ಶಬರಿಮಲೆ ‘ಅರವಣ ಪ್ರಸಾದಮ್’ ವಿತರಣೆಗೆ ಹೈಕೋರ್ಟ್ ತಡೆ – ವ್ಯರ್ಥವಾಯ್ತು 6 ಕೋಟಿ ರೂಪಾಯಿ ಮೌಲ್ಯದ ಪ್ರಸಾದ..!
ಕೊಚ್ಚಿ: ಶಬರಿಮಲೆಗೆ ಹೋದವರು ಬಂದಾಗ ತರುವ ಪ್ರಸಾದ ತಿನ್ನುವುದೇ ಏನೋ ತೃಪ್ತಿ. ಅಷ್ಟೊಂದು ರುಚಿ ಆ ಪ್ರಸಾದಕ್ಕಿದೆ. ಆದರೆ, ಅದೇ ಪ್ರಸಾದವನ್ನು ತಿಂದರೆ ಅಪಾಯ ಅನ್ನೋ ಆತಂಕಕಾರಿ ವಿಚಾರ ಈಗ ಬೆಳಕಿಗೆ ಬಂದಿದೆ. ಶಬರಿ ಮಲೆಗೆ ಹೋಗುವ ಭಕ್ತರ ಇಷ್ಟವಾದ ‘ಅರವಣ ಪ್ರಸಾದಮ್’ ಮನುಷ್ಯರ ಬಳಕೆಗೆ ಸುರಕ್ಷಿತ ಅಲ್ಲ ಎಂದು ಆಹಾರ ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದರು. ಇದೀಗ ಅಯ್ಯಪ್ಪ ಸ್ವಾಮಿ ದೇಗುಲವನ್ನು ನಿರ್ವಹಿಸುವ ಟ್ರಾವಾಂಕೋರ್ ದೇವಸ್ವಂ ಮಂಡಳಿಗೆ ‘ಅರವಣ ಪ್ರಸಾದಮ್’ ವಿತರಣೆಯನ್ನು ತಕ್ಷಣ ನಿಲ್ಲಿಸುವಂತೆ ಕೇರಳ ಹೈಕೋರ್ಟ್ ಕಟ್ಟುನಿಟ್ಟಿನ ಆದೇಶ ನೀಡಿದೆ. ಭಾರತೀಯ ಆಹಾರ ಸುರಕ್ಷೆ ಮತ್ತು ಮಾನಕಗಳ ಪ್ರಾಧಿಕಾರವು (Food Safety and Standards Authority of India FSSAI) ತನ್ನ ಪ್ರಯೋಗಾಲಯದಲ್ಲಿ ಅಯ್ಯಪ್ಪಸ್ವಾಮಿ ಪ್ರಸಾದಕ್ಕೆ ಬಳಕೆಯಾಗುವ ಏಲಕ್ಕಿಯನ್ನು ತಪಾಸಣೆಗೆ ಒಳಪಡಿಸಿದಾಗ ಕೀಟನಾಶಕದ ಉಳಿಕೆ ಪ್ರಮಾಣವು ಅಪಾಯಕಾರಿ ಮಟ್ಟದಲ್ಲಿದ್ದ ಸಂಗತಿ ಬೆಳಕಿಗೆ ಬಂದಿತ್ತು. ‘ಮನುಷ್ಯರ ಬಳಕೆಗೆ ಇದು ಸುರಕ್ಷಿತ ಅಲ್ಲ’ಎಂದು ಆಹಾರ ವಿಜ್ಞಾನಿಗಳಿಗೆ ಅಭಿಪ್ರಾಯಪಟ್ಟ ಹಿನ್ನೆಲೆಯಲ್ಲಿ ಕೇರಳ ಹೈಕೋರ್ಟ್ ಪ್ರಸಾದ ವಿತರಣೆ ನಿಲ್ಲಿಸುವಂತೆ ಆದೇಶ ಹೊರಡಿಸಿದೆ. ಇದರಿಂದಾಗಿ ಬರೋಬ್ಬರಿ ಆರೂವರೆ ಕೋಟಿ ರೂಪಾಯಿ ಮೌಲ್ಯದ ಅರವಣ ಪ್ರಸಾದ ವ್ಯರ್ಥ ಆಗಲಿದೆ.
