ಭಯೋತ್ಪಾದಕರ ವಿರುದ್ಧ ಸೇನೆಯಿಂದ ಕೂಂಬಿಂಗ್ – ಇಬ್ಬರು ಉಗ್ರರ ಮನೆ ಧ್ವಂಸ

ಪಾಕ್ ಉಗ್ರರು ಪಹಲ್ಗಾಮ್ ನಲ್ಲಿ ಪ್ರವಾಸಿಗರ ಮೇಲೆ ಭೀಕರ ದಾಳಿ ನಡೆಸಿದ್ರು. ಇದೀಗ ಭಾರತೀಯ ಸೇನೆಯು ಉಗ್ರರ ವಿರುದ್ಧ ಆಪರೇಷನ್ ತೀವ್ರಗೊಳಿಸಿದೆ. ಜಮ್ಮು ಮತ್ತು ಕಾಶ್ಮೀರ ಪೊಲೀಸರ ಸಹಯೋಗದೊಂದಿಗೆ ಸೇನೆ ಮೆಗಾ ಕೂಂಬಿಂಗ್ ಆರಂಭಿಸಿದೆ. ಪ್ರತೀಕಾರದ ಮೊದಲ ಹೆಜ್ಜೆಯಾಗಿ ಇಬ್ಬರು ಉಗ್ರರ ಮನೆ ಧ್ವಂಸಗೊಂಡಿದೆ.
ಇದನ್ನೂ ಓದಿ: ಕೊಹ್ಲಿ- ಪಡಿಕ್ಕಲ್ ಮಿಂಚಿನಾಟ – ತವರಲ್ಲಿ ಮೊದಲ ಗೆಲುವು ಸಾಧಿಸಿದ RCB
ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಟ್ರಾಲ್‌ನ ಮೊಂಘಮಾ ಪ್ರದೇಶದಲ್ಲಿ ಗುರುವಾರ ರಾತ್ರಿ ನಡೆದ ನಡೆದ ಪ್ರಬಲ ಸ್ಫೋಟದಲ್ಲಿ ಸಕ್ರಿಯವಾಗಿದ್ದ ಇಬ್ಬರು ಭಯೋತ್ಪಾದಕರ ಮನೆ ದ್ವಂಸ ಮಾಡಲಾಗಿದೆ. ಈ ಮನೆ ಆಸಿಫ್ ಶೇಖ್‌ಗೆ ಸೇರಿದ್ದು, ಏಪ್ರಿಲ್ 22 ರಂದು ಕಣಿವೆಯಲ್ಲಿ 26 ಅಮಾಯಕರ ಜೀವವನ್ನು ಬಲಿ ಪಡೆದ ಕ್ರೂರ ಪಹಲ್ಗಾಮ್ ಭಯೋತ್ಪಾದಕ ದಾಳಿ ನಂತರ ಈತನ ಹೆಸರು ಮುನ್ನೆಲೆಗೆ ಬಂದಿತ್ತು. ಈತ ಲಷ್ಕರ್-ಎ-ತೈಬಾ (ಎಲ್‌ಇಟಿ) ನ ಸ್ಥಳೀಯ ಕಮಾಂಡರ್ ಆಗಿದ್ದಾನೆ.
ಪೊಲೀಸ್ ಮೂಲಗಳ ಪ್ರಕಾರ, ಭದ್ರತಾ ಪಡೆಗಳು ಆ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾಗ ಮನೆಯ ಆವರಣದೊಳಗೆ ಕೆಲವು ಅನುಮಾನಾಸ್ಪದ ವಸ್ತುಗಳನ್ನು ಗಮನಿಸಿದ್ದಾರೆ. ಅಪಾಯದ ಮುನ್ಸೂಚನೆ ಅರಿತ ಪಡೆ ಹಿಂದಕ್ಕೆ ಬಂದಿದ್ದಾರೆ.
ಸ್ವಲ್ಪ ಸಮಯದ ನಂತರ ಮನೆಯಲ್ಲಿ ಭಾರೀ ಸ್ಫೋಟ ಸಂಭವಿಸಿತು. ಸ್ಫೋಟಕ್ಕೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಪ್ರಾಥಮಿಕ ಮಾಹಿತಿ ಪ್ರಕಾರ ಮನೆಯ ಒಳಗಡೆ ಇದ್ದ ಅನುಮಾನಾಸ್ಪದ ಸ್ಫೋಟಕ ವಸ್ತುವಿನಿಂದ ಸ್ಫೋಟ ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ.