ಭಾರತೀಯ ಚಿತ್ರರಂಗದಲ್ಲಿ ದಾಖಲೆ ಬರೆದ ಸಲಾರ್ ಟೀಸರ್ – ಟ್ರೇಲರ್ ಬಗ್ಗೆ ಮಹತ್ವದ ಮಾಹಿತಿ ನೀಡಿದ ಚಿತ್ರತಂಡ

ಭಾರತೀಯ ಚಿತ್ರರಂಗದಲ್ಲಿ ದಾಖಲೆ ಬರೆದ ಸಲಾರ್ ಟೀಸರ್ – ಟ್ರೇಲರ್ ಬಗ್ಗೆ ಮಹತ್ವದ ಮಾಹಿತಿ ನೀಡಿದ ಚಿತ್ರತಂಡ

ಟಾಲಿವುಡ್ ರೆಬೆಲ್ ಸ್ಟಾರ್ ಪ್ರಭಾಸ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ಸಲಾರ್. ಸದ್ಯ ಚಿತ್ರದ ಟೀಸರ್ ರಿಲೀಸ್ ಆಗಿದ್ದು ಸಾಮಾಜಿಕ ಜಾಲತಾಣದಲ್ಲಿ ಹಲ್ ಚಲ್ ಸೃಷ್ಟಿಸಿದೆ. ಟೀಸರ್ ಬಿಡುಗಡೆಯಾದ ಎರಡೇ ದಿನಕ್ಕೆ 10ಕೋಟಿಗೂ ಹೆಚ್ಚು ಜನರು ಟೀಸರ್ ವೀಕ್ಷಣೆ ಮಾಡಿದ್ದಾರೆ. ಹೀಗಾಗಿ ಚಿತ್ರ ಬಿಡುಗಡೆಗೂ ಮೊದಲೇ ಸಲಾರ್ ಸಿನಿಮಾ ಕೆಲ ದಾಖಲೆಗಳನ್ನೇ ಸೃಷ್ಟಿಸಿದೆ. ಟೀಸರ್‌ಗೆ ಸಿಕ್ಕಿರುವ ಅಭೂತಪೂರ್ವ ಪ್ರತಿಕ್ರಿಯೆಗೆ ಹೊಂಬಾಳೆ ಫಿಲ್ಮ್ಸ್ ಧನ್ಯವಾದಗಳನ್ನು ಅರ್ಪಿಸಿದೆ.

ಇದನ್ನೂ ಓದಿ : ನಿರ್ಮಾಪಕ ಕುಮಾರ್ ವಿರುದ್ಧ ಕಾನೂನು ಸಮರ ಸಾರಿದ ಕಿಚ್ಚ ಸುದೀಪ್ – 10 ಕೋಟಿ ಮಾನನಷ್ಟ ಮೊಕದ್ದಮೆ!

ಬಹುತೇಕ ಸಿನಿಮಾಗಳ ಟ್ರೈಲರ್ ಸಂಜೆ ಸಮಯದಲ್ಲಿ ರಿಲೀಸ್ ಆಗುತ್ತದೆ. ಆದರೆ ಜುಲೈ 6ರಂದು ಮುಂಜಾನೆ 5 ಗಂಟೆಗೆ ಸಲಾರ್ ಸಿನಿಮಾದ ಟೀಸರ್ ರಿಲೀಸ್ ಆಗಿತ್ತು. ಮುಂಜಾನೆ ಟೀಸರ್ ರಿಲೀಸ್ ಆದರೂ ಕೂಡಾ ಯೂಟ್ಯೂಬ್‌ನಲ್ಲಿ ಹಲವು ದಾಖಲೆಗಳನ್ನು ಸೃಷ್ಟಿಸಿದೆ. ತಮ್ಮ ನಿರ್ಮಾಣದ ಸಲಾರ್ ಟೀಸರ್‌ಗೆ ಜನರಿಂದ ಸಿಗುತ್ತಿರುವ ಪ್ರತಿಕ್ರಿಯೆ ಬಗ್ಗೆ ಹೊಂಬಾಳೆ ಫಿಲಮ್ಸ್ ನಿರ್ಮಾಣ ಸಂಸ್ಥೆ ಸಂತಸ ಹಂಚಿಕೊಂಡಿದ್ದು ಜೊತೆಗೆ ಸಲಾರ್ ಟ್ರೈಲರ್ ಬಗ್ಗೆಯೂ ಮಾಹಿತಿ ನೀಡಿದೆ.

ಹೊಂಬಾಳೆ ಫಿಲಮ್ಸ್ ಕಡೆಯಿಂದ ಹೃದಯ ತುಂಬಿದ ಧನ್ಯವಾದಗಳು. ತಮ್ಮೆಲ್ಲರ ಪ್ರೀತಿಯ ಅಭಿಮಾನದ ಪ್ರೋತ್ಸಾಹಕ್ಕೆ ನಾವು ಆಭಾರಿ. ಭಾರತೀಯ ಸಿನಿಮಾ ಸಾಮರ್ಥ್ಯದ ಸಂಕೇತವಾಗಿ ಹೊರಹೊಮ್ಮಿರುವ ‘ಸಲಾರ್’ ಕ್ರಾಂತಿಗೆ ಮುನ್ನುಡಿಯಾಗಿ ಚಿತ್ರಪ್ರೇಮಿಗಳಿಂದ ದೊರಕಿದ ಪ್ರೀತಿಪೂರ್ವಕ ಬೆಂಬಲದಿಂದ ನಮ್ಮ ಮನತುಂಬಿದೆ. ಭಾರತೀಯ ಚಿತ್ರ ‘ಸಲಾರ್’ ಸಿನಿಮಾ ಟೀಸರ್ 10 ಕೋಟಿ ಚಿತ್ರರಸಿಕರನ್ನು ತಲುಪಿ ಭಾರತೀಯ ಸಿನಿಮಾರಂಗದಲ್ಲಿ ಹೊಸ ದಾಖಲೆ ಬರೆದಿದೆ. ನಿಮ್ಮ ಅಭಿಮಾನದ ಬೆಂಬಲಕ್ಕೆ ನಾವು ಸದಾ ಋಣಿಗಳು. ನಿಮ್ಮ ಅಚಲ ಬೆಂಬಲವು ನಮ್ಮ ಆಸಕ್ತಿಗೆ ಚೈತನ್ಯ ತುಂಬಿ ಅಸಾಧಾರಣವಾದುದನ್ನು ಪ್ರೇಕ್ಷಕರ ಮುಂದಿಡಲು ಪ್ರೇರೇಪಿಸುತ್ತಿದೆ ಎಂದು ಹೊಂಬಾಳೆ ಫಿಲಮ್ಸ್ ಧನ್ಯವಾದ ಅರ್ಪಿಸಿದೆ.

