ಸಾಧನೆಗಳ ಶಿಖರ ರೋಹಿತ್ ಶರ್ಮಾ – 10 ವರ್ಷಗಳ ಕಾಲ ಎಂಐ ತಂಡದ ನಾಯಕನಾಗಿದ್ದ ಹಿಟ್ಮ್ಯಾನ್!
ಕ್ರಿಕೆಟ್ ಜಗತ್ತಿನ ಶ್ರೀಮಂತ ಲೀಗ್ ಆಗಿರುವ ಐಪಿಎಲ್ ದೇಶ, ಭಾಷೆಗಳ ಗಡಿ ಮೀರಿ ಕ್ರೀಡಾಭಿಮಾನಿಗಳನ್ನ ರಂಜಿಸುತ್ತಿದೆ. ಕೋಟಿ ಕೋಟಿ ಭಾರತೀಯರಂತೂ ಐಪಿಎಲ್ ಹಬ್ಬವನ್ನ ಎಂಜಾಯ್ ಮಾಡ್ತಿದ್ದಾರೆ. ಅದ್ರಲ್ಲೂ ಐಪಿಎಲ್ ಟೂರ್ನಿಯಲ್ಲಿ ಮಹೇಂದ್ರ ಸಿಂಗ್ ಧೋನಿ, ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಈ ಮೂವರು ದಿಗ್ಗಜ ಆಟಗಾರರೇ ಸೆಂಟರ್ ಆಫ್ ಅಟ್ರಾಕ್ಷನ್. ರೋಹಿತ್ ಶರ್ಮಾ ಅವರ ಕುರಿತ ಮಾಹಿತಿ ಇಲ್ಲಿದೆ..
ರೋಹಿತ್ ಶರ್ಮಾ ಟೀಂ ಇಂಡಿಯಾ ಕಂಡ ಒಬ್ಬ ಶ್ರೇಷ್ಠ ನಾಯಕ. ಎಲ್ಲಾ ಮಾದರಿಯಲ್ಲೂ ಒಬ್ಬ ನಾಯಕನಾಗಿ ಭಾರತವನ್ನ ಗೆಲ್ಲಿಸಿಕೊಟ್ಟ ದಿಟ್ಟ ಆಟಗಾರ. ಅದ್ರಲ್ಲೂ ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ನಾಯಕನಾಗಿ ಮಾಡಿದ ಸಾಧನೆಗಳು ಅಷ್ಟಿಷ್ಟಲ್ಲ.
ಇದನ್ನೂ ಓದಿ: ಹೊಸ ದೋಸ್ತಿ.. ಹಳೇ ಕುಸ್ತಿ! – ಬಿಜೆಪಿಗಾಗಿ ಮಾತ್ರವೇ ಹೊಂದಾಣಿಕೆ?
2011ರ ಐಪಿಎಲ್ ಟೂರ್ನಿಯ ಮೆಗಾ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಸೇರಿಕೊಂಡಿದ್ದ ರೋಹಿತ್ ಶರ್ಮಾ, ಆಟಗಾರ ಹಾಗೂ ನಾಯಕನಾಗಿ ಅತ್ಯದ್ಭುತ ಪ್ರದರ್ಶನ ನೀಡಿದ್ದಾರೆ. ಮುಂಬೈ ಇಂಡಿಯನ್ಸ್ ಪರ 200 ಪಂದ್ಯಗಳನ್ನ ಆಡಿದ ಮೊದಲ ಆಟಗಾರ ಎಂಬ ದಾಖಲೆಗೆ ಹಿಟ್ಮ್ಯಾನ್ ಪಾತ್ರರಾಗಿದ್ದಾರೆ. 200ನೇ ಪಂದ್ಯವನ್ನು ಸ್ಮರಣೀಯವಾಗಿಸಲು ಗಾಡ್ ಆಫ್ ಕ್ರಿಕೆಟ್ ಖ್ಯಾತಿಯ ಸಚಿನ್ ತೆಂಡೂಲ್ಕರ್, 200ನೇ ಸಂಖ್ಯೆಯ ಜೆರ್ಸಿಯನ್ನು ರೋಹಿತ್ ಶರ್ಮಾಗೆ ನೀಡಿ ಅಭಿನಂದಿಸಿದ್ದಾರೆ. ವಿಶ್ವಕಪ್ ವಿಜೇತ ನಾಯಕ ರಿಕಿ ಪಾಂಟಿಂಗ್ ಅವರಿಂದ 2013ರಲ್ಲಿ ಮುಂಬೈ ಇಂಡಿಯನ್ಸ್ ತಂಡದ ಕ್ಯಾಪ್ಟನ್ಸಿ ಪಡೆದಿದ್ದ ರೋಹಿತ್ ಶರ್ಮಾ, ತಂಡಕ್ಕೆ ಅತ್ಯಮೋಘ ಯಶಸ್ಸು ತಂದುಕೊಟ್ಟಿದ್ದಾರೆ.
ಎಂಐ ತಂಡವನ್ನು 10 ವರ್ಷಗಳ ಕಾಲ ನಾಯಕನಾಗಿ ಮುಂದುವರಿಸಿದ್ದ ಹಿಟ್ಮ್ಯಾನ್, ತಮ್ಮ ಚೊಚ್ಚಲ ಕ್ಯಾಪ್ಟನ್ಸಿಯಲ್ಲೇ ಮುಂಬೈ ಫ್ರಾಂಚೈಸಿಗೆ ಟ್ರೋಫಿ ಗೆದ್ದುಕೊಟ್ಟಿದ್ದರು. 2015, 2017, 2019 ಹಾಗೂ 2020ರಲ್ಲೂ ತಂಡಕ್ಕೆ ಚಾಂಪಿಯನ್ ಪಟ್ಟ ದಕ್ಕಿಸಿಕೊಟ್ಟು, ಅತಿ ಹೆಚ್ಚು ಟ್ರೋಫಿ ಗೆದ್ದ ನಾಯಕ ಎಂಬ ದಾಖಲೆ ನಿರ್ಮಿಸಿದ್ದರು. ಆದ್ರೆ 2023ರ ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಚಾಂಪಿಯನ್ ಪಟ್ಟ ತಂದುಕೊಡುವ ಮೂಲಕ ಮಹೇಂದ್ರ ಸಿಂಗ್ ಧೋನಿ ಅವರು ರೋಹಿತ್ ಶರ್ಮಾರ ದಾಖಲೆಯನ್ನು ಸರಿಗಟ್ಟಿದ್ದರು. ವಿಪರ್ಯಾಸ ಅಂದ್ರೆ 17ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ರೋಹಿತ್ ಶರ್ಮಾ ಹಾಗೂ ಮಹೇಂದ್ರ ಸಿಂಗ್ ಧೋನಿ ಕ್ಯಾಪ್ಟನ್ಸಿ ಜವಾಬ್ದಾರಿಯಿಂದ ಕೆಳಗಿಳಿದಿದ್ದಾರೆ. ಹೀಗಾಗಿ ಇಬ್ಬರೂ ತಲಾ ಐದು ಬಾರಿ ತಮ್ಮ ಟೀಮ್ಗಳಿಗೆ ಟ್ರೋಪಿ ತಂದುಕೊಟ್ಟ ದಾಖಲೆಯನ್ನ ಶೇರ್ ಮಾಡಿದ್ದಾರೆ.