ಇದನ್ನೂ ಓದಿ: 50,000 ಬಳಿಕ ಭೂಮಿ ಸಮೀಪ ಬರಲಿದೆ ಅಪರೂಪದ ಧೂಮಕೇತು – ನೋಡಲು ಮಿಸ್ ಮಾಡಲೇಬೇಡಿ..!
ಅಪಾಯಕಾರಿ ಮಟ್ಟದಲ್ಲಿ ಕೀಟನಾಶಕದ ಉಳಿಕೆ ಇರುವ ಏಲಕ್ಕಿ ಬಳಸಿ ಸಿದ್ಧಪಡಿಸಿದ ಪ್ರಸಾದವನ್ನು ಭಕ್ತರಿಗೆ ನೀಡುವಂತಿಲ್ಲ. ಈ ಆದೇಶ ಪಾಲನೆಯ ಖಾತ್ರಿಯ ಹೊಣೆಯು ಆಹಾರ ಸುರಕ್ಷಾ ಆಯುಕ್ತರ ಎಂದು ಹೈಕೋರ್ಟ್ ತನ್ನ ಆದೇಶದಲ್ಲಿ ತಿಳಿಸಿದೆ. ಪ್ರಸಾದ ತಯಾರಿಸಲು ಖರೀದಿಸುವ ಏಲಕ್ಕಿಯನ್ನು ಪರೀಕ್ಷೆಗೆ ಒಳಪಡಿಸಿದ ವೇಳೆ ಅದರಲ್ಲಿ 14 ವಿವಿಧ ಮಾದರಿಯ ಕೀಟನಾಶಕ ಕಂಡುಬಂದಿತ್ತು. ಗುತ್ತಿಗೆ ಪಡೆಯಲು ವಿಫಲವಾಗಿದ್ದ ಕಂಪನಿಯೊಂದು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್ ಈ ಪರೀಕ್ಷೆಗೆ ಆದೇಶಿಸಿತ್ತು. ಪ್ರಯೋಗಾಲಯದ ವರದಿಯ ಪ್ರಕಾರ, ಈ ಏಲಕ್ಕಿಯಲ್ಲಿ 14 ಕೀಟನಾಶಕಗಳ ಉಳಿಕೆ ಪ್ರಮಾಣವು ಗರಿಷ್ಠ ಮಿತಿಯನ್ನು ಮೀರಿದೆ. (Maximum Residue Limit MRL). ಡಿತಿಯೊಕಾರ್ಬಮೇಟ್ಸ್, (Dithiocarbamates ) ಸೈಪರ್ಮೆತರಿನ್, ಇಮಿಡಾಕ್ಲೊಪ್ರಿಡ್ ಪ್ರಮಾಣ ಗಣನೀಯ ಮಟ್ಟದಲ್ಲಿದೆ.
