆಗಳು ವ್ಯಕ್ತವಾಗುತ್ತಿದೆ.

ಹೊಡಿಬಡಿ ಆಟವನ್ನೇ ಕೇಳುವ  T20I ಕ್ರಿಕೆಟ್​ನಲ್ಲಿ ಗಿಲ್ ಪ್ರದರ್ಶನ ತೀರ ಸಪ್ಪೆಯಾಗಿದೆ. ಪ್ರಸ್ತುತ ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟಿ20 ಸರಣಿಯಲ್ಲೂ ಶುಭ್​ಮನ್ ಗಿಲ್ ಬ್ಯಾಟ್ ಮೌನಕ್ಕೆ ಶರಣಾಗಿದೆ. ಗಿಲ್ ಅವರ ಬ್ಯಾಟ್ ಮೌನಕ್ಕೆ ಶರಣಾಗಿದೆ ಎನ್ನುವುದಕ್ಕಿಂತ ಅವರ ಬ್ಯಾಟಿಂಗ್​ನಲ್ಲಿ ಪವರ್ ಇಲ್ಲ ಎಂದರೆ ತಪ್ಪಾಗಲಾರದು. ಆಸ್ಟ್ರೇಲಿಯಾ ಪ್ರವಾಸದಲ್ಲಿ ಆರಂಭಿಕನಾಗಿ ಆಡುತ್ತಿರುವ ಗಿಲ್, ಇದುವರೆಗೆ ಒಂದೇ ಒಂದು ಅರ್ಧಶತಕವನ್ನು ಬಾರಿಸಿಲ್ಲ. ಆಸೀಸ್ ವಿರುದ್ಧದ 4ನೇ ಟಿ20ಪಂದ್ಯದಲ್ಲಿ ಗಿಲ್ 46 ರನ್ ಬಾರಿಸಿದರಾದರೂ ಅವರ ಬ್ಯಾಟಿಂಗ್​ನಲ್ಲಿ ವೇಗ ಇರಲಿಲ್ಲ.

ಇದನ್ನೂ ಓದಿ: ಆಸ್ಪತ್ರೆಗೆ ಹೋದಾತ ಹೆಣವಾದ! – ವೈದ್ಯ ಎಡವಟ್ಟಿಗೆ ಜೀವ ಕಳೆದುಕೊಂಡ ಯುವಕ!

