ಜಲನಗರಿಯಾದ ರಾಷ್ಟ್ರರಾಜಧಾನಿ ದೆಹಲಿ – ಭಾನುವಾರದವರೆಗೆ ಶಾಲಾ – ಕಾಲೇಜುಗಳಿಗೆ ರಜೆ

ಜಲನಗರಿಯಾದ ರಾಷ್ಟ್ರರಾಜಧಾನಿ ದೆಹಲಿ – ಭಾನುವಾರದವರೆಗೆ ಶಾಲಾ – ಕಾಲೇಜುಗಳಿಗೆ ರಜೆ

ರಾಷ್ಟ್ರರಾಜಧಾನಿ ದೆಹಲಿ ಅಕ್ಷರಶಃ ಜಲನಗರಿಯಾಗಿದೆ. ಯಮುನಾ ನದಿ ಉಕ್ಕಿ ಹರಿಯುತ್ತಿದ್ದು, ದೆಹಲಿಯ ರಸ್ತೆಗಳೆಲ್ಲಾ ಜಲಾವೃತಗೊಂಡಿವೆ. ದೆಹಲಿಯ ಹೆಚ್ಚಿನ ಭಾಗವನ್ನು ಯಮುನಾ ನದಿ ಆವರಿಸಿಕೊಂಡಿದ್ದು, ಪ್ರವಾಹಕ್ಕೆ ಜನಜೀವನ ಕೂಡಾ ಅಸ್ತವ್ಯಸ್ತಗೊಂಡಿದೆ. ಪ್ರವಾಹದ ಹಿನ್ನಲೆಯಲ್ಲಿ ದೆಹಲಿಯಲ್ಲಿ ಭಾನುವಾರದವರೆಗೆ ಶಾಲಾ-ಕಾಲೇಜು ಮತ್ತು ವಿಶ್ವವಿದ್ಯಾಲಯಗಳಿಗೆ ರಜೆ ಘೋಷಣೆ ಮಾಡಲಾಗಿದೆ.

ಇದನ್ನೂ ಓದಿ: ಹರಿಯಾಣದಲ್ಲಿ ಮಳೆ ಆರ್ಭಟ, ದೆಹಲಿಯಲ್ಲಿ ಪ್ರವಾಹ – ಕೇಂದ್ರ ಸರ್ಕಾರ ಮಧ್ಯಪ್ರವೇಶಿಸುವಂತೆ ಸಿಎಂ ಕೇಜ್ರಿವಾಲ್ ಮನವಿ

ರಜೆ ಘೋಷಣೆ ಮಾಡಿರುವ ಬಗ್ಗೆ ಮಾಹಿತಿ ನೀಡಿರುವ ಸಿಎಂ ಅರವಿಂದ್ ಕೇಜ್ರಿವಾಲ್, “ನಾವು ಡಿಡಿಎಂಎ ಸಭೆ ನಡೆಸಿದ್ದೇವೆ. ಹಲವಾರು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ಶಾಲೆಗಳು, ಕಾಲೇಜುಗಳು ಮತ್ತು ವಿಶ್ವವಿದ್ಯಾನಿಲಯಗಳು ಭಾನುವಾರದವರೆಗೆ ಮುಚ್ಚಲ್ಪಡುತ್ತವೆ ಎಂದು ಹೇಳಿದ್ದಾರೆ. ಇನ್ನು ಅಗತ್ಯ ಸೇವೆಗಳನ್ನು ಒದಗಿಸುವ ಹೊರತುಪಡಿಸಿ ಎಲ್ಲಾ ಸರ್ಕಾರಿ ಕಚೇರಿಗಳು ಕಾರ್ಯನಿರ್ವಹಿಸುತ್ತವೆ ಎಂದು ಕೇಜ್ರಿವಾಲ್ ಹೇಳಿದ್ದಾರೆ. ಮನೆಯಿಂದ ಕೆಲಸ ಮಾಡಲು ಖಾಸಗಿ ಕಚೇರಿಗಳಿಗೂ ಸಲಹೆ ನೀಡಲಾಗುತ್ತಿದೆ ಎಂದಿದ್ದಾರೆ. ಇಷ್ಟೇ ಅಲ್ಲದೇ, ಯಮುನಾ ನದಿಯ ಮಟ್ಟ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವಜೀರಾಬಾದ್, ಚಂದ್ರವಾಲ್ ಮತ್ತು ಓಖ್ಲಾದಲ್ಲಿನ ಸಂಸ್ಕರಣಾ ಘಟಕಗಳನ್ನು ಮುಚ್ಚುವುದರಿಂದ ನಗರದ ಕೆಲವು ಭಾಗಗಳಲ್ಲಿ ನೀರು ಪೂರೈಕೆಯ ಮೇಲೆ ಪರಿಣಾಮ ಬೀರಬಹುದು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಗುರುವಾರ ಹೇಳಿದ್ದಾರೆ.

