ತುಂಬಾ ಚಳಿ ಇದೆ.. ಚಳಿ ಕಾಯಿಸ್ಕೋ.. – ಅಬ್ಬಬ್ಬಾ.. ಹಾವಿನ ಜೊತೆ ಕುಳಿತು ಟೈಂ ಪಾಸ್ ಮಾಡಿದ ವ್ಯಕ್ತಿ!

ಹಾವು ಕಂಡ್ರೆ ಎಲ್ಲರಿಗೂ ಭಯ. ಹಾವು ಕಂಡ ಕೂಡಲೇ ದೂರಕ್ಕೆ ಓಡಿ ಹೋಗ್ತೀವಿ. ಆದ್ರೆ ಕೆಲವರಿಗೆ ಸುಮ್ಮನೆ ಕೂರಲು ಆಗಲ್ಲ. ಹಾವಿನ ಜೊತೆ ಸರಸ ಆಡುವವರು ಇದ್ದಾರೆ. ಇದೀಗ ಇಲ್ಲೊಬ್ಬ ವ್ಯಕ್ತಿ ಹಾವಿನ ಜೊತೆ ಮಾತನಾಡುತ್ತಾ ಚಳಿ ಕಾಯಿಸಿದ್ದಾನೆ. ಇದರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.
ಈ ವಿಲಕ್ಷಣಕಾರಿ ಘಟನೆ ಮಧ್ಯಪ್ರದೇಶದ ಛತ್ತರಪುರದಲ್ಲಿ ನಡೆದಿದೆ. ವ್ಯಕ್ತಿಯೊಬ್ಬರು ಭಯಂಕರ ವಿಷಪೂರಿತ ನಾಗರ ಹಾವಿನ ಜೊತೆ ತಮಾಷೆಯಾಗಿ ಮಾತನಾಡುತ್ತ ಕುಳಿತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಹಾವು ತನ್ನ ಹತ್ತಿರ ಬರುತ್ತಿದ್ದರೂ ವ್ಯಕ್ತಿ ಶಾಂತವಾಗಿ ಕೂತು ಎಲ್ಲರನ್ನು ನಿಬ್ಬೆರಗಾಗಿಸಿದ್ದಾರೆ. ಸದ್ಯ ಈ ಭಯಾನಕ ವಿಡಿಯೊ ಭಾರೀ ವೈರಲ್ ಆಗಿದೆ.
ವೈರಲ್ ಆದ ವಿಡಿಯೋದಲ್ಲಿ ತೀವ್ರ ಚಳಿಯ ನಡುವೆ ರಸ್ತೆ ಪಕ್ಕದಲ್ಲಿಯೆ ವ್ಯಕ್ತಿಯೊಬ್ಬ ಬೆಂಕಿ ಹಾಕಿಕೊಂಡು ಚಳಿ ಕಾಯಿಸುತ್ತಿದ್ದರು. ಈ ಸಮಯದಲ್ಲಿ ಅಲ್ಲಿಗೆ ನಾಗರ ಹಾವು ಎಂಟ್ರಿ ಕೊಟ್ಟಿದೆ. ಆದರೆ ಆತ ಈ ಹಾವನ್ನು ನೋಡಿ ಹೆದರುವ ಬದಲು ತಮ್ಮ ಪಕ್ಕದಲ್ಲೇ ಕುಳ್ಳಿರಿಸಿಕೊಂಡಿದ್ದಾರೆ. ಅಚ್ಚರಿಯೆಂದರೆ, ಆ ಹಾವೂ ಕೂಡ ಹೆಡೆ ಬಿಚ್ಚಿ ಶಾಂತವಾಗಿ ಆತನ ಹತ್ತಿರವೆ ನಿಂತಿದೆ. ಬಳಿಕ ಆತ ಹಾವಿನ ಜೊತೆ ಹಾಸ್ಯಮಯ ಮತ್ತು ಸ್ನೇಹಪರ ರೀತಿಯಲ್ಲಿ ಮಾತನಾಡುತ್ತಾನೆ. ವ್ಯಕ್ತಿಯು ಚಳಿ ಕಾಯಿಸುತ್ತಾ ಹಾವನ್ನುದ್ದೇಶಿಸಿ, ನೋಡು, ನಿನಗೆ ತೊಂದರೆಯಾಗಬಾರದು ಎಂದು ಇಲ್ಲಿ ಕೂರಿಸಿದ್ದೇನೆ. ಸುಮ್ಮನೆ ಶಾಂತವಾಗಿ ಕುಳಿತು ಬೆಂಕಿ ಕಾಯಿಸಿಕೊ, ಯಾರಿಗೂ ತೊಂದರೆ ಮಾಡಬೇಡ ಎಂದು ಹೇಳುತ್ತಿರುವುದು ಕೇಳಿಸುತ್ತದೆ.
ಆ ವ್ಯಕ್ತಿ ನಾಗರಹಾವಿಗೆ ನಿನೇಗೇನಾದರೂ ಸಮಸ್ಯೆ ಇದೆಯೇ ಎಂದು ಕೇಳುತ್ತಾನೆ .ಇಲ್ಲದಿದ್ದಲ್ಲಿ ಆರಾಮವಾಗಿ ಬೆಂಕಿಯ ಶಾಖ ತಗೋ ಎಂದು ಆ ವ್ಯಕ್ತಿ ಹಾವನ್ನು ಬಹಳ ಪ್ರೀತಿಯಿಂದ ವಿಚಾರಿಸಿ ಕೊಳ್ಳುತ್ತಾನೆ. ವ್ಯಕ್ತಿ ಮಾತನಾಡುತ್ತಿದ್ದರೆ, ಹಾವು ಕೂಡ ತನ್ನ ಹೆಡೆಯನ್ನು ಬಿಚ್ಚಿ ಆತನ ಮಾತಿಗೆ ಸ್ಪಂದಿಸುತ್ತಿರುವಂತೆ ಕಂಡುಬರುತ್ತಿದೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದಂತೆ ನೆಟ್ಟಿಗರು ನಾನಾ ಬಗೆಯ ಕಾಮೆಂಟ್ ಮಾಡಿದ್ದಾರೆ. ಬಳಕೆದಾರರೊಬ್ಬರು ಹಾವು ಮತ್ತು ಮಾನವನ ನಡುವಿನ ಅಚ್ಚರಿಯ ಬಾಂಧವ್ಯ ಎಂದು ಬರೆದುಕೊಂಡಿದ್ದಾರೆ. ಕೆಲವರು ಇದು ಅಪಾಯಕಾರಿ ಸಾಹಸ ಎಂದು ಎಚ್ಚರಿಕೆ ನೀಡಿದ್ದಾರೆ.

ನೋಡಿರಿ

