ರಾಮನವಮಿ ಹಬ್ಬದ ವಿಶೇಷತೆ ಏನು? – ಆಚರಣೆ ಹೇಗೆ ಮಾಡಬೇಕು?

ರಾಮನವಮಿ ಹಬ್ಬದ ವಿಶೇಷತೆ ಏನು? – ಆಚರಣೆ ಹೇಗೆ ಮಾಡಬೇಕು?

ಹಿಂದೂ ಧರ್ಮದಲ್ಲಿ ಶ್ರೀ ರಾಮನವಮಿ ಎಂದರೆ ಹಬ್ಬದ ಸಂಭ್ರಮ. ಚೈತ್ರ ಮಾಸದ ಒಂಭತ್ತನೇ ದಿನ, ಅಂದರೆ ವರ್ಷದ ಮೊದಲ ತಿಂಗಳಿನಲ್ಲಿ ಬರುವ ಹಬ್ಬವೇ ರಾಮನವಮಿ. ಮಹಾವಿಷ್ಣುವಿನ ಏಳನೇಯ ಅವತಾರವಾದ ಶ್ರೀರಾಮನು ಜನಿಸಿದ ನವಮಿಯಂದು ಈ ಹಬ್ಬ ಆಚರಿಸಲಾಗುತ್ತದೆ. ಈ ದಿನ ಪುಷ್ಯಾ ನಕ್ಷತ್ರದಲ್ಲಿ ಮಧ್ಯಾಹ್ನದ ವೇಳೆಯಲ್ಲಿ ಕರ್ಕಾಟಕ ಲಗ್ನದಲ್ಲಿ ಅಯೋಧ್ಯೆಯಲ್ಲಿ ರಾಮನು ಜನಿಸಿದನೆಂಬ ನಂಬಿಕೆ ಇದೆ. ಇವತ್ತು ದೇಶದಾದ್ಯಂತ ಕೋಟ್ಯಾಂತರ ಹಿಂದೂಗಳು ರಾಮನವಮಿ ಆಚರಿಸುತ್ತಿದ್ದಾರೆ.

ಇದನ್ನೂ ಓದಿ: ರಾಮನಗರಿಯಲ್ಲಿ ರಾಮನವಮಿ ಅದ್ದೂರಿ ಆಚರಣೆ – ನಾಲ್ಕು ದಿನ ವಿಐಪಿ ದರ್ಶನ ಸ್ಥಗಿತ!

ಹೌದು, ಹಿಂದೂಗಳ ಹೃದಯ ಸಾಮ್ರಾಟ, ಮರ್ಯಾದ ಪುರುಷೋತ್ತಮ, ದಶರಥ ನಂದನ ಶ್ರೀರಾಮ ಹುಟ್ಟಿದ ದಿನವನ್ನು ಶ್ರೀರಾಮನವಮಿ ಹಬ್ಬವೆಂದು ಆಚರಣೆ ಮಾಡಲಾಗುತ್ತದೆ. ಪ್ರತಿ ವರ್ಷ ರಾಮ ನವಮಿಯನ್ನು ಬಹಳ ವಿಜೃಂಭಣೆಯಿಂದ ಆಚರಣೆ ಮಾಡಿಕೊಂಡು ಬರಲಾಗುತ್ತಿದೆ.  ಆದ್ರೆ ಈ ಬಾರಿ ಶ್ರೀರಾಮ ಭಕ್ತರಿಗೆ ರಾಮನವಮಿ ತುಂಬಾನೇ ವಿಶೇಷ. ಅಯೋದ್ಯೆಯಲ್ಲಿ ಪ್ರಭು ಶ್ರೀ ರಾಮನ ಭವ್ಯ ಮಂದಿರ ಉದ್ಘಾಟನೆ ಆದ ಬಳಿಕ ಇದು ಮೊದಲನೆ ರಾಮನವಮಿ. ಹೀಗಾಗಿ ರಾಮನವಮಿಯನ್ನು ಇನ್ನಷ್ಟು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ.

