ಕಟ್ಟಿದ ಮೂಗಿನಿಂದ ಶೀಘ್ರ ಪರಿಹಾರಕ್ಕೆ ಈ ಮನೆಮದ್ದುಗಳನ್ನು ಬಳಸಿ!

ಮಳೆಗಾಲ ಶುರುವಾಗ್ತಿದ್ದಂತೆ ಒಂದೊಂದೇ ಆರೋಗ್ಯ ಸಮಸ್ಯೆಗಳು ನಮ್ಮನ್ನು ಕಾಡುತ್ತದೆ. ಶೀತ, ವೈರಲ್ ಸೋಂಕು ಅಥವಾ ಅಲರ್ಜಿ ಕಾರಣಗಳಿಂದ ಮೂಗು ಕಟ್ಟಿಕೊಳ್ಳುವುದು ಸಾಮಾನ್ಯ ಸಮಸ್ಯೆಯಾಗಿದೆ. ಇದ್ರಿಂದಾಗಿ ಸುಸ್ತು ಮೂಗು ಕಟ್ಟಿಕೊಳ್ಳುವುದು. ಉಸಿರಾಟಕ್ಕೆ ತೊಂದರೆಯಾಗುತ್ತದೆ. ಇದಕ್ಕೆ ಮನೆಯಲ್ಲೇ ಪರಿಹಾರ ಕಂಡುಕೊಳ್ಳಿ!
ಇದನ್ನೂ ಓದಿ: ಮಳೆಗಾಲದಲ್ಲಿ ಟ್ರಿಪ್ ಹೋಗಲು ಈ ಜಾಗ ಬೆಸ್ಟ್! – ಕರ್ನಾಟಕದ ಈ ಸುಂದರ ತಾಣಕ್ಕೆ ಭೇಟಿ ನೀಡಿ!
ಶೀತ ಶುರುವಾದ್ರೆ, ಮೂಗು ಮುಚ್ಚಿಕೊಂಡಾಗ ಉಸಿರಾಟಕ್ಕೆ ತೊಂದರೆಯಾಗುವುದಲ್ಲದೆ, ನಿದ್ರೆ, ದೈನಂದಿನ ಕೆಲಸ ಹಾಗೂ ಏಕಾಗ್ರತೆಯ ಮೇಲೂ ಪರಿಣಾಮ ಬೀರುತ್ತದೆ. ಇಂತಹ ಸಂದರ್ಭಗಳಲ್ಲಿ ಕೆಲವು ಸರಳ ಮನೆಮದ್ದುಗಳನ್ನು ಅನುಸರಿಸುವ ಮೂಲಕ ಮೂಗು ಕಟ್ಟಿಕೊಂಡ ಸಮಸ್ಯೆಯಿಂದ ನಿರಾಳತೆ ಪಡೆಯಬಹುದು. ಆರೋಗ್ಯ ತಜ್ಞರ ಪ್ರಕಾರ, ಉಗುರು ಬೆಚ್ಚಗಿನ ನೀರನ್ನು ಕುಡಿಯುವುದರಿಂದ ದೇಹದಲ್ಲಿ ಉಷ್ಣತೆ ಹೆಚ್ಚಾಗಿ ಮೂಗಿನಲ್ಲಿರುವ ಕಫ ಸಡಿಲವಾಗಲು ಸಹಾಯವಾಗುತ್ತದೆ. ಇದರಿಂದ ಮೂಗಿನ ಹಾದಿಗಳು ತೆರೆಯಲು ನೆರವಾಗುತ್ತದೆ ಹಾಗೂ ಶೀತದಿಂದ ಉಂಟಾಗುವ ಅಸ್ವಸ್ಥತೆ ಕಡಿಮೆಯಾಗುತ್ತದೆ.
ಇನ್ನಷ್ಟು ಪ್ರಯೋಜನಕ್ಕಾಗಿ ಉಗುರು ಬೆಚ್ಚಗಿನ ನೀರಿಗೆ ಶುಂಠಿ ಅಥವಾ ಗ್ರೀನ್ ಟೀ ಸೇರಿಸಿ ಸೇವಿಸಬಹುದು. ಶುಂಠಿ, ಕರಿಮೆಣಸು ಸೇರಿಸಿ ತಯಾರಿಸಿದ ಕಷಾಯವೂ ಗಂಟಲು ಮತ್ತು ಮೂಗಿನ ಉರಿಯೂತವನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ.
ಮಸಾಲೆಯುಕ್ತ ಆಹಾರ ಸೇವಿಸಿ
ಮೆಣಸಿನಕಾಯಿಯಲ್ಲಿ ಇರುವ ಕ್ಯಾಪ್ಸೈಸಿನ್ ಎಂಬ ಅಂಶವು ಮೂಗಿನ ಹಾದಿಗಳನ್ನು ತಾತ್ಕಾಲಿಕವಾಗಿ ತೆರೆಯಲು ನೆರವಾಗುತ್ತದೆ. ಆದ್ದರಿಂದ ಮಿತ ಪ್ರಮಾಣದಲ್ಲಿ ಮಸಾಲೆಯುಕ್ತ ಆಹಾರ ಸೇವಿಸುವುದರಿಂದ ಮೂಗು ಕಟ್ಟಿಕೊಂಡಿರುವ ಸಮಸ್ಯೆಯಲ್ಲಿ ಸ್ವಲ್ಪ ಮಟ್ಟಿನ ಪರಿಹಾರ ದೊರೆಯಬಹುದು.