ಇನ್ನು, ಶಬರಿಮಲೆ ದೇಗುಲ ಪ್ರಸಾದದ ವಿಚಾರದಲ್ಲಿ ನ್ಯಾಯಾಲಯ ಮಧ್ಯಪ್ರವೇಶಿಸುವ ಅಗತ್ಯವಿಲ್ಲ. ಪ್ರಸಾದವನ್ನು ವೈಜ್ಞಾನಿಕವಾಗಿ ಮತ್ತು ಆರೋಗ್ಯಕರ ರೀತಿಯಲ್ಲಿಯೇ ಸಿದ್ಧಪಡಿಸಲಾಗುತ್ತಿದೆ. ಸೇವಿಸುವ ಭಕ್ತರ ಆರೋಗ್ಯಕ್ಕೆ ಯಾವುದೇ ಸಮಸ್ಯೆಯಾಗುವುದಿಲ್ಲ ಎಂದು ಟಿಡಿಬಿ ಪರ ವಕೀಲರು ವಾದ ಮಂಡಿಸಿದರು. ‘ಆರವಣ ಪ್ರಸಾದಮ್ ಸಿದ್ಧಪಡಿಸುವಾಗ ಅದನ್ನು 200 ಡಿಗ್ರಿ ಸೆಲ್ಷಿಯಸ್ನಷ್ಟು ಉಷ್ಣಾಂಶದಲ್ಲಿ ಬಿಸಿ ಮಾಡಲಾಗುತ್ತದೆ. ಅಕ್ಕಿ, ಬೆಲ್ಲ ಸೇರಿದಂತೆ ಇತರ ಹಲವು ವಸ್ತುಗಳು ಬಳಕೆಯಾಗುತ್ತವೆ. 350 ಕೆಜಿ ಪ್ರಸಾದ ಸಿದ್ಧಪಡಿಸಲು ಕೇವಲ 720 ಗ್ರಾಮ್ನಷ್ಟು ಏಲಕ್ಕಿ ಬಳಕೆಯಾಗುತ್ತದೆ. ಇದು ಅತಿಕಡಿಮೆ ಪ್ರಮಾಣವಾಗಿದ್ದು, ಮನುಷ್ಯರು ಪ್ರಸಾದ ಸೇವಿಸಿದರೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ವಾದ ಮಂಡಿಸಿದ್ದರು.
ಆದರೆ, ಪ್ರಸಾದದ ವಿಚಾರದಲ್ಲಿ ಮಧ್ಯಪ್ರವೇಶಿಸುವ ಅಧಿಕಾರ ನ್ಯಾಯಾಲಯಕ್ಕೆ ಇಲ್ಲ ಎಂಬ ಟಿಡಿಬಿ ವಾದವನ್ನು ಹೈಕೋರ್ಟ್ ಸ್ಪಷ್ಟವಾಗಿ ತಳ್ಳಿಹಾಕಿತು. ‘ಪ್ರಯೋಗಾಲಯದ ಪರೀಕ್ಷೆಗಳಲ್ಲಿ ಮನುಷ್ಯರ ಬಳಕೆಗೆ ಅಪಾಯಕಾರಿ ಎಂದು ಕಂಡುಬಂದ ಆಹಾರ ಪದಾರ್ಥವನ್ನು ಯಾರಿಗೂ ನೀಡುವಂತಿಲ್ಲ. ಇದು ಸಂವಿಧಾನವು 21ನೇ ಪರಿಚ್ಛೇದದ ಅಡಿಯಲ್ಲಿ ನೀಡಿರುವ ಜೀವಿಸುವ ಹಕ್ಕಿನ ಉಲ್ಲಂಘನೆಯಾಗುತ್ತದೆ. ಕೀಟನಾಶಕದ ಉಳಿಕೆ ಇರುವ ಏಲಕ್ಕಿಯಿಂದ ಸಿದ್ಧಪಡಿಸಿದ ‘ಆರವಣ ಪ್ರಸಾದಮ್’ ವಿತರಣೆಯನ್ನು ತಕ್ಷಣ ನಿಲ್ಲಿಸಬೇಕು ಎಂದು ಕೋರ್ಟ್ ತುರ್ತು ಆದೇಶ ಹೊರಡಿಸಿತು.
ತಿರುಪತಿಯ ಲಡ್ಡು, ಪಳನಿಯ ಪಂಚಾಮೃತ ಹೇಗೆ ಖ್ಯಾತಿ ಪಡೆದಿವೆಯೋ ಅದೇ ಮಟ್ಟದ ಪ್ರಸಿದ್ಧಿ ಪಡೆದಿರುವುದು ಶಬರಿಮಲೆ ಕ್ಷೇತ್ರದ ಪ್ರಸಾದ ಅರಾವಣಂ. ಅಕ್ಕಿ, ಬೆಲ್ಲ ಹಾಗೂ ತುಪ್ಪ ಬಳಸಿ ಮಾಡುವ ಈ ಅರವಣಂ ಪ್ರಸಾದ ಶಬರಿಮಲೆ ಕ್ಷೇತ್ರದ ವಿಶಿಷ್ಠ ಪ್ರಸಾದವಾಗಿ ಪ್ರಸಿದ್ದಿ ಪಡೆದಿದೆ.