ಧರ್ಮ ಶಾಸ್ತ್ರಗಳ ಪ್ರಕಾರ, ಅಯೋಧ್ಯೆಯ ರಾಜನಾದ ದಶರಥನಿಗೆ ಕೌಸಲ್ಯಾ, ಕೈಕೇಯೀ ಹಾಗೂ ಸುಮಿತ್ರೆ ಮೂರು ಜನ ಪತ್ನಿಯರಿದ್ದರು. ಆದರೆ ಯಾರಿಗೂ ಪುತ್ರ ಸಂತಾನವಾಗಿರಲಿಲ್ಲ. ನಂತರ ದಶರಥನು ಋಷಿಮುನಿಗಳ ಸಲಹೆಯಂತೆ ಪುತ್ರಕಾಮೇಷ್ಠಿ ಯಾಗವನ್ನು ಮಾಡಿಸಿದ. ಈ ಯಜ್ಞದಿಂದ ಸಂತುಷ್ಟನಾದ ಪ್ರಜಾಪತಿಯು ದಶರಥನಿಗೆ ದಿವ್ಯಪಾಯಸವನ್ನು ನೀಡುತ್ತಾನೆ. ಈ ದಿವ್ಯ ಪಾಯಸವನ್ನು ದಶರಥನು ತನ್ನ ಮೂವರು ಪತ್ನಿಯರಿಗೂ ಹಂಚುತ್ತಾನೆ. ಇದರಂತೆ ಚೈತ್ರ ಮಾಸದ ಶುಕ್ಲಪಕ್ಷದ ನವಮಿ ತಿಥಿಯಂದು ಮಧ್ಯಾಹ್ನ ಪುನರ್ವಸು ನಕ್ಷತ್ರದಲ್ಲಿ ಕೌಸಲ್ಯೆಗೆ ರಾಮನೂ, ಪುಷ್ಯನಕ್ಷತ್ರದ ದಶಮಿಯಂದು ಸೂರ್ಯೋದಯಕ್ಕೆ ಮುನ್ನ ಕೈಕೇಯಿಗೆ ಭರತನೂ, ಅದೇ ದಿನ ಆಶ್ಲೇಷಾ ನಕ್ಷತ್ರದಲ್ಲಿ ಮಧ್ಯಾಹ್ನ ಲಕ್ಷ್ಮಣ, ಶತ್ರುಘ್ನರೂ ಜನಿಸುತ್ತಾರೆ. ಹೀಗೆ ರಾಮನು ಜನಿಸಿದ ನವಮಿಯಂದು ರಾಮನವಮಿಯನ್ನಾಗಿ ಆಚರಿಸುತ್ತಾರೆ.

ರಾಮನವಮಿಯ ಮಹತ್ವ

ಶ್ರೀರಾಮನು ಜನಿಸಿದ ದಿನವೆಂದು ಆಚರಿಸಲಾಗುವ ಹಬ್ಬ ರಾಮನವಮಿ. ಅಯೋಧ್ಯೆಯ ರಾಜ ದಶರಥ ಹಾಗೂ ಕೌಸಲ್ಯೆಯ ಪುತ್ರನಾಗಿ ಮಹಾವಿಷ್ಣುವಿನ ಏಳನೇ ಅವತಾರವಾಗಿ ಶ್ರೀರಾಮನು ಜನಿಸುತ್ತಾನೆ. ಹಿಂದೂ ಗ್ರಂಥಗಳಲ್ಲಿ ಉಲ್ಲೇಖವಿರುವಂತೆ ನಾಲ್ಕು ಯುಗಗಳಲ್ಲಿ ಒಂದಾದ ತ್ರೇತಾಯುಗದಲ್ಲಿ ರಾಮನು ಜನಿಸಿದನು. ಈ ದಿನ ಶ್ರೀರಾಮನನ್ನು ಪೂಜಿಸಿದರೆ ಕೆಟ್ಟ ಶಕ್ತಿಗಳು ನಿವಾರಣೆಯಾಗಿ, ಭೂಮಿಯ ಮೇಲೆ ದೈವೀಕ ಶಕ್ತಿಯು ನೆಲೆಸುತ್ತದೆ. ಧಾರ್ಮಿಕ ನಂಬಿಕೆಯ ಪ್ರಕಾರ ದೇವತೆಗಳು ಹಾಗೂ ದೇವರುಗಳು ಅವತಾರ ತಾಳಿದ ದಿನದಂದು ಭೂಮಿಯ ಮೇಲೆ ಅವರ ದೈವೀ ತತ್ವಗಳು ಹೆಚ್ಚಿನ ಪ್ರಮಾಣದಲ್ಲಿ ಕಾರ್ಯನಿರತವಾಗಿರುತ್ತದೆ. ಶ್ರೀರಾಮ ನವಮಿಯಂದು ಶ್ರೀರಾಮತತ್ವವು ಎಂದಿಗಿಂತಲೂ ಸಾವಿರಪಟ್ಟು ಹೆಚ್ಚು ಭೂಮಿಯಲ್ಲಿ ಕಾರ್ಯನಿರತವಾಗಿರುತ್ತದೆ. ಹೀಗಾಗಿ ಈ ದಿನ ರಾಮನಾಪ ಜಪ, ಶ್ರೀರಾಮನ ಉಪಾಸನೆಗಳನ್ನು ಮಾಡುವುದರಿಂದ ಸಾಕಷ್ಟು ಪ್ರಯೋಜನವನ್ನು ಪಡೆಯಬಹುದೆಂದು ಹೇಳಲಾಗುತ್ತದೆ.