ಹಾಗೂ ಭಾರತೀಯ ಸಿನಿಮಾದ ಭವ್ಯತೆಯನ್ನು ಸಾರಲಿರುವ ಅತ್ಯಂತ ನಿರೀಕ್ಷಿತ ಚಿತ್ರದ ಟ್ರೈಲರ್ ಅನ್ನು ಬಿಡುಗಡೆಗೊಳಿಸಲು ನಾವು ಸಿದ್ಧರಾಗುತ್ತಿದ್ದೇವೆ, ಆಗಸ್ಟ್ ಕೊನೆಯಲ್ಲಿ ಬಿಡುವು ಮಾಡಿಕೊಳ್ಳಲು ಮರೆಯದಿರಿ. ಅವಿಸ್ಮರಣೀಯ ಅನುಭವ ನೀಡಿ ಪುಪಂಚದಾದ್ಯಂತ ಸದ್ದು ಮಾಡಲಿರುವ ಟ್ರೈಲರ್ ಗಾಗಿ ನಿರೀಕ್ಷಿಸಿ. ಮರೆಯಲಾಗದ ಅನುಭವ ನಿಮ್ಮದಾಗಿಸಿಕೊಳ್ಳಲು ತಯಾರಾಗಿ. ಕುತೂಹಲಭರಿತ ರೋಮಾಂಚನಕಾರಿ ಪಯಣವನ್ನು ನಾವು ಮುಂದುವರಿಸೋಣ, ಚರಿತ್ರೆ ನಿರ್ಮಿಸೋಣ ಹಾಗೂ ಭಾರತೀಯ ಸಿನಿಮಾದ ಸಾಮರ್ಥ್ಯವನ್ನು ಸಂಭ್ರಮಿಸೋಣ’ ಎಂದು ಹೊಂಬಾಳೆ ಫಿಲಮ್ಸ್ ಹೇಳಿಕೆಯನ್ನು ಬಿಡುಗಡೆ ಮಾಡಿದೆ.

ಸಲಾರ್ ಸಿನಿಮಾದ ಟ್ರೈಲರ್ ಆಗಸ್ಟ್ ತಿಂಗಳಲ್ಲಿ ಬಿಡುಗಡೆ ಆಗಲಿರುವುದನ್ನು ಹೊಂಬಾಳೆ ಖಾತ್ರಿಪಡಿಸಿದೆ. ಟ್ರೈಲರ್ ಬಿಡುಗಡೆ ಆದ ಕೆಲವು ದಿನಗಳಲ್ಲಿ ಅಂದರೆ ಸೆಪ್ಟೆಂಬರ್ 28 ಕ್ಕೆ ಸಲಾರ್ ಸಿನಿಮಾ ವಿಶ್ವದಾದ್ಯಂತ ಅದ್ಧೂರಿಯಾಗಿ ಬಿಡುಗಡೆ ಆಗಲಿದೆ. ಸಲಾರ್ ನ ಮೊದಲ ಭಾಗವಷ್ಟೆ ಸೆಪ್ಟೆಂಬರ್ 28ಕ್ಕೆ ಬಿಡುಗಡೆ ಆಗಲಿದ್ದು, ಸಲಾರ್ ನ ಎರಡನೇ ಭಾಗದ ಬಿಡುಗಡೆ ಯಾವಾಗ ಎಂಬ ಬಗ್ಗೆ ಚಿತ್ರತಂಡ ಮಾಹಿತಿ ನೀಡಿಲ್ಲ. ಸಲಾರ್ ಸಿನಿಮಾವನ್ನು ಕನ್ನಡದ ಪ್ರಶಾಂತ್ ನೀಲ್ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾದಲ್ಲಿ ಪ್ರಭಾಸ್ ಜೊತೆಗೆ ಹಲವು ಸ್ಟಾರ್ ನಟರು ನಟಿಸಿದ್ದಾರೆ. ಮಲಯಾಳಂನ ಸ್ಟಾರ್ ನಟ ಪೃಥ್ವಿರಾಜ್ ಸುಕುಮಾರನ್, ನಾಯಕಿಯಾಗಿ ಶ್ರುತಿ ಹಾಸನ್, ಕನ್ನಡದ ನಟರಾದ ಮಧು ಗುರುಸ್ವಾಮಿ, ಪ್ರಮೋದ್ ಸೇರಿದಂತೆ ತೆಲುಗು ತಮಿಳು ನಟರಾದ ಜಗಪತಿ ಬಾಬು, ವಿಜಯ್ ಸೇತುಪತಿ ಸಹ ಇದ್ದಾರೆ ಎನ್ನಲಾಗುತ್ತಿದೆ.

suddiyaana