ಗುರುವಾರ ಬಾಳೆ ಗಿಡಕ್ಕೆ ಹೀಗೆ ಪೂಜೆ ಮಾಡಿ – ನಿಮ್ಮ ಸಮಸ್ಯೆ ಬಗೆ ಹರಿಸಲಿದ್ದಾನೆ ಭಗವಾನ್ ವಿಷ್ಣು

ಹಿಂದೂ ಧರ್ಮದಲ್ಲಿ ಗುರುವಾರವನ್ನು ಭಗವಾನ್ ವಿಷ್ಣುವಿನ ಆರಾಧನೆಗೆ ಅತ್ಯಂತ ಶುಭ ದಿನವೆಂದು ಪರಿಗಣಿಸಲಾಗಿದೆ. ಈ ದಿನ ಶ್ರೀಹರಿಯನ್ನು ಸ್ಮರಿಸಿ ಉಪವಾಸದಿಂದ ಪೂಜೆ ಮಾಡಿದರೆ, ಭಕ್ತರ ಇಷ್ಟಾರ್ಥಗಳು ಸಿದ್ಧಿಸುತ್ತವೆ ಎಂಬ ನಂಬಿಕೆ ಪುರಾಣಗಳಲ್ಲಿ ಉಲ್ಲೇಖವಾಗಿದೆ. ಶ್ರೀಹರಿಯ ಕೃಪೆಯಿಂದ ಪಾಪ ಕ್ಷಯವಾಗಿ, ಪುಣ್ಯ ಫಲಗಳು ದೊರೆಯುತ್ತವೆ ಎಂಬ ನಂಬಿಕೆ ಇದೆ. ಈ ದಿನ ವಿಶೇಷವಾಗಿ ಭಗವಾನ್ ವಿಷ್ಣು ಹಾಗೂ ಗುರು ಬೃಹಸ್ಪತಿಯನ್ನು ಆರಾಧಿಸುವುದು ಶುಭದಾಯಕ.
ಇದರೊಂದಿಗೆ ಗುರುವಾರ ಬಾಳೆಗಿಡವನ್ನು ಪೂಜಿಸುವುದರಿಂದ ಮನೋಕಾಮನೆಗಳು ನೆರವೇರಲಿದೆ ಎನ್ನುವ ನಂಬಿಕೆ ಇದೆ. ಧಾರ್ಮಿಕ ಪುರಾಣಗಳು ಮತ್ತು ಹಳೆಯ ಸಂಪ್ರದಾಯಗಳ ಪ್ರಕಾರ, ಬಾಳೆಗಿಡದಲ್ಲಿ ಭಗವಾನ್ ವಿಷ್ಣು ವಾಸ ಮಾಡುತ್ತಾರೆ ಎನ್ನಲಾಗುತ್ತದೆ. ಅದಕ್ಕಾಗಿ ಗುರುವಾರ ವಿಷ್ಣುವಿಗೆ ಪೂಜೆ ಸಲ್ಲಿಸಿದ ಬಳಿಕ ಬಾಳೆಗಿಡಕ್ಕೆ ಪೂಜೆ ಮಾಡುವ ಅಭ್ಯಾಸ ಹಲವು ಹಿಂದೂ ಮನೆಗಳಲ್ಲಿ ಇನ್ನೂ ಜೀವಂತವಾಗಿದೆ. ವಿಷ್ಣುವಿನ ಅನುಗ್ರಹ ಪಡೆಯಲು ಭಕ್ತರು ಗುರುವಾರ ಉಪವಾಸದಿಂದ ಇರಬೇಕು. ಜತೆಗೆ ಮನೆಯಲ್ಲಿ ಅಥವಾ ಮನೆಯ ಹೊರಭಾಗದಲ್ಲಿರುವ ಬಾಳೆಗಿಡಕ್ಕೆ ನೀರು ಅರ್ಪಿಸಿ ಪೂಜಿಸುವುದು ಅತ್ಯಂತ ಪುಣ್ಯವೆಂದು ಪರಿಗಣಿಸಲಾಗಿದೆ
ಪೂಜೆ ಮಾಡುವ ವಿಧಾನ ಹೇಗೆ?
ಗುರುವಾರ ಬೆಳಗ್ಗೆ ಮೊದಲು ಭಗವಾನ್ ವಿಷ್ಣುವಿಗೆ ಪೂಜೆ ಸಲ್ಲಿಸಬೇಕು. ನಂತರ ಮನೆಯ ಹೊರಗಿರುವ ಬಾಳೆಗಿಡಕ್ಕೆ ಶುದ್ಧ ನೀರು ಹಾಯಿಸಿ, ಅರಶಿನ ತುಂಡು, ಕಡಲೆಬೇಳೆ ಮತ್ತು ಬೆಲ್ಲವನ್ನು ಅರ್ಪಿಸಿ ನಮಸ್ಕರಿಸಬೇಕು. ಅಕ್ಷತೆ ಮತ್ತು ಪುಷ್ಪವನ್ನು ಸಮರ್ಪಿಸಿ ಗಿಡದ ಸುತ್ತ ಪ್ರದಕ್ಷಿಣೆ ಹಾಕುವುದು ಪೂಜೆಯ ಪ್ರಮುಖ ಅಂಗವಾಗಿದೆ. ಭಕ್ತರ ನಂಬಿಕೆಯ ಪ್ರಕಾರ, ಈ ವಿಧಿಯನ್ನು ಶ್ರದ್ಧೆಯಿಂದ ಮಾಡಿದರೆ ಸರ್ವ ಇಷ್ಟಾರ್ಥಗಳು ನೆರವೇರುತ್ತವೆ ಎಂದು ಧಾರ್ಮಿಕ ಗ್ರಂಥಗಳು ಹೇಳುತ್ತವೆ.

ನೋಡಿರಿ

