ಮಗನ ಅನರ್ಹತೆ ಬೆನ್ನಲ್ಲೇ ಹೆಚ್.ಡಿ ರೇವಣ್ಣಗೂ ಹೈಕೋರ್ಟ್ ನೋಟಿಸ್ – ಎ. ಮಂಜುಗೂ ಹೈಕೋರ್ಟ್ ತರಾಟೆ
ಜೆಡಿಎಸ್ನ ಪ್ರಜ್ವಲ್ ರೇವಣ್ಣ ಅವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಿ ಕರ್ನಾಟಕ ಹೈಕೋರ್ಟ್ ಆದೇಶ ಹೊರಡಿಸಿದೆ. 2019ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಚುನಾವಣಾ ಆಯೋಗಕ್ಕೆ ಸುಳ್ಳು ಮಾಹಿತಿ ನೀಡಿದ್ದಾರೆ ಎಂದು ವಕೀಲ ದೇವರಾಜೇಗೌಡ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿ ಕೋರ್ಟ್ ಈ ಆದೇಶ ನೀಡಿದೆ. ಇಷ್ಟೇ ಅಲ್ಲದೇ, ಮಾಜಿ ಸಚಿವ ಹೆಚ್.ಡಿ ರೇವಣ್ಣ ಹಾಗೂ ಎ. ಮಂಜುಗೂ ಹೈಕೋರ್ಟ್ ನೋಟಿಸ್ ನೀಡಿದೆ.
ಇದನ್ನೂ ಓದಿ: ರಾಜ್ಯದ ಸಚಿವರಿಗೆ ಕಾರು ಭಾಗ್ಯ – ಈ ಸಚಿವರಿಗೆ ಇನ್ನೋವಾ ಹೈಕ್ರಾಸ್ ಹೈಬ್ರಿಡ್
ಮಗನ ಅನರ್ಹತೆ ಬೆನ್ನಲ್ಲೇ ಮಾಜಿ ಸಚಿವ ಹೆಚ್.ಡಿ ರೇವಣ್ಣಗೂ ಹೈಕೋರ್ಟ್ ನೋಟಿಸ್ ನೀಡಿದೆ. ಬೂತ್ ಒಂದರಲ್ಲಿ ಕುಳಿತು ಮತ ಹಾಕಿಸಿರುವ ಆರೋಪ ರೇವಣ್ಣ ವಿರುದ್ಧ ಕೇಳಿ ಬಂದಿದೆ. ನಿಮ್ಮನ್ನು ಯಾಕೆ ಅನರ್ಹಗೊಳಿಸಬಾರದು ಎಂದು ಹೈಕೋರ್ಟ್ ಕೇಳಿದೆ ಅಂತ ಅರ್ಜಿದಾರರ ಪರ ವಕೀಲೆ ಪ್ರಮೀಳಾ ನೇಸರ್ಗಿ ಮಾಧ್ಯಮದವರ ಜೊತೆ ಮಾತನಾಡುತ್ತಾ ಹೇಳಿದ್ದಾರೆ. ಮಗನ ಜೊತೆ ರೇವಣ್ಣ ಸಹ ಚುನಾವಣೆ ಅಕ್ರಮದಲ್ಲಿ ಭಾಗಿಯಾಗಿದ್ದರು. ಈ ಸಂಬಂಧ ಅಗತ್ಯ ಕರಪತ್ರಗಳನ್ನು ನ್ಯಾಯಾಲಯಕ್ಕೆ ನೀಡಲಾಗಿತ್ತು ಎಂದು ವಕೀಲೆ ಪ್ರಮೀಳಾ ನೇಸರ್ಗಿ ಹೇಳಿದ್ದಾರೆ.
