ಡಿಸಿಎಂ ಹೆಚ್ಚುವರಿ ಹುದ್ದೆ ಸೃಷ್ಟಿ ವಿಚಾರವಾಗಿ ಜಟಾಪಟಿ – ಬಹಿರಂಗ ಹೇಳಿಕೆ ನೀಡದಂತೆ ಕಾಂಗ್ರೆಸ್ ನಾಯಕರಿಗೆ ಹೈಕಮಾಂಡ್ ಎಚ್ಚರಿಕೆ

ಡಿಸಿಎಂ ಹೆಚ್ಚುವರಿ ಹುದ್ದೆ ಸೃಷ್ಟಿ ವಿಚಾರವಾಗಿ ಜಟಾಪಟಿ – ಬಹಿರಂಗ ಹೇಳಿಕೆ ನೀಡದಂತೆ ಕಾಂಗ್ರೆಸ್ ನಾಯಕರಿಗೆ ಹೈಕಮಾಂಡ್ ಎಚ್ಚರಿಕೆ

ಕರ್ನಾಟಕದಲ್ಲಿ ಡಿಸಿಎಂ ಸ್ಥಾನಕ್ಕಾಗಿ ಕಾಂಗ್ರೆಸ್ ನಾಯಕರು ಬೇಡಿಕೆ ಇಡುತ್ತಿದ್ದಾರೆ. ಸಚಿವ ಕೆ.ಎನ್ ರಾಜಣ್ಣ ನೀಡಿದ್ದ ಹೇಳಿಕೆ ಸಂಚಲನ ಸೃಷ್ಟಿಸಿದ್ದು ಹೈಕಮಾಂಡ್ ಅಂಗಳಕ್ಕೂ ತಲುಪಿದೆ. ಇದೀಗ ಕಾಂಗ್ರೆಸ್ ನಾಯಕರು ಡಿಸಿಎಂ ಹೆಚ್ಚುವರಿ ಹುದ್ದೆ ವಿಚಾರವಾಗಿ ಹೇಳಿಕೆ ನೀಡಿದಂತೆ ಹೈಕಮಾಂಡ್ ಎಚ್ಚರಿಕೆ ನೀಡಿದೆ.

ಲೋಕಸಭೆ ಚುನಾವಣೆ ಹತ್ತಿರವಾಗುತ್ತಿರುವ ಬೆನ್ನಲ್ಲೇ ಹೆಚ್ಚುವರಿ ಡಿಸಿಎಂ ಸ್ಥಾನವನ್ನು ಸೃಷ್ಟಿ ಮಾಡಬೇಕು ಎಂಬುವುದು ಸಿದ್ದರಾಮಯ್ಯ ಬಣದ ಬೇಡಿಕೆಯಾಗಿತ್ತು. ಈ ಬೇಡಿಕೆಯನ್ನು ಸಿದ್ದು ಆಪ್ತರಾದ ಕೆ.ಎನ್ ರಾಜಣ್ಣ ಅವರು ಇಟ್ಟಿದ್ದರು. ಇದಕ್ಕೆ ಡಾ.ಜಿ ಪರಮೇಶ್ವರ್ ಸೇರಿದಂತೆ ಹಲವು ನಾಯಕರು ಹೌದು ಎಂದಿದ್ದರು. ಹೆಚ್ಚುವರಿ ಡಿಸಿಎಂ ಸೃಷ್ಟಿಗೆ ಲೋಕಸಭೆ ಚುನಾವಣೆಯಲ್ಲಿ ಮತಗಳಿಕೆಯ ಕಾರಣವನ್ನು ನೀಡಿದರೂ ಇದರ ಅಸಲಿ ಉದ್ದೇಶ ಡಿಕೆ ಶಿವಕುಮಾರ್ ಅವರ ಪ್ರಭಾವವನ್ನು ಕುಗ್ಗಿಸುವುದಾಗಿದೆ ಎಂದೇ ವ್ಯಾಖ್ಯಾನಿಸಲಾಗುತ್ತಿದೆ. ಸಿದ್ದರಾಮಯ್ಯ ಬಣದ ಬಹಿರಂಗ ಹೇಳಿಕೆಗೆ ವಿರೋಧಗಳು ವ್ಯಕ್ತವಾಗಿದ್ದವು. ಡಿಕೆಶಿ ಆಪ್ತರಾದ ಶಾಸಕ ಕುಣಿಗಲ್ ರಂಗನಾಥ್, ಮಾಗಡಿ ಬಾಲಕೃಷ್ಣ ಅವರು ಇದಕ್ಕೆ ತೀವ್ರ ವಿರೋಧವನ್ನು ವ್ಯಕ್ತಪಡಿಸಿದ್ದರು.