ಹಬೆ ತೆಗೆದುಕೊಳ್ಳುವುದು ಉತ್ತಮ
ಮೂಗು ಕಟ್ಟಿಕೊಂಡಾಗ ಹಬೆ ತೆಗೆದುಕೊಳ್ಳುವುದು ಅತ್ಯಂತ ಪರಿಣಾಮಕಾರಿ ಮನೆಮದ್ದುಗಳಲ್ಲಿ ಒಂದಾಗಿದೆ. ಬಿಸಿ ಹಬೆಯಿಂದ ಮೂಗಿನೊಳಗಿನ ಕಫ ಸಡಿಲವಾಗಿ ಹೊರಬರಲು ಸಹಾಯವಾಗುತ್ತದೆ. ಜೊತೆಗೆ ಸೈನಸ್‌ನಲ್ಲಿರುವ ಒತ್ತಡ ಮತ್ತು ಉರಿಯೂತವೂ ಕಡಿಮೆಯಾಗಬಹುದು.
ಹಬೆ ಹೇಗೆ ತೆಗೆದುಕೊಳ್ಳಬೇಕು?
ಒಂದು ಪಾತ್ರೆಯಲ್ಲಿ ನೀರನ್ನು ಚೆನ್ನಾಗಿ ಕುದಿಸಿ. ನಂತರ ಅದನ್ನು ಸುರಕ್ಷಿತ ಸ್ಥಳದಲ್ಲಿ ಇಟ್ಟು, ಮುಖವನ್ನು ಸ್ವಲ್ಪ ದೂರದಲ್ಲಿರಿಸಿ ಹಬೆಯನ್ನು ನಿಧಾನವಾಗಿ ಉಸಿರಾಡಿ. ತಲೆ ಮತ್ತು ಪಾತ್ರೆಯನ್ನು ಟವೆಲ್‌ನಿಂದ ಮುಚ್ಚಿಕೊಂಡರೆ ಹಬೆ ಹೆಚ್ಚು ಪರಿಣಾಮಕಾರಿಯಾಗಿ ಮೂಗಿನೊಳಗೆ ಸೇರುತ್ತದೆ. ಅಗತ್ಯವಿದ್ದರೆ ವೇಪರೈಸರ್ ಬಳಕೆಯನ್ನೂ ಮಾಡಬಹುದು.
ಸೆಲೈನ್ ಸ್ಪ್ರೇ ಬಳಸಿ
ಮೂಗಿನ ಹಾದಿಗಳನ್ನು ಸ್ವಚ್ಛಗೊಳಿಸಲು ಸೆಲೈನ್ (ಉಪ್ಪು ನೀರಿನ) ಸ್ಪ್ರೇ ಸಹ ಉಪಯುಕ್ತವಾಗಿದೆ. ಇದು ಮೂಗಿನೊಳಗಿನ ಕಫವನ್ನು ಸಡಿಲಗೊಳಿಸಿ ಉಸಿರಾಟವನ್ನು ಸುಲಭಗೊಳಿಸುತ್ತದೆ. ವೈದ್ಯರ ಸಲಹೆಯಂತೆ ಅಥವಾ ಸೂಚನೆಯಂತೆ ದಿನದಲ್ಲಿ ಅಗತ್ಯವಿದ್ದಷ್ಟು ಬಾರಿ ಬಳಸಬಹುದು.
ಬಿಸಿ ನೀರಿನ ಬಟ್ಟೆಯಿಂದ ಶಾಖ ನೀಡಿ
ಬಿಸಿ ನೀರಿನಲ್ಲಿ ಸ್ವಚ್ಛವಾದ ಬಟ್ಟೆಯನ್ನು ನೆನೆಸಿ, ಅದನ್ನು ಹಿಂಡಿ ಮೂಗಿನ ಮೇಲ್ಭಾಗ ಹಾಗೂ ಸುತ್ತಮುತ್ತ ಕೆಲ ನಿಮಿಷಗಳ ಕಾಲ ಇಟ್ಟರೆ ಮೂಗಿನ ಭಾಗದಲ್ಲಿರುವ ನರಗಳು ಸಡಿಲವಾಗಿ ಉಸಿರಾಟಕ್ಕೆ ಸ್ವಲ್ಪ ನಿರಾಳತೆ ಸಿಗುತ್ತದೆ. ಸೈನಸ್ ಒತ್ತಡವನ್ನೂ ಇದು ಕಡಿಮೆ ಮಾಡಲು ಸಹಾಯ ಮಾಡಬಹುದು.

ನೋಡಿರಿ

