ರಾಜ್ಯದಲ್ಲಿ ಹಿಜಾಬ್ v/s ಕೇಸರಿ ಸಮರ – ಹಿಜಾಬ್ ಧರಿಸಿಕ್ಕೆ ಪ್ರತಿಯಾಗಿ ಕೇಸರಿ ಶಾಲಿನಲ್ಲಿ ರೀಲ್ಸ್ ಮಾಡಿದ ವಿದ್ಯಾರ್ಥಿಗಳು!
ಕಳೆದ ವರ್ಷ ಕರಾವಳಿಯಲ್ಲಿ ಹಿಜಾಬ್ ವರ್ಸಸ್ ಕೇಸರಿ ಶಾಲು ವಿವಾದ ಜ್ವಾಲೆಯಾಗಿ ಹೊತ್ತಿ ಉರಿದಿತ್ತು. ದೇಶದಾದ್ಯಂತ ಭಾರಿ ಸದ್ದು ಮಾಡಿ, ಬಳಿಕ ಈ ವಿವಾದ ತಣ್ಣಗಾಗಿತ್ತು. ಇದೀಗ ಈ ವಿವಾದ ಮತ್ತೆ ಮುನ್ನೆಲೆಗೆ ಬಂದಿದೆ. ಈ ಬಾರಿ ಕೇಸರಿ ಶಾಲು ವಿವಾದದ ಕಿಡಿ ಹೊತ್ತಿಕೊಂಡಿರುವುದು ಕರಾವಳಿಯಲ್ಲಿ ಅಲ್ಲ.. ಹಾಸನ ಜಿಲ್ಲೆಯಲ್ಲಿ..
ಹೌದು, ರಾಜ್ಯದಲ್ಲಿ ಕೇಸರಿ ಶಾಲು, ಹಿಜಾಬ್ ವಿವಾದದ ಕಿಡಿ ಹೊತ್ತಿಕೊಂಡಿದೆ. ಹಾಸನದ ಹೊಸಕೊಪ್ಪಲು ಕೈಗಾರಿಕಾ ಪ್ರದೇಶದಲ್ಲಿರುವ ವಿದ್ಯಾಸೌಧ ಪಿಯು ಕಾಲೇಜಿನಲ್ಲಿ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿರುವುದಕ್ಕೆ ಪ್ರತಿಯಾಗಿ ವಿದ್ಯಾರ್ಥಿಗಳು ಕೇಸರಿ ಶಾಲು ಹಾಕಿಕೊಂಡು ಬಂದು ರೀಲ್ಸ್ ಮಾಡಿದ್ದಾರೆ. ಇದೀಗ ಈ ರೀಲ್ಸ್ ಭಾರಿ ವಿವಾದ ಹುಟ್ಟು ಹಾಕಿದೆ. ಪರಿಸ್ಥಿತಿ ಉದ್ವಿಗ್ನವಾಗೋ ಸುಳಿವು ಕೊಟ್ಟಿದೆ.
ಇದನ್ನೂ ಓದಿ: ಮೊದಲ ದಿನವೇ ಆಂಗ್ಲರ ಮೇಲೆ ಟೀಮ್ ಇಂಡಿಯಾ ಸವಾರಿ – ಇಂಗ್ಲೆಂಡ್ ಟೀಮ್ ಬೆಂಡೆತ್ತಿದ ಭಾರತದ ಬೌಲರ್ಸ್
ಸಮವಸ್ತ್ರದಲ್ಲಿ ಬರುತ್ತಿದ್ದ ಮುಸ್ಲಿಂ ವಿದ್ಯಾರ್ಥಿನಿಯರು ಇತ್ತೀಚಿಗೆ ಹಿಜಾಬ್ ಧರಿಸಿ ತರಗತಿಗೆ ಬರಲು ಆರಂಭಿಸಿದ್ದರು. ಈ ವೇಳೆ ಕಾಲೇಜಿನ ಉಪನ್ಯಾಸಕರು ಹಾಗೂ ಪ್ರಾಂಶುಪಾಲರು ತರಗತಿಯಲ್ಲಿ ಹಿಜಾಬ್ ನಿಷೇಧಿಸಲಾಗಿದೆ. ಸಮವಸ್ತ್ರವನ್ನು ಧರಿಸಿ ತರಗತಿಗೆ ಹಾಜರಾಗುವಂತೆ ಸೂಚನೆ ನೀಡಿದ್ದರು. ಉಪನ್ಯಾಸಕರ ಮಾತಿಗೆ ಕ್ಯಾರೆ ಅನ್ನದ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿಕೊಂಡು ಬಂದು ತರಗತಿಗೆ ಹಾಜರಾಗಿದ್ದಾರೆ. ಇದನ್ನು ವಿರೋಧಿಸಿದ ಹಿಂದೂ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಕಾಲೇಜಿಗೆ ಆಗಮಿಸಿದ್ದಾರೆ. ಅಷ್ಟೇ ಅಲ್ಲದೇ ಕೇಸರಿ ಶಾಲಿನೊಂದಿಗೆ ರೀಲ್ಸ್ ಮಾಡಿದ್ದಾರೆ. ಉಪನ್ಯಾಸಕರು ಪ್ರಶ್ನಿಸಿದ್ದಕ್ಕೆ ಹಿಜಾಬ್ ಧರಿಸಿದ್ದಕ್ಕೆ ಕೇಸರಿ ಶಾಲು ಹಾಕಿದ್ದಾಗಿ ಹೇಳಿದ್ದಾರೆ ಎಂದು ಹೇಳಲಾಗುತ್ತಿದೆ. ವಿಷಯ ಗೊತ್ತಾದ ಕೂಡಲೇ ಸ್ಥಳಕ್ಕೆ ಹಾಸನದ ಎಸ್ಪಿ ಮೊಹಮದ್ ಸುಜೀತಾ ಭೇಟಿ ನೀಡಿ, ಕಾಲೇಜು ಆಡಳಿತ ಮಂಡಳಿ ಜೊತೆ ಚರ್ಚೆ ಮಾಡಿದ್ದಾರೆ.
ಈ ಘಟನೆಯಿಂದ ಕಾಲೇಜು ಆಡಳಿತ ಮಂಡಳಿಗೆ ಹೊಸ ತಲೆನೋವು ಶುರುವಾದಂತಾಗಿದೆ. ಒಂದು ರೀತಿ ಹಾಸನದಲ್ಲಿ ಮತ್ತೆ ಧರ್ಮ ದಂಗಲ್ ವಾತಾವರಣ ನಿರ್ಮಾಣವಾಗಿದೆ. ಮುಂದೆ ನಗರದಲ್ಲಿ ಯಾವ ಹಂತ ತಲುಪುತ್ತೋ ಅನ್ನೋ ಭೀತಿ ಶುರುವಾಗಿದೆ. ಈ ನಿಟ್ಟಿನಲ್ಲಿ ಪೊಲೀಸರು ಮುನ್ನೆಚ್ಚರಿಕೆ ವಹಿಸಿದ್ದಾರೆ.