ಹಿಜಾಬ್​ ನಿಷೇಧ ಆದೇಶ ಇನ್ನೂ ವಾಪಸ್​​ ಪಡೆದಿಲ್ಲ – ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ

ಹಿಜಾಬ್​ ನಿಷೇಧ ಆದೇಶ ಇನ್ನೂ ವಾಪಸ್​​ ಪಡೆದಿಲ್ಲ – ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ

ಬಿಜೆಪಿ ಸರ್ಕಾರದ ಅವಧಿಯಲ್ಲಿ ಹಿಜಾಬ್ ನಿಷೇಧ ಭಾರೀ ಸದ್ದು ಗದ್ದಲಕ್ಕೆ ಕಾರಣವಾಗಿತ್ತು. ಇದೀಗ ಮತ್ತೆ ಈ ವಿಚಾರ ಮುನ್ನಲೆಗೆ ಬಂದಿದೆ.  ವಿಧಾನಸಭೆ ಚುನಾವಣೆಯಲ್ಲೂ ಹಿಜಾಬ್ ಪ್ರಮುಖ ಅಸ್ತ್ರವಾಗಿತ್ತು. ಹಿಜಾಬ್ ನಿಷೇಧದ ಹಿನ್ನೆಲೆಯಲ್ಲಿ ಮುಸ್ಲಿಂ ಮತಗಳು ಕಾಂಗ್ರೆಸ್‌ ಕಡೆಯಲ್ಲಿ ಪೂರ್ಣ ಪ್ರಮಾಣದಲ್ಲಿ ಕ್ರೋಡಿಕರಣವಾಗಿದ್ದವು. ಈ ನಡುವೆ ನಾವು ಅಧಿಕಾರಕ್ಕೆ ಬಂದರೆ ಹಿಜಾಬ್ ನಿಷೇಧ ವಾಪಸ್ ಪಡೆದುಕೊಳ್ಳುತ್ತೇವೆ ಎಂದು ನಾಯಕರು ಹೇಳಿದ್ದರು. ಅದರಂತೆ ಸಿಎಂ ಸಿದ್ದರಾಮಯ್ಯ ಹಿಜಾಬ್ ನಿಷೇಧ ವಾಪಸ್ ಪಡೆದುಕೊಳ್ಳುವುದಾಗಿ ನೀಡಿರುವ ಹೇಳಿಕೆ ಭಾರಿ ಚರ್ಚೆಗೆ ಗ್ರಾಸವಾಗಿದೆ. ಈ ಬೆನ್ನಲ್ಲೇ ಸಿಎಂ ಸಿದ್ಧರಾಮಯ್ಯ ಅವರು ತನ್ನ ಹೇಳಿಕೆಗೆ ಸಂಬಂಧಪಟ್ಟಂತೆ ಸ್ಪಷ್ಟನೆ ನೀಡಿದ್ದಾರೆ.  ರಾಜ್ಯದಲ್ಲಿ ಹಿಜಾಬ್​ ನಿಷೇಧ ಆದೇಶ ಇನ್ನೂ ವಾಪಸ್​​ ಪಡೆದಿಲ್ಲ ಅಂತಾ ಹೇಳಿದ್ದಾರೆ.

ಇದನ್ನೂ ಓದಿ:ಬಿಜೆಪಿ ಹಿಂದುತ್ವದ ಅಸ್ತ್ರಕ್ಕೆ ಕಾಂಗ್ರೆಸ್ ಪ್ರತ್ಯಸ್ತ್ರ! – ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ನಿಷೇಧ ವಾಪಸ್! 

ಮೈಸೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಸಿಎಂ  ಸಿದ್ಧರಾಮಯ್ಯ ಅವರು,  ಉಡುಪು ಆಹಾರ ಅವರವರ ಇಷ್ಟ. ರಾಜ್ಯದಲ್ಲಿ ಹಿಜಾಬ್ ನಿಷೇಧಿಸಿ ಹಿಂದಿನ ಬಿಜೆಪಿ ಸರ್ಕಾರ ಕೈಗೊಂಡಿದ್ದ ನಿರ್ಧಾರ ಹಿಂಪಡೆಯಲಾಗುವುದು. ಇನ್ನು ಮುಂದೆ ರಾಜ್ಯದಲ್ಲಿ ಹಿಜಾಬ್ ಮೇಲೆ ಯಾವುದೇ ನಿರ್ಬಂಧ ಇರಲ್ಲ. ಯಾವ ಬಟ್ಟೆ ಹಾಕಬೇಕು, ಏನನ್ನು ತಿನ್ನಬೇಕು ಎಂಬುದು ವೈಯಕ್ತಿಕ ಆಯ್ಕೆ ಎಂದು ಹೇಳಿದ್ದರು. ಈ ಹೇಳಿಕೆಗೆ ವಿರೋಧ ವ್ಯಕ್ತವಾಗುತ್ತಿದ್ದಂತೆ ತಮ್ಮ ಹೇಳಿಕೆ ಕುರಿತು ಸ್ಪಷ್ಟನೆ ನೀಡಿದ್ದಾರೆ. ಯಾರೋ ಒಬ್ಬರು ಪ್ರಶ್ನೆ ಮಾಡಿದ್ದಕ್ಕೆ ಆ ಉತ್ತರ ಕೊಟ್ಟಿದ್ದೇನೆ. ಹಿಜಾಬ್ ನಿಷೇಧ ಆದೇಶ ವಾಪಸ್​ಗೆ ಯೋಚನೆ ಮಾಡಿದ್ದೇವೆ. ಸರ್ಕಾರದಲ್ಲಿ ಈ ಬಗ್ಗೆ ಚರ್ಚೆ ಮಾಡಿ ನಿರ್ಧಾರ ಮಾಡುತ್ತೇವೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಸಿಎಂ ನಿಲುವೇ ನನ್ನ ನಿಲುವು‌! – ಸಚಿವ ರಾಮಲಿಂಗಾರೆಡ್ಡಿ

