ಪುತ್ತೂರಲ್ಲಿ ಹಿಂದು Vs ಬಿಜೆಪಿ – ಆಸ್ಪತ್ರೆಗೆ ಬಂದ ಯತ್ನಾಳ್​ರನ್ನ ಒಳಬಿಡದ ಪುತ್ತಿಲ ಬೆಂಬಲಿಗರು!

ಪುತ್ತೂರಲ್ಲಿ ಹಿಂದು Vs ಬಿಜೆಪಿ – ಆಸ್ಪತ್ರೆಗೆ ಬಂದ ಯತ್ನಾಳ್​ರನ್ನ ಒಳಬಿಡದ ಪುತ್ತಿಲ ಬೆಂಬಲಿಗರು!

ಹಿಂದುತ್ವ ಅಂದ್ರೆ ಬಿಜೆಪಿ. ಬಿಜೆಪಿ ಅಂದ್ರೆ ಹಿಂದುತ್ವ. ಇದೇ ಅಜೆಂಡಾದಲ್ಲೇ ಕೇಸರಿ ಪಡೆ ಕರ್ನಾಟಕ ವಿಧಾನಸಭಾ ಚುನಾವಣಾ ಅಖಾಡಕ್ಕಿಳಿದಿತ್ತು. ಆದರೆ ಮತದಾರರ ತೀರ್ಪಿನಲ್ಲಿ ಹೀನಾಯವಾಗಿ ಸೋಲು ಅನುಭವಿಸಿದ್ರು. ಇದೀಗ ಬಿಜೆಪಿ ಮತ್ತು ಹಿಂದೂ ಕಾರ್ಯಕರ್ತರ ನಡುವೆಯೇ ಗಲಾಟೆ ನಡೀತಿದೆ. ಬಿಜೆಪಿ ಭದ್ರಕೋಟೆ ಎನಿಸಿರುವ ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ಕ್ಷೇತ್ರದಲ್ಲಿ ಬಿಜೆಪಿ ಸೋಲಿನ ಬಳಿಕ ಹೊತ್ತಿರುವ ಬೆಂಕಿ ಆರುವ ಲಕ್ಷಣಗಳೇ ಕಾಣ್ತಿಲ್ಲ.

ಬಿಜೆಪಿಯ ಹೀನಾಯ ಸೋಲಿಗೆ ನಳಿನ್ ಕುಮಾರ್ ಕಟೀಲ್ ಮತ್ತು ಡಿ.ವಿ ಸದಾನಂದ ಗೌಡ ಕಾರಣ ಎಂದು ಆರೋಪಿಸಿ ಇಬ್ಬರ ಫೋಟೋ ಬ್ಯಾನರ್‌ಗೆ ಚಪ್ಪಲಿ ಹಾರ ಹಾಕಲಾಗಿತ್ತು. ಈ ಸಂಬಂಧ ಪೊಲೀಸರು 9 ಜನ್ರನ್ನ ಬಂಧಿಸಿ ರಕ್ತ ಬರುವಂತೆ ಹಿಗ್ಗಾಮುಗ್ಗಾ ಥಳಿಸಿದ್ರು. ಹೀಗಾಗಿ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪುತ್ತೂರಿಗೆ ಭೇಟಿ ನೀಡಿದ್ದು, ಭಾರೀ ಹೈಡ್ರಾಮ ನಡೆದಿದೆ. ಹಲ್ಲೆಗೊಳಗಾದವರ ಭೇಟಿಗೆ ಆಸ್ಪತ್ರೆಗೆ ತೆರಳಿದ್ದ ವೇಳೆ ಬಿಜೆಪಿ ಕಾರ್ಯಕರ್ತರು ಮತ್ತು ಅರುಣ್ ಕುಮಾರ್ ಪುತ್ತಿಲ ಬೆಂಬಲಿಗರ ಮಧ್ಯೆ ಕಿತ್ತಾಟ ನಡೆದಿದೆ.

ಇದನ್ನೂ ಓದಿ :  ಡಿಸಿಎಂ ಸ್ಥಾನ ಸಿಗದಿದ್ದಕ್ಕೆ ತ್ಯಾಗದ ತೇಪೆ ಹಚ್ಚಿದ ಪರಮೇಶ್ವರ್ – ಎಲ್ಲವೂ ಮುಗಿಯಿತೆಂದು ಸೈಲೆಂಟ್!  

ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಭೇಟಿ ಸಂದರ್ಭದಲ್ಲಿ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ಭಾರೀ ಹೈಡ್ರಾಮ ನಡೆದಿದ್ದು, ಹಿಂದೂಪರ ಕಾರ್ಯಕರ್ತರು ಮತ್ತು ಬಿಜೆಪಿ ಕಾರ್ಯಕರ್ತರ ಮಧ್ಯೆ ತಳ್ಳಾಟ ನೂಕಾಟ ನಡೆದಿದೆ. ಬಸವರಾಜ್ ಪಾಟೀಲ್ ಯತ್ನಾಳ್ ಆಸ್ಪತ್ರೆಗೆ ಬಂದಿದ್ದ ವೇಳೆ ಅವರ ಜೊತೆ ಬಿಜೆಪಿ ಕಾರ್ಯಕರ್ತರು ಕೂಡ ಬಂದಿದ್ದರು. ಈ ವೇಳೆ ಬಿಜೆಪಿ ಕಾರ್ಯಕರ್ತರನ್ನು ಒಳಗೆ ಬಿಡಲು ಪಕ್ಷೇತರ ಅಭ್ಯರ್ಥಿ ಪುತ್ತಿಲ ಪರ ಕಾರ್ಯಕರ್ತರು ನಿರಾಕರಿಸಿದ್ದಾರೆ. ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಎದುರಲ್ಲೇ ಬಿಜೆಪಿ ನಾಯಕರಿಗೆ ಮತ್ತು ಕಾರ್ಯಕರ್ತರಿಗೆ ಅವಮಾನ ಉಂಟಾಗಿದ್ದು, ಆಸ್ಪತ್ರೆಯ ಬಾಗಿಲಲ್ಲೇ ನಿಂತು ಪುತ್ತಿಲ ಪರ ಕಾರ್ಯಕರ್ತರು ಬಿಜೆಪಿ ಕಾರ್ಯಕರ್ತರನ್ನು ಹೊರಗೆ ತಳ್ಳಿದ್ದಾರೆ. ಪೊಲೀಸ್ ದೌರ್ಜನ್ಯಕ್ಕೆ ಒಳಗಾದ ಹಿಂದೂ ಕಾರ್ಯಕರ್ತರನ್ನ ಬಿಜೆಪಿ ಕಾರ್ಯಕರ್ತರು ನೋಡಬೇಡಿ ಎಂದು ಹಿಂದೂ ಪರ ಮತ್ತು ಪುತ್ತಿಲ ಪರ ಕಾರ್ಯಕರ್ತರು ತಳ್ಳಿದ್ದು, ಈ ವೇಳೆ ಆಸ್ಪತ್ರೆಯಲ್ಲಿ ಗೊಂದಲದ ವಾತಾವರಣ ಉಂಟಾಗಿತ್ತು. ಬಳಿಕ ಯತ್ನಾಳ್‌ಗೆ ಮಾತ್ರ ಆಸ್ಪತ್ರೆಯ ಒಳಗೆ ಬರಲು ಅರುಣ್ ಕುಮಾರ್ ಪುತ್ತಿಲ ಟೀಂ ಅವಕಾಶ ನೀಡಿದ್ದು, ಬಿಜೆಪಿ ಕಾರ್ಯಕರ್ತರು ಅನಿವಾರ್ಯವಾಗಿ ಹೊರಗೆ ನಿಲ್ಲಬೇಕಾಗಿತ್ತು.

ಬ್ಯಾನರ್ ವಿಚಾರವಾಗಿ ಹಿಂದುತ್ವಪರ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಲು ಬಿಜೆಪಿ ನಾಯಕರೇ ಸೂಚನೆ ನೀಡಿದ್ದು ಎಂದು ಪುತ್ತೂರಿನಾದ್ಯಂತ ಸುದ್ದಿ ಹಬ್ಬುತ್ತಿದ್ದು, ಈ ಪ್ರಕರಣವನ್ನು ಕಾಂಗ್ರೆಸ್‌ ಮೇಲೆ ಆರೋಪ ಮಾಡುತ್ತಿರುವ ಬಿಜೆಪಿ ಶಾಸಕ ಹರೀಶ್ ಪೂಂಜಾ ಮತ್ತು ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧವೂ ಹಿಂದೂಪರ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

suddiyaana