ಹಬ್ಬದ ಆಚರಣೆ ಹೇಗೆ?

ರಾಮ ಮನೆದೇವರು ಇರುವವರು ಹಬ್ಬವನ್ನು 9 ದಿನಗಳ ಕಾಲ ಆಚರಣೆ ಮಾಡುತ್ತಾರೆ. ಚೈತ್ರ ಮಾಸದ ಶುಕ್ಲಪಕ್ಷದ ಪಾಡ್ಯದಿಂದ ನವಮಿವರೆಗೆ ರಾಮಾಯಣ ಪಾರಾಯಣ ಮಾಡಿ, ನವಮಿ ದಿನ ರಾಮ ಪಟ್ಟಾಭಿಷೇಕ ಪಾರಾಯಣ ಮಾಡಿ ಹಬ್ಬವನ್ನು ಪೂರ್ಣಗೊಳಿಸುತ್ತಾರೆ. ಹೀಗೆ 9 ದಿನದ ರಾಮನ ಉತ್ಸವ ಆಚರಿಸಲಾಗುತ್ತದೆ.

ರಾಮನವಮಿ ಆಚರಣೆ ಅತ್ಯಂತ ಸರಳವಾಗಿದೆ. ಸಾಮಾನ್ಯವಾಗಿ ರಾಮ ಪಟ್ಟಾಭಿಷೇಖ, ರಾಮ ಪಂಚಾಯತನದ ಪಟವನ್ನು ಇಟ್ಟು ಪೂಜೆ ಮಾಡುತ್ತಾರೆ, ಇದರಲ್ಲಿ ಶ್ರೀರಾಮನ ಜೊತೆದೆ ಎಲ್ಲಾ ಸಹೋದರರು ಇರುತ್ತಾರೆ. ಶ್ರೀರಾಮಚಂದ್ರನಿಗೆ ಷೋಡಶೋಪಚಾರದಿಂದ ಪೂಜೆ ಮಾಡಬೇಕು. ಪಾನಕ ಕೋಸಂಬರಿಗಳನ್ನು ನೈವೇದ್ಯ ಮಾಡಿ ಇತರರಿಗೆ ಹಂಚಲಾಗುತ್ತದೆ. ರಾಮನ ಭಜನೆ, ಹಾಡುಗಳಿಂದ ರಾಮನ ಧ್ಯಾನ ಮಾಡುತ್ತಾರೆ. ಮತ್ತೊಂದು ವಿಶೇಷವೆಂದರೆ, ರಾಮನಾಮ ಬರೆಯುವುದು. ರಾಮನಾಮ ಜಪಿಸಿದರೆ ರಾಮ ನಮ್ಮನ್ನು ಸಂರಕ್ಷಿಸುತ್ತಾನೆಂಬ ನಂಬಿಕೆ ಇದೆ.

Shwetha M