ಹಿಜಾಬ್​ ನಿಷೇಧ ಆದೇಶ ವಾಪಸ್​​ ಬಗ್ಗೆ ಸಿಎಂ ಹೇಳಿಕೆಯನ್ನು ಸಚಿವ ರಾಮಲಿಂಗಾರೆಡ್ಡಿ ಸಮರ್ಥಿಸಿಕೊಂಡರು. ಸಿಎಂ ನಿಲುವೇ ನನ್ನ ನಿಲುವು‌, ಅವರ ಹೇಳಿಕೆಯೇ ನಮ್ಮ ಹೇಳಿಕೆ. ಯಾವಾಗಲೂ ನಾವು ಸಿಎಂ ಸಿದ್ದರಾಮಯ್ಯ ಹಿಂದೆ ಇರುತ್ತೇವೆ ಎಂದು ಹೇಳಿದ್ದಾರೆ.

ಸಿಎಂ ಹೇಳಿಕೆಯನ್ನು ಸಮರ್ಥಿಸಿಕೊಂಡ ಸಚಿವ ಎಸ್​.ಎಸ್​.ಮಲ್ಲಿಕಾರ್ಜುನ

ದಾವಣಗೆರೆಯಲ್ಲಿ ಸಚಿವ ಎಸ್​.ಎಸ್​.ಮಲ್ಲಿಕಾರ್ಜುನ ಪ್ರತಿಕ್ರಿಯೆ ನೀಡಿದ್ದು, ಸಿಎಂ ಸಿದ್ದರಾಮಯ್ಯ ಹೇಳಿಕೆಯನ್ನು ನಾನು ಸ್ವಾಗತ ಮಾಡುತ್ತೇನೆ. ಸಿಎಂ ಹೇಳಿರುವುದರಲ್ಲಿ ತಪ್ಪೇನಿದೆ. ಅವರವರ ಸಮುದಾಯಕ್ಕೆ ಅವರದ್ದೇ ಆದ ಸಂಪ್ರದಾಯ ಇರುತ್ತೆ. ಹಿಜಾಬ್ ನಿಷೇಧ ಆದೇಶ ಹಿಂಪಡೆಯುವ ಬಗ್ಗೆ ಸಿಎಂ ಹೇಳಿಕೆ ಸರಿ ಎಂದಿದ್ದಾರೆ.

ಸಿದ್ದರಾಮಯ್ಯಗೆ ಧನ್ಯವಾದ ಹೇಳಿದ ವಿದ್ಯಾರ್ಥಿನಿ

ಮಂಡ್ಯದಲ್ಲಿ ಹಿಜಾಬ್ ವಾಪಾಸ್ ಪಡೆಯುವ ಸಿಎಂ ಹೇಳಿಕೆಯನ್ನು ಪಿಇಎಸ್ ಕಾಲೇಜಿನ ಮುಸ್ಲಿಂ ವಿದ್ಯಾರ್ಥಿನಿಯರು ಸ್ವಾಗತಿಸಿದ್ದಾರೆ. ಇಸ್ಲಾಂನಲ್ಲಿ ಹಿಜಾಬ್ ಧರಿಸಬೇಕು ಎಂಬುದು ಇದೆ. ಹೀಗಾಗಿ ನಾವು ಧರಿಸಲೇಬೇಕು. ನಮ್ಮ ಹಕ್ಕು ಅದು. ಈ ಹಿಂದೆ ನಿಷೇಧ ಹೇರಿದ್ದು ತೊಂದರೆ ಆಗಿತ್ತು. ಹಿಜಾಬ್ ಧರಿಸದೇ ನಾವು ಹೊರಗೆ ಬರಲು ಆಗುವುದಿಲ್ಲ. ಕಾಲೇಜಿಗೆ ಬರಲು ಆಗುತ್ತಿರಲಿಲ್ಲ. ಮತ್ತೆ ಅವಕಾಶ ಮಾಡಿಕೊಡುತ್ತಿರುವುದಕ್ಕೆ ಧನ್ಯವಾದ ಹೇಳುತ್ತೇನೆ ಎಂದಿದ್ದಾರೆ.

Shwetha M