ಡಿಜೆ ಹಳ್ಳಿ-ಕೆಜಿ ಹಳ್ಳಿ ಸೇರಿ ಹಿಂಸಾಚಾರ ಪ್ರಕರಣಗಳ ಮರು ಪರಿಶೀಲಿಸಿ ಹಿಂಪಡೆಯಲು ಗೃಹ ಸಚಿವರ ಸೂಚನೆ

ಡಿಜೆ ಹಳ್ಳಿ-ಕೆಜಿ ಹಳ್ಳಿ ಸೇರಿ ಹಿಂಸಾಚಾರ ಪ್ರಕರಣಗಳ ಮರು ಪರಿಶೀಲಿಸಿ ಹಿಂಪಡೆಯಲು ಗೃಹ ಸಚಿವರ ಸೂಚನೆ

ಬೆಂಗಳೂರು: ಡಿಕೆ ಹಳ್ಳಿ, ಕೆಜಿ ಹಳ್ಳಿ, ಶಿವಮೊಗ್ಗ ಮತ್ತು ಹುಬ್ಬಳ್ಳಿ ಸೇರಿದಂತೆ ಇತರೆಡೆ ನಡೆದ ಪ್ರತಿಭಟನೆ ಮತ್ತು ಗಲಭೆಗಳ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಈ ಪ್ರತಿಭಟನೆ ಮತ್ತು ಗಲಭೆಗಳಿಗೆ ಸಂಬಂಧಿಸಿದಂತೆ ಪ್ರಕರಣಗಳಡಿ ಬಂಧಿಸಲಾಗಿರುವ ಅಮಾಯಕ ಯುವಕರು ಮತ್ತು ವಿದ್ಯಾರ್ಥಿಗಳ ಮೇಲಿನ ಸುಳ್ಳು ಪ್ರಕರಣಗಳನ್ನು ಹಿಂಪಡೆಯುವಂತೆ ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಮನವಿಯನ್ನು ಪರಿಶೀಲಿಸುವಂತೆ ಗೃಹ ಸಚಿವ ಡಾ. ಜಿ. ಪರಮೇಶ್ವರ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಇದನ್ನೂ ಓದಿ: ಮಣಿಪುರದಲ್ಲಿ ನಿಲ್ಲದ ಹಿಂಸಾಚಾರ – ವಲಸೆ ಬಂದ ವಿದ್ಯಾರ್ಥಿಗಳನ್ನು ಶಾಲೆಗೆ ದಾಖಲಿಸಿಕೊಳ್ಳುವಂತೆ ರಾಜ್ಯ ಸರ್ಕಾರದಿಂದ ಸೂಚನೆ!

ಸಚಿವ ಪರಮೇಶ್ವರ ಅವರು ಜುಲೈ 19ರಂದು ಪ್ರಧಾನ ಕಾರ್ಯದರ್ಶಿ ಕಾರಾಗೃಹಗಳು, ನಾಗರಿಕ ರಕ್ಷಣೆ ಮತ್ತು ಸಹಾಯಕ ಸೇವೆಗಳು (ಪಿಸಿಎಎಸ್), ಗೃಹ ಇಲಾಖೆಗೆ ಬರೆದ ಪತ್ರದಲ್ಲಿ ಶಾಸಕ ಮತ್ತು ಮಾಜಿ ಸಚಿವ ತನ್ವೀರ್ ಸೇಠ್ ಅವರ ಮನವಿ ಪತ್ರವನ್ನು ಉಲ್ಲೇಖಿಸಿದ್ದಾರೆ. ‘ಬೆಂಗಳೂರಿನ ಡಿ.ಜೆ. ಹಳ್ಳಿ ಹಾಗೂ ಕೆ.ಜಿ. ಹಳ್ಳಿ, ಶಿವಮೊಗ್ಗ, ಹುಬ್ಬಳ್ಳಿ ಮತ್ತಿತರ ಕಡೆ ನಡೆದ ಪ್ರತಿಭಟನೆ, ಗಲಭೆಗಳಿಗೆ ಸಂಬಂಧಿಸಿದಂತೆ ಅಮಾಯಕ ಯುವಕರು ಹಾಗೂ ವಿದ್ಯಾರ್ಥಿಗಳನ್ನು ಸುಳ್ಳು ಪ್ರಕರಣಗಳಡಿ ಬಂಧಿಸಲಾಗಿದ್ದು, ಪರಿಶೀಲನೆ ನಡೆಸಿ ನಿಯಮಾನುಸಾರ ಪ್ರಕರಣಗಳನ್ನು ಹಿಂಪಡೆಯುವಂತೆ ಮನವಿ ಮಾಡಲಾಗಿದೆ. ಈ ಸಂಬಂಧ ಪರಿಶೀಲಿಸಿದ ನಂತರ ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ’ ಎಂದು ಗೃಹ ಸಚಿವರ ಪತ್ರದಲ್ಲಿ ತಿಳಿಸಲಾಗಿದೆ.

ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಪತ್ರ ಬೆಂಗಳೂರಿನ ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಹಾಗೂ ಇತರೆ ಗಲಭೆಗಳಲ್ಲಿ ಅಮಾಯಕ ಯುವಕರು ಹಾಗೂ ವಿದ್ಯಾರ್ಥಿಗಳನ್ನು ಸುಳ್ಳು ಪ್ರಕರಣಗಳಲ್ಲಿ ಬಂಧಿಸಲಾಗಿದ್ದು, ಇಂತಹ ಪ್ರಕರಣಗಳನ್ನು ಪರಿಶೀಲನೆ ನಡೆಸಿ, ನಿಯಮಾನುಸಾರ ಅಗತ್ಯ ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗಿದೆ ಎಂದು ನರಸಿಂಹರಾಜ ಕ್ಷೇತ್ರದ ಶಾಸಕ ತನ್ವೀರ್ ಸೇಠ್ ಗೃಹ ಸಚಿವ ಪರಮೇಶ್ವರ್ ಅವರಿಗೆ ಪತ್ರ ಬರೆದಿದ್ದಾರೆ.

2020ರ ಆಗಸ್ಟ್ ತಿಂಗಳಲ್ಲಿ ಆಗಿನ ಪುಲಕೇಶಿನಗರ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಅವರ ಸಂಬಂಧಿಯೊಬ್ಬರು ಸಾಮಾಜಿಕ ಮಾಧ್ಯಮದಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಿದ ಕಾರಣ ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿಯಲ್ಲಿ ಭುಗಿಲೆದ್ದ ಹಿಂಸಾಚಾರದಲ್ಲಿ ಮೂವರು ಸಾವಿಗೀಡಾಗಿದ್ದರು ಮತ್ತು 50ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಗಲಭೆಯಲ್ಲಿ ಶಾಸಕರ ಮನೆ ಹಾಗೂ ಕೆ.ಜಿ. ಹಳ್ಳಿ ಪೊಲೀಸ್ ಠಾಣೆ ಸುಟ್ಟು ಕರಕಲಾಗಿತ್ತು. ಹಿಂದಿನ ಬಿಜೆಪಿ ನೇತೃತ್ವದ ಆಡಳಿತದಲ್ಲಿ ನಡೆದ ಕೆಲವು ಕೋಮು ಘಟನೆಗಳು ಶಿವಮೊಗ್ಗ, ಹುಬ್ಬಳ್ಳಿ ಮತ್ತು ರಾಜ್ಯದ ಇತರ ಕೆಲವು ಸ್ಥಳಗಳಲ್ಲಿ ಹಿಂಸಾತ್ಮಕ ಪ್ರತಿಭಟನೆಗಳಿಗೆ ಕಾರಣವಾಗಿದ್ದವು.

suddiyaana