ಲೋಕಸಭಾ ಮತ್ತು ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಎ.ಮಂಜು ಕೂಡ ಅಕ್ರಮವಾಗಿ ಭಾಗಿಯಾಗಿದ್ದಾರೆ ಎಂದು ಹೈಕೋರ್ಟ್ ತೀರ್ಪು ನೀಡಿದೆ. ಲೋಕಸಭಾ ಚುನಾವಣೆಯ ವೇಳೆ ಬಿಜೆಪಿಯಿಂದ ಸ್ಪರ್ಧೆ ಮಾಡಿದ್ದ ಎ.ಮಂಜು ಅವರೂ ಚುನಾವಣಾ ಅಕ್ರಮದಲ್ಲಿ ಭಾಗಿ ಆಗಿದ್ದಾರೆ ಎಂದು ತರಾಟೆ ತೆಗೆದುಕೊಂಡಿದೆ. ಇನ್ನು ಮುಂದಿನ ದಿನಗಳಲ್ಲಿ ಎ.ಮಂಜು ಅವರ ಶಾಸಕ ಸ್ಥಾನಕ್ಕೆ ಕುತ್ತು ಬರಲಿದೆಯೇ ಎಂಬುದರ ಬಗ್ಗೆ ನ್ಯಾಯಾಲಯ ತೀರ್ಮಾನ ಕೈಗೊಳ್ಳುವ ಸಾಧ್ಯತೆಯಿದೆ.
ಲೋಕಸಭಾ ಚುನಾವಣೆ ವೇಳೆ ಅನರ್ಹಗೊಂಡ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಬಿಜೆಪಿಯಿಂದ ಎ.ಮಂಜು ಸ್ಪರ್ಧೆ ಮಾಡಿದ್ದರು. ಚುನಾವಣಾ ಫಲಿತಾಂಶದಲ್ಲಿ ಎ. ಮಂಜು ಅವರಿಗೆ ಸೋಲುಂಟಾಗಿದ್ದರಿಂದ ಪ್ರಜ್ವಲ್ ರೇವಣ್ಣ ಅವರು ಚುನಾವಣಾ ಆಯೋಗಕ್ಕೆ ಸುಳ್ಳು ಮಾಹಿತಿ ನೀಡಿ ಸ್ಪರ್ಧೆ ಮಾಡಿ ಗೆದ್ದಿದ್ದಾರೆ. ಅವರ ಸಂಸದ ಸ್ಥಾನವನ್ನು ರದ್ದುಗೊಳಿಸಿ ನನಗೆ ಸಂಸದ ಸ್ಥಾನವನ್ನು ನೀಡಬೇಕು ಎಂದು ಎ.ಮಂಜು ನ್ಯಾಯಾಲಯದ ಮೊರೆ ಹೋಗಿದ್ದರು. ಇನ್ನು ಕೋರ್ಟ್‌ನಲ್ಲಿ ವಿಚಾರಣೆ ಬಾಕಿ ಇರುವ ಬೆನ್ನಲ್ಲಿಯೇ 2023ರ ಕರ್ನಾಟಕ ವಿಧಾನಸಭಾ ಚುನಾವಣೆ ವೇಳೆ ಬಿಜೆಪಿ ತೊರೆದು ಜೆಡಿಎಸ್ ಸೇರ್ಪಡೆಯಾಗಿ, ಈಗ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ಎ. ಮಂಜು ಅವರು, ಹೈಕೋರ್ಟ್ ಆದೇಶ ಸ್ಬಾಗತಿಸುತ್ತೇನೆ. ಆದೇಶದ ಪ್ರತಿ ನೋಡಿ ಮುಂದೆ ಕಾನೂನು ಹೋರಾಟ ಮಾಡುವ ಬಗ್ಗೆ ತಿರ್ಮಾನ ಮಾಡಲಾಗುತ್ತದೆ. ಈಗ ಒಂದೇ ಪಕ್ಷದಲ್ಲಿ ಇದ್ದೇವೆ. ದೇವೆಗೌಡರು, ರೇವಣ್ಣ ಹಾಗೂ ಪ್ರಜ್ವಲ್ ಜೊತೆಗೆ ಚರ್ಚೆ ಆಗಲಿದೆ. ನಂತರ ಮುಂದೇನು ಅಂತ ತಿರ್ಮಾನ ಮಾಡುತ್ತೇನೆ ಎಂದು ಹೇಳಿದ್ದಾರೆ.