ಆದಿಯೋಗಿ ಪ್ರತಿಮೆ ಸ್ಥಾಪನೆಗೆ ತಡೆ ನೀಡಿದ ಹೈಕೋರ್ಟ್ – ಜನವರಿ 15ರಂದು ಉದ್ಘಾಟನೆ ಆಗೋದು ಡೌಟ್
ಚಿಕ್ಕಬಳ್ಳಾಪುರ ಬಳಿ ಇಶಾ ಫೌಂಡೇಷನ್ ವತಿಯಿಂದ ನಿರ್ಮಾಣವಾಗುತ್ತಿರುವ ಆದಿಯೋಗಿ ಪ್ರತಿಮೆ ಸ್ಥಾಪನೆ ವಿಚಾರವಾಗಿ ರಾಜ್ಯ ಸರ್ಕಾರ ಮತ್ತು ಇಶಾ ಯೋಗ ಕೇಂದ್ರಕ್ಕೆ ಹಿನ್ನಡೆಯುಂಟಾಗಿದೆ. ಆದಿಯೋಗಿ ಪ್ರತಿಮೆ ಸ್ಥಾಪನೆ ವಿಚಾರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲು ಹೈಕೋರ್ಟ್ ಮಧ್ಯಂತರ ಆದೇಶ ಹೊರಡಿಸಿದೆ. ಸರ್ಕಾರ ಮತ್ತು ಇಶಾ ಯೋಗ ಕೇಂದ್ರ ಸೇರಿ 16 ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಲಾಗಿದೆ. ಆದಿಯೋಗಿ ಪ್ರತಿಮೆ ಸ್ಥಾಪನೆ ಸ್ಥಳವು ಪರಿಸರ ಸೂಕ್ಷ್ಮ ವಲಯವಾಗಿದ್ದು, ಅದನ್ನು ವಾಣಿಜ್ಯ ಉದ್ದೇಶಕ್ಕೆ ಬಳಕೆ ಮಾಡುವುದು ಸರಿಯಲ್ಲ ಎಂದು ಅರ್ಜಿದಾರರ ಪರ ವಕೀಲ ಎಂ. ಶಿವಪ್ರಕಾಶ್ ಅವರು ವಾದ ಮಂಡಿಸಿದ್ದಾರೆ.
ಇದನ್ನೂ ಓದಿ: ಕೋರ್ಟ್‌ಗೆ ಕಾಲಿಡಲಿರುವ ರೋಬೋಟ್ ವಕೀಲ – ಜಗತ್ತಿನಲ್ಲೇ ಪ್ರಥಮ ಬಾರಿಗೆ ರೋಬೋಟ್ ಲಾಯರ್ ಪ್ರಯೋಗ..!
ಆದಿಯೋಗಿ ಪ್ರತಿಮೆ ಸ್ಥಾಪನೆಗಾಗಿ ಸರ್ಕಾರ ಕಾನೂನುಬಾಹಿರವಾಗಿ ಜಮೀನು ಮಂಜೂರು ಮಾಡಿದೆ. ನಂದಿ ಬೆಟ್ಟಕ್ಕೆ ಐತಿಹಾಸಿಕ ಮಹತ್ವವಿದೆ ಎಂದು ವಾದ ಮಂಡಿಸಲಾಗಿದೆ. ಪರಿಸರದ ಮೇಲೆ ಪರಿಣಾಮ ಬೀರಬಹುದೆಂಬುದನ್ನು ಒಪ್ಪಬಹುದು ಎಂದು ಸರ್ಕಾರದ ಅಧಿಸೂಚನೆಯನ್ನು ಪ್ರಶ್ನಿಸಲು ಅವಕಾಶ ನೀಡಿದ ಹೈಕೋರ್ಟ್, ಯಥಾಸ್ಥಿತಿಗೆ ಆದೇಶಿಸಿದೆ. ಇದೇ ಜನವರಿ 15 ಯೋಗೇಶ್ವರ ಲಿಂಗ ಸ್ಥಾಪನೆಗೆ ಉದ್ದೇಶಿಸಲಾಗಿತ್ತು. ಇದೀಗ ಯಥಾಸ್ಥಿತಿ ಕಾಯ್ದುಕೊಳ್ಳಲು ಮುಖ್ಯ ನ್ಯಾಯಮೂರ್ತಿ ಪಿ.ಬಿ. ವರಾಳೆ ಮತ್ತು ನ್ಯಾ. ಅಶೋಕ್ ಎಸ್. ಕಿಣಗಿ ಅವರಿದ್ದ ನ್ಯಾಯ ಪೀಠ ಆದೇಶ ನೀಡಿದೆ. ಈ ಹಿನ್ನೆಲೆಯಲ್ಲಿ ಉದ್ಘಾಟನೆಗೆ ಉಪರಾಷ್ಟ್ರಪತಿ ಬರುವುದು ಅನುಮಾನವಾಗಿದೆ.