ಉತ್ತರಭಾರತದಲ್ಲಿ ಮಳೆಯ ರೌದ್ರ ನರ್ತನ – ಮಹಾಮಳೆಗೆ 16 ಮಂದಿ ಸಾವು
ನವದೆಹಲಿ: ಉತ್ತರಭಾರತದಲ್ಲಿ ಕಳೆದ ಎರಡು ದಿನಗಳಿಂದ ಭಾರಿ ಮಳೆಯಾಗುತ್ತಿದೆ. ಕುಂಭದ್ರೋಣ ಮಳೆಗೆ ಹಿಮಾಚಲಪ್ರದೇಶ, ಉತ್ತರಾಖಂಡ್, ಜಮ್ಮುಕಾಶ್ಮೀರ, ಪಂಜಾಬ್, ಹರ್ಯಾಣ ರಾಜ್ಯಗಳು ತತ್ತರಿಸಿವೆ. ಎಡೆಬಿಡದೇ ಸುರಿಯುತ್ತಿರುವ ಮಳೆಗೆ ಕನಿಷ್ಠ 19 ಮಂದಿ ಬಲಿಯಾಗಿದ್ದಾರೆ.
ಸೋಮವಾರ ಕೂಡ ದೆಹಲಿ, ಹರ್ಯಾಣ, ಹಿಮಾಚಲ ಪ್ರದೇಶ, ಉತ್ತರಾಖಂಡ, ರಾಜಸ್ಥಾನ, ಪಂಜಾಬ್ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಹಿನ್ನೆಲೆ ಎರಡು ದಿನಗಳ ಕಾಲ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಇದನ್ನೂ ಓದಿ: ತಿಮಿಂಗಿಲ ದೇಹದಲ್ಲಿತ್ತು ಬರೋಬ್ಬರಿ 10 ಕೆಜಿ ʼಫ್ಲೋಟಿಂಗ್ ಗೋಲ್ಡ್ʼ! – ʼತೇಲುವ ಚಿನ್ನʼ ಇಷ್ಟೊಂದು ದುಬಾರಿ ಏಕೆ?
ಭಾರಿ ಮಳೆಯಿಂದಾಗಿ ನದಿಗಳೆಲ್ಲಾ ಅಪಾಯದ ಮಟ್ಟ ಮೀರಿದ್ದು, ಪ್ರವಾಹ ಪರಿಸ್ಥಿತಿ ಸೃಷ್ಟಿಯಾಗಿದೆ. ಅಲ್ಲಲ್ಲಿ ಭೂಕುಸಿತ ಸಂಭವಿಸುತ್ತಿದೆ. ಬೀಯಾಸ್ ನದಿಯ ಆರ್ಭಟಕ್ಕೆ ಕಟ್ಟಡವೊಂದು ಕುಸಿದಿದೆ. ಕುಲು ಬಳಿ ಕಾರುಗಳು ಕೊಚ್ಚಿ ಹೋಗಿದ್ದು, ಶಿಮ್ಲಾದ ಡಿಂಗು ಮಾತೆಯ ಮಂದಿರದ ರಸ್ತೆ ನೋಡನೋಡುತ್ತಲೇ ಕುಸಿದುಬಿದ್ದಿದೆ. ಅಟಲ್ ಸುರಂಗದ ಬಳಿಯೇ ಗುಡ್ಡ ಕುಸಿತವಾಗಿದ್ದು ಕುಲು-ಮನಾಲಿ ನಡುವಿನ ರಸ್ತೆ ಬಂದ್ ಆಗಿದೆ.
ಪಂಧೋ ಜಲಾಶಯದಿಂದ ಅಪಾರ ಪ್ರಮಾಣದಲ್ಲಿ ನೀರನ್ನು ಹೊರಗೆ ಬಿಡಲಾಗಿದ್ದು, ಸಣ್ಣ ಸೇತುವೆಯೊಂದು ಕೊಚ್ಚಿಹೋಗಿದೆ. ನಿರಂತರ ಗುಡ್ಡ ಕುಸಿತದ ಪರಿಣಾಮ ಮಾರ್ಗಮಧ್ಯೆಯೇ ಸಾವಿರಾರು ವಾಹನ ಸಿಲುಕಿವೆ. ಊಟ ನೀರಿಲ್ಲದೇ ಪ್ರವಾಸಿಗರು ಒದ್ದಾಡುವಂತಾಗಿದೆ. ಪ್ರವಾಹ, ಭೂಕುಸಿತದ ಪರಿಣಾಮ 700ಕ್ಕೂ ಹೆಚ್ಚು ರಸ್ತೆಗಳು ಬಂದ್ ಆಗಿವೆ. ಹಿಮಾಚಲದಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದ್ದು, 2 ದಿನ ಶಾಲೆ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಉತ್ತರಾಖಂಡ್‍ನ ಉಧಾಂಸಿಂಗ್‍ನಗರದಲ್ಲಿ ಮನೆ ಕುಸಿದು ಇಬ್ಬರು ಸಾವನ್ನಪ್ಪಿದ್ದಾರೆ. ತೆಹ್ರಿಯಲ್ಲಿ ದಕ್ಷಿಣ ಭಾರತೀಯರಿದ್ದ ಪ್ರವಾಸಿ ವಾಹನವೊಂದು ಅಪಘಾತಕ್ಕೀಡಾಗಿದೆ. 11 ಮಂದಿ ಪೈಕಿ ಐವರನ್ನು ರಕ್ಷಣೆ ಆಗಿದ್ದು, ಉಳಿದವರಿಗಾಗಿ ಶೋಧ ಕಾರ್ಯ ನಡೆದಿದೆ. ಜಮ್ಮು ಕಾಶ್ಮೀರದ ಪೋಶನಾ ನದಿಯಲ್ಲಿ ಇಬ್ಬರು ಯೋಧರು ಕೊಚ್ಚಿಕೊಂಡು ಹೋಗಿದ್ದಾರೆ. ಜಮ್ಮು ಕಾಶ್ಮೀರದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ 44 ಹಲವೆಡೆ ಸಮಸ್ಯೆಯಾಗಿದೆ. ಪಂಜಾಬ್‍ನ ಮೊಹಾಲಿ ಜಲಾವೃತವಾಗಿದ್ದು, ಅಪಾರ್ಟ್‍ಮೆಂಟ್‍ಗಳು ಜಲದಿಗ್ಬಂಧನದಲ್ಲಿವೆ. ಬೋಟ್‍ಗಳ ಮೂಲಕ ಜನರನ್ನ ರಕ್ಷಿಸಲಾಗುತ್ತಿದೆ.