ಪರಸ್ಪರ ಕೈ ಹಿಡಿದುಕೊಂಡು ದಯಾಮರಣಕ್ಕೆ ಶರಣಾದ ಹಾಲೆಂಡ್ ನ ಮಾಜಿ ಪ್ರಧಾನಿ ದಂಪತಿ!

ಹಾಲೆಂಡ್ ನ ಮಾಜಿ ಪ್ರಧಾನಿ ಡ್ರೈಸ್ ವ್ಯಾನ್ ಆ್ಯಗ್ಟ್ ಮತ್ತು ಅವರ ಪತ್ನಿ ಯೂಜೆನಿ ಆ್ಯಗ್ಟ್ ಅವರು ನಿಧನ ಹೊಂದಿದ್ದಾರೆ. ಇಬ್ಬರು ಪರಸ್ಪರ ಕೈಹಿಡಿದುಕೊಂಡು ಇಹಲೋಕ ತ್ಯಜಿಸಿದ್ದಾರೆ
ಡ್ರೈಸ್-ಯೂಜೆನಿ ದಂಪತಿಗೆ 93 ವರ್ಷ. “ನಮ್ಮಿಬ್ಬರಿಂದ ಬದುಕಲಾಗದು. ಆದ್ದರಿಂದ ದಯಾಮರಣಕ್ಕೆ ಅವಕಾಶ ಕೊಡಿ’ ಎಂದು ಇಬ್ಬರು ಮನವಿ ಮಾಡಿದ್ದರು. ಅವರಿಬ್ಬರ ಮನವಿಗೆ ಒಪ್ಪಿಗೆ ಸೂಚಿಸಿದ ಅಲ್ಲಿನ ಸರ್ಕಾರ ಅವರಿಬ್ಬರಿಗೂ ದಯಾಮರಣಕ್ಕೆ ಅವಕಾಶ ನೀಡಿದೆ. ಫೆ. 5ರಂದೇ ಇಬ್ಬರು ಮರಣ ಹೊಂದಿದ್ದರೂ, ಮಾಜಿ ಪ್ರಧಾನಿಯೇ ಸ್ಥಾಪಿಸಿರುವ “ರೈಟ್ಸ್ ಫೋರಮ್’ . ದಂಪತಿಯ ಕುಟುಂಬಸ್ಥರ ಅನುಮತಿ ಪಡೆದು ಬುಧವಾರ ಸುದ್ದಿ ಪ್ರಕಟಿಸಿದೆ.
ಇದನ್ನೂ ಓದಿ: ಮೂರನೇ ದಿನಕ್ಕೆ ಕಾಲಿಟ್ಟ ‘ದೆಹಲಿ ಚಲೋ’ – ರೈತರನ್ನು ಹಿಮ್ಮೆಟ್ಟಿಸಲು ʻಶಬ್ದಾಸ್ತ್ರʼ ಪ್ರಯೋಗ!
ದಂಪತಿ ದಯಾಮರಣ ಕೋರಿದ್ದೇಕೆ?
ಪತ್ನಿಯನ್ನು ಡ್ರೈಸ್ ಸದಾ ನನ್ನ ಹುಡುಗಿ ಎಂದೇ ಪ್ರೀತಿಯಿಂದ ಸಂಬೋಧಿಸುತ್ತಿದ್ದರು. 2019ರಲ್ಲಿ ಡ್ರೈಸ್ಗೆ ಬ್ರೈನ್ ಹ್ಯಾಮರೇಜ್ ಆಯ್ತು. ಅಲ್ಲಿಂದ ಅವರ ಶಾರೀರಿಕ ಸ್ವಾಧೀನ ತಪ್ಪಿತು. ಪೂರ್ಣ ಇನ್ನೊಬ್ಬರ ಮೇಲೆ ಅವಲಂಬಿತರಾಗಬೇಕಾದ ಸ್ಥಿತಿ. ಇನ್ನು 93 ವರ್ಷದ ಪತ್ನಿ ಯೂಜೆನಿಯೂ ದುರ್ಬಲರಾಗಿದ್ದರು. ಈ ನೋವನ್ನು ತಡೆದುಕೊಳ್ಳಲು ಸಾಧ್ಯವಿಲ್ಲ ಎನ್ನಿಸಿದಾಗ ಪರಸ್ಪರ ಒಟ್ಟಿಗೆ ದೇಹಬಿಡಲು ನಿರ್ಧರಿಸಿದರು.
ಹಾಲೆಂಡ್ನಲ್ಲಿ ಯುಥನೇಶಿಯ ನಿಯಮದ ಪ್ರಕಾರ, ದಯಾಮರಣ ಕ್ಕೊಳಗಾಗಲು ಅವಕಾಶವಿದೆ. ತೀವ್ರ ಪರಿಶೀಲನೆ ಬಳಿಕ, ಯುಥನೇಶಿಯ ಪ್ರಕಾರ ಇಂಜೆಕ್ಷನ್ ಪಡೆಯಲು ದಂಪತಿಗೆ ಅನುಮತಿ ನೀಡಲಾಗಿದೆ.
ಡ್ರೈಸ್ ಆ್ಯಗ್ಟ್ 1977 ರಿಂದ 82 ರವರೆಗೆ ಪ್ರಧಾನಿಯಾಗಿದ್ದರು. ಕ್ರಿಶ್ಚಿಯನ್ ಡೆಮೋಕ್ರಾಟಿಕ್ ಅಪೀಲ್ ಪಕ್ಷದ ಮೊದಲ ಪ್ರಧಾನಿ ಅವರು. ಜೀವನವಿಡೀ ಮೌಲ್ಯಗಳನ್ನು ಪ್ರತಿಪಾದಿಸಿದ್ದ ಅವರು, ಪ್ಯಾಲೆಸ್ತೀನಿಯನ್ನರ ಹಕ್ಕುಗಳಿಗಾಗಿ ರೈಟ್ಸ್ ಫೋರಮ್ ಅನ್ನು ಸ್ಥಾಪಿಸಿದ್ದರು. ಡ್ರೈಸ್ ಆ್ಯಗ್ಟ್ ಮತ್ತವರ ಪತ್ನಿ ಯೂಜೆನಿ 70 ವರ್ಷಗಳಿಂದ ಒಟ್ಟಿಗೆ ಬದುಕಿದ್ದರು. ಇಬ್ಬರ ಆರೋಗ್ಯ ತೀವ್ರವಾಗಿ ಹದಗೆಟ್ಟಿದ್ದಾಗಲೂ, ಬೇರೆಬೇರೆ ಬದುಕಲು ಸಾಧ್ಯವಿಲ್ಲ ಎಂಬ ಮನಃಸ್ಥಿತಿ ಹೊಂದಿದ್ದರು. ಇದೀಗ ಈ ದಂಪತಿ ದಯಾಮರಣಕ್ಕೆ ಸರ್ಕಾರ ಸಮ್ಮತಿ ಪಡೆದು ಇಹಲೋಕ ತ್ಯಜಿಸಿದ್ದಾರೆ.