ಎಕ್ಸ್‌ಪ್ರೆಸ್‌ ವೇಯಲ್ಲಿ ಹೈಟೆಕ್ ಕ್ಯಾಮರಾ ಕಣ್ಣು – ಸ್ಪೀಡ್ ಲಿಮಿಟ್ ಮೀರಿದ್ರೆ ಮನೆಗೆ ಬರುತ್ತೆ ನೋಟಿಸ್

ಎಕ್ಸ್‌ಪ್ರೆಸ್‌ ವೇಯಲ್ಲಿ ಹೈಟೆಕ್ ಕ್ಯಾಮರಾ ಕಣ್ಣು – ಸ್ಪೀಡ್ ಲಿಮಿಟ್ ಮೀರಿದ್ರೆ ಮನೆಗೆ ಬರುತ್ತೆ ನೋಟಿಸ್

ಬೆಂಗಳೂರು: ಬೆಂಗಳೂರು – ಮೈಸೂರು ನಡುವೆ ನೂತನವಾಗಿ ಉದ್ಘಾಟನೆಯಾಗಿರುವ ಎಕ್ಸ್‌ಪ್ರೆಸ್‌ ವೇ ಒಂದಿಲ್ಲೊಂದು ವಿಚಾರಕ್ಕೆ ಸುದ್ದಿಯಾಗುತ್ತಲೇ ಇದೆ. ಟೋಲ್ ಸಂಗ್ರಹ, ಕಳಪೆ ಕಾಮಗಾರಿ, ಟೋಲ್ ನಲ್ಲಿ ತಾಂತ್ರಿಕ ದೋಷ, ಪಾದಚಾರಿಗಳಿಗೆ ತೊಂದರೆ, ಕಳ್ಳತನ ಹೀಗೆ ಹತ್ತು ಹಲವು ದೂರುಗಳು ಬರುತ್ತಲೇ ಇವೆ. ಈಗ ದಶಪಥ ರಸ್ತೆ ವಾಹನ ದಟ್ಟಣೆಯಿಂದ ಅಪಘಾತಗಳ ಹಾಟ್ ಸ್ಪಾಟ್ ಆಗುತ್ತಿದೆ. ಈ ರಸ್ತೆಯಲ್ಲಿ ಅಪಘಾತ ನಿಯಂತ್ರಣಕ್ಕೆ ಹೆದ್ದಾರಿ ಪ್ರಾಧಿಕಾರ ಹೈಟೆಕ್ ಟಚ್ ನೀಡಿದ್ದು, ಹೈವೇ ಸ್ಪೀಡ್ ಲಿಮಿಟ್ ಅನ್ನು ಮೀರಿದರೆ ಗಾಡಿ ಫೋಟೋ ಸಮೇತ ಮನೆಗೆ ನೋಟಿಸ್ ಬರುವುದರ ಜೊತೆಗೆ ಕೇಸ್ ಕೂಡ ದಾಖಲು ಮಾಡುವ ವ್ಯವಸ್ಥೆ ಮಾಡಿದೆ.

ಇದನ್ನೂ ಓದಿ:ಟೋಲ್ ಸಂಗ್ರಹ ಶುರುವಾದ ಮರುದಿನವೇ ಕಿತ್ತೋಯ್ತು ರಸ್ತೆ – ಬೆಂಗಳೂರು ಮೈಸೂರು ಹೆದ್ದಾರಿ ಬಣ್ಣ ಬಯಲು..!

ಬೆಂಗಳೂರು – ಮೈಸೂರು ಹೆದ್ದಾರಿಯಲ್ಲಿ ಸಂಚಾರಕ್ಕೆ ಅನುವು ಸಿಕ್ಕ ಬಳಿಕ ಬರೋಬ್ಬರಿ 335ಕ್ಕೂ ಹೆಚ್ಚು ಅಪಘಾತ ಪ್ರಕರಣಗಳು ಸಂಭವಿಸಿವೆ. ಸುಮಾರು 85ಕ್ಕೂ ಹೆಚ್ಚು ಸವಾರರು ಪ್ರಾಣ ಬಿಟ್ಟಿದ್ದಾರೆ. ಹೀಗಾಗಿ ವಾಹನ ಸವಾರರ ಸ್ಪೀಡ್ ಮೇಲೆ ಕಣ್ಣಿಡಲು ಹೆದ್ದಾರಿ ಪ್ರಾಧಿಕಾರ ಹೈಟೆಕ್ ಕ್ಯಾಮರಾಗಳ ಅಳವಡಿಕೆ ಮಾಡಲು ಮುಂದಾಗಿದೆ.