ಇದನ್ನೂ ಓದಿ : ಕಾವೇರಿ ಕಿಚ್ಚು ತೀವ್ರಗೊಳ್ಳುತ್ತಿರುವ ನಡುವೆಯೇ ಕೆಆರ್‌ಎಸ್‌ ಅಣೆಕಟ್ಟೆಯಿಂದ ಹೊರ ಹರಿವು ಹೆಚ್ಚಳ!

ಹೆಚ್ಚುವರಿ ಡಿಸಿಎಂ ಸ್ಥಾನ ಸೃಷ್ಟಿಯ ಕುರಿತಾಗಿ ಬಹಿರಂಗವಾಗಿ ಸಿದ್ದರಾಮಯ್ಯ ಬಣದ ಬೇಡಿಕೆಯ ಬಗ್ಗೆ ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಹೈಕಮಾಂಡ್‌ಗೆ ದೂರನ್ನು ನೀಡಿದ್ದರು ಎನ್ನಲಾಗಿದೆ. ಪಕ್ಷದಲ್ಲಿ ಇಂತಹ ಹೇಳಿಕೆಯಿಂದ ಗೊಂದಲ ಸೃಷ್ಟಿಯಾಗುತ್ತಿದೆ. ಈ ನಿಟ್ಟಿನಲ್ಲಿ ಎಚ್ಚರಿಕೆಯನ್ನು ನೀಡಬೇಕು ಎಂದು ಮನವಿ ಮಾಡಿದ್ದರು ಎನ್ನಲಾಗಿದೆ. ಇದರ ಬೆನ್ನಲ್ಲೇ ಹೈಕಮಾಂಡ್ ಎಚ್ಚರಿಕೆಯ ಸೂಚನೆಯನ್ನು ನೀಡಿದೆ.

ಸಿಎಂ, ಡಿಸಿಎಂ ಹುದ್ದೆ ಸೃಷ್ಟಿಯ ಬಗ್ಗೆ ಯಾರೂ ಬಹಿರಂಗ ಹೇಳಿಕೆ ನೀಡದಂತೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ( ಸಂಘಟನೆ) ಕೆ.ಸಿ ವೇಣುಗೋಪಾಲ್ ಎಚ್ಚರಿಕೆ ನೀಡಿದ್ದಾರೆ. ಸಿಎಂ ಹಾಗೂ ಡಿಸಿಎಂ ಹುದ್ದೆ ಸೃಷ್ಟಿ ಪಕ್ಷದ ಆಂತರಿಕ ವಿಚಾರವಾಗಿದೆ. ಈ ಬಗ್ಗೆ ಯಾರೂ ಬಹಿರಂಗ ಹೇಳಿಕೆಯನ್ನು ನೀಡಬಾರದು ಎಂದು ತಾಕೀತು ಮಾಡಿದ್ದಾರೆ. ಈ ರೀತಿಯ ಹೇಳಿಕೆಗಳಿಂದ ಪಕ್ಷಕ್ಕೆ ಹಾನಿ ಆಗುತ್ತದೆ. ಬಿಜೆಪಿ ಹಾಗೂ ಪ್ರಾದೇಶಿಕ ಪಕ್ಷಗಳ ಕಾರ್ಯಸೂಚಿಗೆ ಬಲಿಯಾಗಬಾರದು ಎಂಬ ಎಚ್ಚರಿಕೆಯನ್ನು ನೀಡಿದ್ದಾರೆ. ಹೈಕಮಾಂಡ್‌ ಈ ಸೂಚನೆಯನ್ನು ಸಿದ್ದರಾಮಯ್ಯ ಬಣ ಹೇಗೆ ಪಾಲನೆ ಮಾಡಲಿದೆ ಎಂಬುವುದು ಸಹಜವಾಗಿ ಕುತೂಹಲಕ್ಕೆ ಕಾರಣವಾಗಿದೆ.

Shantha Kumari