ಕರಾವಳಿ, ಮಲೆನಾಡು ಭಾಗಗಳಲ್ಲಿ ಭಾರೀ ಮಳೆ – ಕೊಡಗಿನಲ್ಲಿ ಜುಲೈ 7 ಕ್ಕೆ ಶಾಲಾ ಕಾಲೇಜುಗಳಿಗೆ ರಜೆ
ಕರಾವಳಿ ಜಿಲ್ಲೆಗಳಲ್ಲಿ ವರುಣನ ಆರ್ಭಟ ಮುಂದುವರೆದಿದೆ. ಮತ್ತೊಂದೆೆಡೆ ಕೊಡಗು ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಹೀಗಾಗಿ ಮುಂಜಾಗೃತ ಕ್ರಮವಾಗಿ ಶುಕ್ರವಾರ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಭಾಗಮಂಡಲದಲ್ಲಿ ಕಾವೇರಿ ನದಿಯ ನೀರಿನಮಟ್ಟ ಏರಿಕೆಯಾಗಿದ್ದು ತ್ರಿವೇಣಿ ಸಂಗಮ ಮುಳುಗಡೆಯಾಗಿದೆ.
ಕೊಡಗಿನಲ್ಲಿ ಮಳೆಯ ಅಬ್ಬರಕ್ಕೆ ಮಡಿಕೇರಿ, ಭಾಗಮಂಡಲ ರಸ್ತೆ ಸಂಪೂರ್ಣ ಜಲಾವೃತವಾಗಿದೆ. ಸದ್ಯ ಸಂಚಾರಕ್ಕೆ ಸಾರ್ವಜನಿಕರು ಅಪೂರ್ಣ ಫ್ಲೈಓವರ್ ಬಳಸುತ್ತಿದ್ದಾರೆ. ಭಾಗಮಂಡಲ-ವಿರಾಜಪೇಟೆ ರಸ್ತೆಯೂ ಜಲಾವೃತವಾಗುವ ಸಾಧ್ಯತೆ ಎದುರಾಗಿದೆ.
ಮತ್ತೊಂದೆಡೆ ಮಲೆನಾಡು ಜಿಲ್ಲೆಗಳಲ್ಲೂ ಮಳೆರಾಯನ ಆರ್ಭಟ ಮುಂದುವರೆದಿದೆ. ಶಿವಮೊಗ್ಗದಲ್ಲಿ ಧಾರಾಕಾರ ಮಳೆ ಸುರಿದ ಪರಿಣಾಮ ಗಾಜನೂರಿನ ತುಂಗಾ ಜಲಾಶಯ ಭರ್ತಿಯಾಗಿದೆ. ಗುರುವಾರ ಮುಂಜಾನೆ 2 ಗೇಟ್‌ಗಳ ಮೂಲಕ 2 ಸಾವಿರ ಕ್ಯೂಸೆಕ್ ಹೆಚ್ಚುವರಿ ನೀರನ್ನು ಜಲಾಶಯದಿಂದ ಬಿಡುಗಡೆ ಮಾಡಲಾಗಿದೆ. ಜಲಾಶಯದ ಗರಿಷ್ಠ ಮಟ್ಟ 584.24 ಮೀಟರ್ ಇದ್ದು, ಜಲಾಶಯ ಗರಿಷ್ಠ ಮಟ್ಟವನ್ನು ತಲುಪಿದೆ.
ಹಾಸನ ಜಿಲ್ಲೆಯಲ್ಲೂ ಮಳೆ ಮುಂದುವರೆದಿದೆ. ಸಕಲೇಶಪುರ ತಾಲೂಕಿನ ಹಲವೆಡೆ ಮಳೆಯಿಂದ ಹಾನಿಯುಂಟಾಗಿದೆ. ಹಾನಬಾಳು ಗ್ರಾಮದ ಪರಮೇಶ್-ಕಮಲ ಎಂಬ ವೃದ್ಧ ದಂಪತಿಯ ಮನೆಯ ಮೇಲೆ ಮರ ಬಿದ್ದಿದೆ. ಮರ ಬಿದ್ದ ಪರಿಣಾಮ ವಾಸದ ಮನೆ ಸಂಪೂರ್ಣ ಜಖಂಗೊಂಡಿದ್ದು, ವೃದ್ಧ ದಂಪತಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕಾಫಿನಾಡು ಮಲೆನಾಡಲ್ಲಿ ಮಳೆ ಅಬ್ಬರ ಮುಂದುವರೆದಿದೆ. ಇದರಿಂದಾಗಿ ಕಳಸ-ಕುದುರೆಮುಖ ರಸ್ತೆಯಲ್ಲಿ ಬಿರುಕು ಕಂಡುಬಂದಿದೆ. ಕಳಸದಿಂದ 1 ಕಿ.ಮೀ. ದೂರದಲ್ಲಿ ರಸ್ತೆ ಬಿರುಕು ಕಾಣಿಸಿಕೊಂಡಿದ್ದು, ಈಗ ವಾಹನ ಸವಾರರಿಗೆ ಆತಂಕ ಎದುರಾಗಿದೆ. ಕಳೆದ ವರ್ಷ ರಸ್ತೆ ಕುಸಿತ ಕಂಡಿದ್ದ ಸ್ಥಳದಲ್ಲಿಯೇ ಈ ವರ್ಷವೂ ಕೂಡ ರಸ್ತೆ ಬಿರುಕು ಕಾಣಿಸಿಕೊಂಡಿದೆ. ಇನ್ನು ರಸ್ತೆ ಕುಸಿಯದಂತೆ ಗೋಡೆ (ವಾಲ್) ನಿರ್ಮಾಣ ಮಾಡಲಾಗಿತ್ತು. ಆದರೆ, ಈಗ ಕಾಮಗಾರಿ ನಡೆದ ಸ್ಥಳದ ರಸ್ತೆಯಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಗೋಡೆ ಸಮೇತವೇ ಕುಸಿಯುವ ಆತಂಕ ಎದುರಾಗಿದೆ.