ರಸ್ತೆ ಕ್ಲಿಯರ್ ಇದೆ ಎಂಬ ಕಾರಣಕ್ಕೆ ವಾಹನ ಸವಾರರು ಅತಿ ವೇಗವಾಗಿ ಡ್ರೈವಿಂಗ್ ಮಾಡುತ್ತಿದ್ದಾರೆ. ಇದರಿಂದಾಗಿಯೇ ಅಪಘಾತ ಪ್ರಕರಣ ಹೆಚ್ಚಾಗುತ್ತಿದೆ ಅನ್ನೋದನ್ನು ಅರಿತ ಹೈವೇ ಪ್ರಾಧಿಕಾರ  ಸ್ಪೀಡ್ ಲಿಮಿಟ್ ಕಂಟ್ರೋಲ್ ಮಾಡುವ ನಿಟ್ಟಿನಲ್ಲಿ ತಂತ್ರಜ್ಞಾನದ ಮೊರೆ ಹೋಗಿದೆ. ರಸ್ತೆಯಲ್ಲಿ ಪ್ರತಿ 800 ಮೀ.ಗೊಂದು ಹೈಟೆಕ್‌ ಟೆಕ್ನಾಲಜಿಯ ಎಎನ್‌ಪಿಆರ್ ಕ್ಯಾಮರಾ ಅಳವಡಿಕೆಗೆ ಮುಂದಾಗಿದೆ. ಈ ಕ್ಯಾಮರಾಗೆ ಆರ್ಟಿಫಿಷಿಯಲ್ ಪ್ರೋಗ್ರಾಮಿಂಗ್ ಅಳವಡಿಕೆ ಮಾಡಲಾಗಿದೆ. ವಾಹನ ಸವಾರರು ಹೈವೇಯ ಸ್ಪೀಡ್ ಲಿಮಿಟ್‌ ಅನ್ನು ಮೀರಿದರೆ ಅತಿವೇಗದ ಚಾಲನೆ ಅಡಿ ಪ್ರಕರಣ ದಾಖಲಾಗಿ ನೋಟಿಸ್ ಅವರ ಮನೆಗೆ ಬರಲಿದೆ.

ಈ ಕ್ಯಾಮರಾ ಕೇವಲ ಸ್ಪೀಡ್ ಕಂಟ್ರೋಲ್‌ಗೆ ಸಹಕಾರಿ ಅಷ್ಟೇ ಅಲ್ಲ. ಇತ್ತೀಚೆಗೆ ಹೈವೇಯಲ್ಲಿ ಹೆಚ್ಚಾಗಿರುವ ಕಳ್ಳತನ ಪ್ರಕರಣಗಳನ್ನು ಕೂಡ ತಡೆಯಲು ಸಹಕಾರಿಯಾಗಲಿವೆ. ಅಲ್ಲದೆ ಮಾರ್ಗ ಮಧ್ಯ ಯಾವುದಾದರೂ ಅಪಘಾತ ಸಂಭವಿಸಿದರೆ ಹತ್ತಿರದಲ್ಲಿರುವ ಆ್ಯಂಬುಲೆನ್ಸ್ ಸರ್ವೀಸ್, ಹೆದ್ದಾರಿ ಪೊಲೀಸರು, ಹೆದ್ದಾರಿ ಅಧಿಕಾರಿಗಳಿಗೂ ಮಾಹಿತಿ ರವಾನಿಸುತ್ತದೆ. ಸದ್ಯ ಈ ಎಲ್ಲ ಟೆಕ್ನಾಲಜಿ ಅಳವಡಿಕೆಗೆ ಡಿಪಿಆರ್ ಸಲ್ಲಿಕೆಯಾಗಿದ್ದು, ಮುಂದಿನ 6, 7ತಿಂಗಳಲ್ಲಿ ಸಂಪೂರ್ಣ ಅಳವಡಿಕೆ ಮಾಡುವ ಸಾಧ್ಯತೆ ಇದೆ ಅಂತಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

suddiyaana