ವಾಸ್ತವವಾಗಿ ಟಿ20 ತಂಡದಲ್ಲಿ ಶುಭ್​ಮನ್ ಗಿಲ್ ಅವರ ಸ್ಥಾನದ ಬಗ್ಗೆ ನಿರಂತರವಾಗಿ ಪ್ರಶ್ನೆಗಳು ಕೇಳಿಬರುತ್ತಿವೆ. ಆರಂಭಿಕನಾಗಿ ಸಂಜು ಸ್ಯಾಮ್ಸನ್ ಅದ್ಭುತ ಪ್ರದರ್ಶನ ನೀಡಿದರೂ, ಟೀಂ ಇಂಡಿಯಾ ಗಿಲ್ ಅವರನ್ನು ಉಪನಾಯಕನನ್ನಾಗಿ ನೇಮಿಸಿ ಅವರಿಗೆ ಇನ್ನಿಂಗ್ಸ್ ಆರಂಭಿಸುವ ಅವಕಾಶ ನೀಡಿದೆ. ಇದರ ಪರಿಣಾಮವಾಗಿ ಆರಂಭಿಕನಾಗಿ ಆಡುತ್ತಿದ್ದ ಸಂಜು, ಮಧ್ಯಮ ಕ್ರಮಾಂಕದಲ್ಲಿ ಆಡಬೇಕಾಯಿತು. ಕೊನೆಗೆ ತಂಡದಿಂದಲೇ ಹೊರಬಿದಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಗೂ ಮುನ್ನ ಟೀಂ ಇಂಡಿಯಾ ಕೊನೆಯದಾಗಿ ಇಂಗ್ಲೆಂಡ್ ವಿರುದ್ಧ ಟಿ20 ಸರಣಿಯನ್ನು ಆಡಿತ್ತು. ಆ ಸರಣಿಯಲ್ಲಿ ಆರಂಭಿಕನಾಗಿ ಆಡಿದ್ದ ಸಂಜು ಸ್ಯಾಮ್ಸನ್ ಅವರ ಪ್ರದರ್ಶನ ಅಷ್ಟೇನೂ ಉತ್ತಮವಾಗಿರಲಿಲ್ಲ. ಆದರೆ ಅದಕ್ಕೂ ಮುನ್ನ ನಡೆದಿದ್ದ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಸಂಜು 2 ಶತಕ ಬಾರಿಸಿದ್ದರು. ಇಂಗ್ಲೆಂಡ್ ವಿರುದ್ಧದ ಸರಣಿಯ ವೈಫಲ್ಯದಿಂದಾಗಿ ಸಂಜು ಆರಂಭಿಕ ಸ್ಥಾನವನ್ನು ಕಳೆದುಕೊಂಡರು. ಇದನ್ನೇ ಕಾಯುತ್ತಿದ್ದ ಬಿಸಿಸಿಐ, ಅವರನ್ನು ಆರಂಭಿಕ ಸ್ಥಾನದಿಂದ ತೆಗೆದುಹಾಕಿ ಶುಭ್​ಮನ್ ಗಿಲ್​ಗೆ ಅವಕಾಶ ನೀಡಿದೆ. ಆದರೆ ಉಪನಾಯಕನಾಗಿ ಟಿ20 ತಂಡವನ್ನು ಸೇರಿಕೊಂಡಿರುವ ಗಿಲ್ ಬ್ಯಾಟಿಂಗ್​ನಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ನೀಡುತ್ತಿಲ್ಲ. ಟಿ20 ಕ್ರಿಕೆಟ್​ನಲ್ಲಿ ತಂಡಕ್ಕೆ ಸ್ಫೋಟಕ ಆರಂಭ ಸಿಗುವುದು ಅತ್ಯಗತ್ಯ.

ಏಷ್ಯಾಕಪ್​ನಿಂದ ಭಾರತ ಟಿ20 ತಂಡದಲ್ಲಿ ಆರಂಭಿಕನಾಗಿ ಆಡುತ್ತಿರುವ ಗಿಲ್ ಅಂದಿನಿಂದ ಅರ್ಧಶತಕಕ್ಕಾಗಿ ಹಂಬಲಿಸುತ್ತಿದ್ದಾರೆ. ಗಿಲ್ ಇದುವರೆಗೆ ಆಡಿರುವ 11 ಟಿ20 ಪಂದ್ಯಗಳಲ್ಲಿ ಒಂದೇ ಒಂದು ಅರ್ಧಶತಕ ಗಳಿಸಿಲ್ಲ, ಅವರ ಅತ್ಯುತ್ತಮ ಸ್ಕೋರ್ 47 ರನ್ ಆಗಿದೆ. ಇದರಿಂದ ಗಿಲ್ ಮೇಲಿನ ಒತ್ತಡ ಹೆಚ್ಚುತ್ತಿದೆ ಎಂಬುದು ಸ್ಪಷ್ಟವಾಗಿದೆ. ಹೀಗಾಗಿ ಗಿಲ್ ಶೀಘ್ರದಲ್ಲೇ ಟಿ20ಯಲ್ಲಿ ದೊಡ್ಡ ಮತ್ತು ತ್ವರಿತ ಇನ್ನಿಂಗ್ಸ್ ಆಡದಿದ್ದರೆ ಮುಂದಿನ ದಿನಗಳಲ್ಲಿ ಏನು ಬೇಕಾದರೂ ಆಗಬಹುದು.

Kishor KV