ಯಮುನಾ ನದಿ ಮಟ್ಟವು ದಾಖಲೆಯ ಮಟ್ಟಕ್ಕೆ ಏರುವುದರೊಂದಿಗೆ, ದೆಹಲಿಯ ಸೆಕ್ರೆಟರಿಯೇಟ್ ವಸತಿ ಸೇರಿದಂತೆ ಹಲವಾರು ಪ್ರಮುಖ ಪ್ರದೇಶಗಳು ಗುರುವಾರ ಜಲಾವೃತವಾಗಿದೆ. ಇನ್ನು ಪ್ರವಾಹದ ಹಿನ್ನಲೆಯಲ್ಲಿ ಯಮುನಾ ನದಿ ನೀರಿನ ಮಟ್ಟ ಹೆಚ್ಚುತ್ತಿರುವ ಕಾರಣ ಮುನ್ನೆಚ್ಚರಿಕೆ ಕ್ರಮವಾಗಿ ದೆಹಲಿ ಮೆಟ್ರೋ ರೈಲುಗಳಿಗೆ ವೇಗ ಮಿತಿ ಹೇರಲಾಗಿದೆ. ನಾಲ್ಕು ಯಮುನಾ ಸೇತುವೆಗಳನ್ನು ದಾಟುವ ಮೆಟ್ರೋ ರೈಲುಗಳು ಗಂಟೆಗೆ 30 ಕಿಮೀ ವೇಗದಲ್ಲಿ ಸಂಚರಿಸುವಂತೆ ಸೂಚಿಸಲಾಗಿದೆ ಎಂದು ಡಿಎಂಆರ್‌ಸಿ ಗುರುವಾರ ತಿಳಿಸಿದೆ. “ಯಮುನಾ ನದಿಯ ಹೆಚ್ಚುತ್ತಿರುವ ನೀರಿನ ಮಟ್ಟದಿಂದಾಗಿ, ಮುನ್ನೆಚ್ಚರಿಕೆ ಕ್ರಮವಾಗಿ ನದಿಯ ಮೇಲಿನ ಎಲ್ಲಾ ನಾಲ್ಕು ಮೆಟ್ರೋ ಸೇತುವೆಗಳ ಮೂಲಕ ರೈಲುಗಳು 30 ಕಿಲೋಮೀಟರ್ ವೇಗದಲ್ಲಿ ಹಾದುಹೋಗುತ್ತಿವೆ” ಎಂದು ದೆಹಲಿ ಮೆಟ್ರೋ ರೈಲು ನಿಗಮ (ಡಿಎಂಆರ್ಸಿ) ಟ್ವೀಟ್ ಮಾಡಿದೆ. ಯಮುನಾ ನದಿಯ ನೀರಿನ ಮಟ್ಟ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಯಮುನಾ ನದಿಯ ಮೇಲಿನ ಮೆಟ್ರೋ ಸೇತುವೆಗಳನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡುತ್ತಿದ್ದೇವೆ. ಏತನ್ಮಧ್ಯೆ, ಯಮುನಾ ನದಿಯ ನೀರಿನ ಮಟ್ಟ ಹೆಚ್ಚುತ್ತಿರುವ ಕಾರಣ ನೀಲಿ ಮಾರ್ಗದ ಯಮುನಾ ಬ್ಯಾಂಕ್ ಮೆಟ್ರೋ ನಿಲ್ದಾಣದಲ್ಲಿ ಪ್ರಯಾಣಿಕರ ಪ್ರವೇಶ ಮತ್ತು ನಿರ್ಗಮನವನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ ಎಂದು ಡಿಎಂಆರ್‌ಸಿ ಅಧಿಕಾರಿಗಳು ತಿಳಿಸಿದ್ದಾರೆ.

suddiyaana