ಚೀನಾದಲ್ಲಿ ಇಸ್ರೇಲ್ ರಾಜತಾಂತ್ರಿಕ ಅಧಿಕಾರಿಗೆ ಚೂರಿ ಇರಿತ! – ದೆಹಲಿಯಲ್ಲಿ ಹೈ ಅಲರ್ಟ್.. ಹಲವೆಡೆ ಬಿಗಿ ಭದ್ರತೆ!
ನವದೆಹಲಿ: ಇಸ್ರೇಲ್ ಹಾಗೂ ಹಮಾಸ್ ಉಗ್ರರ ನಡುವಿನ ಕದನ ತಾರಕಕ್ಕೇರಿದೆ. ಸತತ ಏಳನೇ ದಿನವೂ ಯುದ್ಧ ಮುಂದುವರಿದಿದೆ. ಈ ನಡುವೆ ಚೀನಾದ ರಾಜಧಾನಿ ಬೀಜಿಂಗ್ನಲ್ಲಿ ಇಸ್ರೇಲ್ ರಾಯಭಾರ ಕಚೇರಿ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ವರದಿಯಾಗಿದೆ.
ಈ ಕುರಿತು ಪ್ರಕಟಣೆ ಹೊರಡಿಸಿರುವ ಇಸ್ರೇಲ್ ವಿದೇಶಾಂಗ ಇಲಾಖೆ, ದಾಳಿಯಲ್ಲಿ ಓರ್ವ ಅಧಿಕಾರಿ ಚೂರಿ ಇರಿತಕ್ಕೆ ಒಳಗಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಆರೋಗ್ಯ ಸ್ಥಿರವಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಇನ್ನು ಯಾವ ಕಾರಣಕ್ಕೆ ನಮ್ಮ ರಾಯಭಾರ ಕಚೇರಿ ಸಿಬ್ಬಂದಿ ಮೇಲೆ ದಾಳಿ ಮಾಡಲಾಗಿದೆ ಎಂದು ತಿಳಿದು ಬಂದಿಲ್ಲ. ದಾಳಿಯ ಹೊಣೆಯನ್ನು ಈವರೆಗೂ ಯಾರು ಹೊತ್ತಿಲ್ಲ. ಇಸ್ರೇಲ್ ಹಾಗೂ ಹಮಾಸ್ ನಡುವೆ ನಡೆಯುತ್ತಿರುವ ಯುದ್ಧದ ನಡುವೆ ಈ ಘಟನೆ ನಡೆದಿದ್ದು, ಇಸ್ರೇಲಿಗಳು ಮತ್ತು ವಿಶ್ವಾದ್ಯಂತ ಯಹೂದಿಗಳು ಜಾಗರೂಕರಾಗಿರಬೇಕು ಎಂದು ತನ್ನ ಪ್ರಕಟಣೆಯಲ್ಲಿ ಕರೆ ನೀಡಿದೆ.
ಇದನ್ನೂ ಓದಿ: ರಸ್ತೆಯಲ್ಲಿ ಇ – ರಿಕ್ಷಾ ನಿಲ್ಲಿಸಿದ್ದರಿಂದ ಟ್ರಾಫಿಕ್.. – ಗಾಡಿ ತೆಗಿಯಮ್ಮಾ ಅಂದಿದ್ದಕ್ಕೆ ಪೊಲೀಸಪ್ಪನಿಗೇ ಚಪ್ಪಲಿ ಏಟು!
ದೆಹಲಿಯಲ್ಲಿ ಬಿಗಿ ಭದ್ರತೆ
ಇಸ್ರೇಲ್‌ನಲ್ಲಿ ಭದ್ರತಾ ಪಡೆಗಳು ಮತ್ತು ಪ್ಯಾಲೆಸ್ತೀನ್ ಉಗ್ರರ ನಡುವೆ ನಡೆಯುತ್ತಿರುವ ಯುದ್ಧವು ಉಲ್ಬಣಗೊಳ್ಳುತ್ತಿದ್ದಂತೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸಂಭಾವ್ಯ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಭದ್ರತೆ ಹೆಚ್ಚಿಸಲಾಗಿದೆ. ಅದರಲ್ಲೂ ವಿಶೇಷವಾಗಿ ಯಹೂದಿ ಧಾರ್ಮಿಕ ಸಂಸ್ಥೆಗಳು, ಇಸ್ರೇಲ್ ರಾಯಭಾರ ಕಚೇರಿ ಮತ್ತು ಇತರೆ ಧಾರ್ಮಿಕ ಸ್ಥಳಗಳಿಗೆ ಭದ್ರತೆಯನ್ನು ಹೆಚ್ಚಿಸಲಾಗಿದೆ.
