ಸೆ. 28ಕ್ಕೆ ಸಲಾರ್‌ ರಿಲೀಸ್‌ ಆಗಲ್ಲ! – ಹೊಂಬಾಳೆ ಸಂಸ್ಥೆಯ ಅಧಿಕೃತ ಘೋಷಣೆ

ಸೆ. 28ಕ್ಕೆ ಸಲಾರ್‌ ರಿಲೀಸ್‌ ಆಗಲ್ಲ! – ಹೊಂಬಾಳೆ ಸಂಸ್ಥೆಯ ಅಧಿಕೃತ ಘೋಷಣೆ

ಬಹುನಿರೀಕ್ಷಿತ ಪ್ಯಾನ್‌ ಇಂಡಿಯಾ ಸಿನಿಮಾ ಸಲಾರ್‌ ಬಿಡುಗಡೆಗೆ ಸೆ. 28 ರಂದು ದಿನಾಂಕ ನಿಗದಿ ಮಾಡಲಾಗಿತ್ತು. ಆದರೆ ಬಿಡುಗಡೆ ದಿನಾಂಕ ಮುಂದೂಡಲಾಗಿದೆ ಎಂಬ ಸುದ್ದಿಯೂ ಹರಿದಾಡುತ್ತಿತ್ತು. ಆದರೆ ಹೊಂಬಾಳೆ ಫಿಲ್ಮ್ಸ್‌ ಈ ಬಗ್ಗೆ ಯಾವುದೇ ಮಾಹಿತಿ ಹಂಚಿಕೊಂಡಿರಲಿಲ್ಲ. ಮೌನವಾಗಿಯೇ ಇತ್ತು. ಆದರೆ ಇದೀಗ ಚಿತ್ರತಂಡ ಈ ಬಗ್ಗೆ ಸ್ಪಷ್ಟನೆ ನೀಡಿದೆ. ಸಲಾರ್‌ ಸಿನಿಮಾ ಬಿಡುಗಡೆ ದಿನಾಂಕ ಮುಂದೂಡಲಾಗಿದೆ ಎಂದು ತಿಳಿಸಿದೆ.

ಈ ಬಗ್ಗೆ ಟ್ವೀಟ್‌ ಮಾಡಿ ಮಾಹಿತಿ ಹಂಚಿಕೊಂಡಿರುವ ಹೊಂಬಾಳೆ ಫಿಲ್ಮ್ಸ್‌, ಕಾರಣಾಂತರಗಳಿಂದ ‘ಸಲಾರ್’ ಸಿನಿಮಾದ ಬಿಡುಗಡೆ ವಿಳಂಬ ಆಗುತ್ತಿದೆ ಎಂದು ತಿಳಿಸಿದೆ. ಆದರೆ ಯಾವಾಗ ಚಿತ್ರ ರಿಲೀಸ್‌ ಆಗಲಿದೆ ಎಂದು ತಿಳಿಸಿಲ್ಲ. ಹೀಗಾಗಿ ಸಲಾರ್‌ ಸಿನಿಮಾ ರಿಲೀಸ್‌ಗಾಗಿ ಕಾತುರದಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ.

ಇದನ್ನೂ ಓದಿ: ‘ಪಠಾಣ್’ ನಿರ್ದೇಶಕನ ಜೊತೆ ಪ್ರಭಾಸ್ ಸಿನಿಮಾ – ಮಾಸ್ ಅವತಾರಕ್ಕೆ ಕಾಯ್ತಿದ್ದಾರೆ ಫ್ಯಾನ್ಸ್

ಪ್ರಶಾಂತ್​ ನೀಲ್​ ಅವರು ‘ಸಲಾರ್​’ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ. ಪ್ರಭಾಸ್​ ಅವರಿಗೆ ಜೋಡಿಯಾಗಿ ಶ್ರುತಿ ಹಾಸನ್​ ನಟಿಸುತ್ತಿದ್ದಾರೆ. ಪೃಥ್ವಿರಾಜ್​ ಸಕುಮಾರನ್​ ಅವರಂತಹ ಘಟಾನುಘಟಿ ಕಲಾವಿದರು ಕೂಡ ಈ ಚಿತ್ರದಲ್ಲಿದ್ದಾರೆ. ಈಗಾಗಲೇ ಬಿಡುಗಡೆ ಆಗಿರುವ ಟೀಸರ್​ಗೆ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ. ಆದಷ್ಟು ಬೇಗ ‘ಸಲಾರ್​’ ನೋಡಬೇಕು ಎಂಬುದು ಫ್ಯಾನ್ಸ್​ ಆಸೆ ಆಗಿತ್ತು. ಆದರೆ ರಿಲೀಸ್​ ದಿನಾಂಕ ಮುಂದೂಡಿಕೆ ಆಗಿದ್ದು, ಇನ್ನೂ ಒಂದಷ್ಟು ತಿಂಗಳು ಕಾಯುವುದು ಅನಿವಾರ್ಯ ಆಗಿದೆ.

‘ಸಲಾರ್​’ ಸಿನಿಮಾ ಮೇಲೆ ಅಭಿಮಾನಿಗಳಿಗೆ ನಿರೀಕ್ಷೆ ಜಾಸ್ತಿ ಇದೆ. ಹಾಗಾಗಿ ಆ ನಿರೀಕ್ಷೆಯ ಮಟ್ಟವನ್ನು ತಲುಪಲು ಚಿತ್ರತಂಡ ಪ್ರಯತ್ನಿಸುತ್ತಿದೆ. ಅದಕ್ಕೆ ಸಹಜವಾಗಿಯೇ ಸಮಯ ಹಿಡಿಯುತ್ತಿದೆ. ಆ ಕಾರಣದಿಂದ ಅಂದುಕೊಂಡ ದಿನಾಂಕದಲ್ಲಿ ‘ಸಲಾರ್​’ ಚಿತ್ರವನ್ನು ಬಿಡುಗಡೆ ಮಾಡಲು ಸಾಧ್ಯವಾಗುತ್ತಿಲ್ಲ. ಪ್ರೇಕ್ಷಕರಿಗೆ ಇಷ್ಟವಾಗುವ ರೀತಿಯಲ್ಲಿ ಸಿನಿಮಾವನ್ನು ಕಟ್ಟಿಕೊಡಬೇಕು ಎಂಬ ಉದ್ದೇಶದಿಂದ ರಿಲೀಸ್​ ದಿನಾಂಕ ಮುಂದೂಡಲಾಗಿದೆ.

Shwetha M