ಇಸ್ರೇಲ್‌ನಲ್ಲಿ ಭದ್ರತಾ ಪಡೆಗಳು ಮತ್ತು ಪ್ಯಾಲೆಸ್ತೀನ್ ಉಗ್ರರ ನಡುವಿನ ಯುದ್ಧ ಉಲ್ಬಣಗೊಳ್ಳುತ್ತಿದ್ದಂತೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಶುಕ್ರವಾರದ ಪ್ರಾರ್ಥನೆಗಳ ನಂತರ ಪ್ರತಿಭಟನೆಗಳು ನಡೆಯಬಹುದೆಂದು ಗುಪ್ತಚರ ಸಂಸ್ಥೆಗಳು ಎಚ್ಚರಿಕೆ ನೀಡಿದ್ದು, ಈ ಹಿನ್ನೆಲೆಯಲ್ಲಿ ಭದ್ರತೆ ಹೆಚ್ಚಿಸಲಾಗಿದೆ.
ವಿಶೇಷವಾಗಿ ಯಹೂದಿ ಧಾರ್ಮಿಕ ಸಂಸ್ಥೆಗಳು, ಇಸ್ರೇಲ್ ರಾಯಭಾರ ಕಚೇರಿ ಮತ್ತು ಇತರೆ ಧಾರ್ಮಿಕ ಸ್ಥಳಗಳಿಗೆ ಭದ್ರತೆಯನ್ನು ಹೆಚ್ಚಿಸಲಾಗಿದೆ. ಪೊಲೀಸರು ಪ್ರಮುಖ ರಸ್ತೆಗಳಲ್ಲಿ ಬ್ಯಾರಿಕೇಡ್ಗಳನ್ನು ಅಳವಡಿಸಿ ವಾಹನ ಗಳ ತಪಾಸಣೆಯನ್ನು ನಡೆಸುತ್ತಿದ್ದಾರೆ. “ಪ್ಯಾಲೇಸ್ತೇನ್ ಪರ ಮತ್ತು ಇಸ್ರೇಲ್ ಪರ ನಡೆಯಬಹುದಾದ ಸಂಭವನೀಯ ಪ್ರತಿಭಟನೆಗಳನ್ನು ಹತ್ತಿಕ್ಕಲು ಕ್ರಮ ತೆಗೆದುಕೊಳ್ಳಲಾಗಿದೆ. ಶುಕ್ರವಾರದ ಪ್ರಾರ್ಥನೆ ವೇಳೆ ಪೊಲೀಸ್ ಸಿಬ್ಬಂದಿ ಹೆಚ್ಚಿನ ಸಂಖ್ಯೆಯಲ್ಲಿ ರಸ್ತೆಗಳಲ್ಲಿರುತ್ತಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇನ್ನು ಇಸ್ರೇಲಿ ನಾಗರಿಕರ ಸುರಕ್ಷತೆಗಾಗಿ ಭದ್ರತಾ ಏಜೆನ್ಸಿಗಳು, ಕೆಲವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಎಚ್ಚರಿಸಿವೆ. ಮಹಾರಾಷ್ಟ್ರ, ಹಿಮಾಚಲ ಪ್ರದೇಶ ಮತ್ತು ಗೋವಾ ರಾಜ್ಯಗಳ ಅಧಿಕಾರಿಗಳು ಇಸ್ರೇಲ್ ರಾಜತಾಂತ್ರಿಕರು, ಸಿಬ್ಬಂದಿ ಮತ್ತು ಪ್ರವಾಸಿಗರಿಗೆ ಭದ್ರತೆ ಒದಗಿಸುವಂತೆ ಕೇಂದ್ರ ಸರ್ಕಾರವನ್ನು ಕೋರಿದ್ದಾರೆ. ಭಾರತವಲ್ಲದೆ, ಅಮೆರಿಕಾ, ಯುಕೆ, ಫ್ರಾನ್ಸ್, ಜರ್ಮನಿ ಮತ್ತು ಇತರ ದೇಶಗಳಲ್ಲಿ ಯಹೂದಿ ಮತ್ತು ಪ್ಯಾಲೆಸ್ತೀನ್ ಪರ ಜನರಿಗೆ ಭದ್ರತೆಯನ್ನು ಹೆಚ್ಚಿಸಲಾಗಿದೆ.