ಚುನಾವಣಾ ಅಧಿಕಾರಿಗಳಿಗೆ ಪೊರಕೆ ಟೆನ್ಷನ್ – ಮತಗಟ್ಟೆಗಳಲ್ಲಿ ಪೊರಕೆ ಬ್ಯಾನ್

ಚುನಾವಣಾ ಅಧಿಕಾರಿಗಳಿಗೆ ಪೊರಕೆ ಟೆನ್ಷನ್ – ಮತಗಟ್ಟೆಗಳಲ್ಲಿ ಪೊರಕೆ ಬ್ಯಾನ್

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ ಕೇವಲ 7 ದಿನಗಳು ಮಾತ್ರ ಬಾಕಿ ಉಳಿದಿವೆ. ಹೀಗಾಗಿ ಚುನಾವಣಾ ಅಧಿಕಾರಿಗಳು ಸಕಲ ಸಿದ್ಧತೆಗಳನ್ನು ಮಾಡಿ ಮಾಡಿಕೊಂಡಿದೆ. ಆದ್ರೆ ಇದೀಗ ಚುನಾವಣಾ ಆಯೋಗಕ್ಕೆ ಪೊರಕೆ ವಿಚಾರಕ್ಕೆ ತಲೆನೋವು ಶುರುವಾಗಿದೆ.

ಚುನಾವಣೆ ವೇಳೆ ಮತದಾರರಿಗೆ ಆಮಿಷವೊಡ್ಡಬಾರದು, ಅಕ್ರಮ ನಡೆಯಬಾರದು ಅಂತಾ  ಕಟ್ಟೆಚ್ಚರವಹಿಸಿದೆ. ಆದ್ರೆ ಈಗ ಸ್ವಚ್ಛತೆಗೆ ಬೇಕೆ ಬೇಕಾಗಿರುವ ಪೊರೆಕೆಯನ್ನು ಮರೆಮಾಚುವ ಅನಿವಾರ್ಯತೆ ಅಧಿಕಾರಿಗಳಿಗೆ ಬಂದೊದಗಿದ್ದು, ಮತದಾನದ 48 ಗಂಟೆ ಮೊದಲು ಮತಗಟ್ಟೆ ಸುತ್ತಮುತ್ತ ಹಾಗೂ ಮತಗಟ್ಟೆಯಲ್ಲಿ ಪೊರಕೆ ಬ್ಯಾನ್ ಮಾಡಬೇಕು ಅಂತಾ  ಚುನಾವಣಾ ಅಧಿಕಾರಿಗಳು ಸೂಚಿಸಿದ್ದಾರೆ.

ಇದನ್ನೂ ಓದಿ: ಇನ್ಮುಂದೆ ಬೆಳಗ್ಗೆ 7.30ಕ್ಕೆ ಸರ್ಕಾರಿ ಕಚೇರಿಗಳು ಓಪನ್! – ಯಾಕೆ ಇಂತಹ ಬದಲಾವಣೆ?  

ಈ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ರಾಜ್ಯದ ಎಲ್ಲಾ ಕಡೆ ಸ್ಪರ್ಧೆ ಮಾಡುತ್ತಿದೆ. ಈ ಪಕ್ಷ ಪೊರಕೆ ಚಿಹ್ನೆಯಿಂದ ಗುರುತಿಸಿಕೊಂಡಿದೆ. ಹೀಗಾಗಿ ಮತದಾನದ ದಿನ ಈ ಪಕ್ಷದ ಚಿಹ್ನೆಯಾದ ಪೊರಕೆಯಾಗಲಿ ಅಥವಾ ಅದರ ಚಿತ್ರವನ್ನ ಮರೆಮಾಚಬೇಕಾದ ಅನಿವಾರ್ಯತೆ ಆಯೋಗಕ್ಕೆ ಎದುರಾಗಿದೆ. ಹೀಗಾಗಿ ಮತದಾನದ 48 ಗಂಟೆ ಮೊದಲೇ ಮತಗಟ್ಟೆ ಸುತ್ತಮುತ್ತ ಹಾಗೂ ಮತಗಟ್ಟೆಯಲ್ಲಿ ಪೊರಕೆ ಇಡಬಾರದು ಅಂತಾ ಜಿಲ್ಲಾ ಚುನಾವಣಾಧಿಕಾರಿ ತುಷಾರ್ ಗಿರಿನಾಥ್ ಸೂಚನೆ ನೀಡಿದ್ದು, ಮತಗಟ್ಟೆ ಸುತ್ತಮುತ್ತ ಪೊರಕೆ ಬಳಸಬಾರದು ಅಂತಾ ಹೇಳಿದ್ದಾರೆ.

ಚುನಾವಣಾಧಿಕಾರಿ ತುಷಾರ್ ಗಿರಿನಾಥ್ ಅವರ ಸೂಚನೆ ಬೆನ್ನಲ್ಲೇ ಈಗ ಚುನಾವಣಾ ಅಧಿಕಾರಿಗಳಿಗೆ ಪೊರಕೆ ಮಾರೆಮಾಚುವುದು ಹೇಗೆ ಅಂತಾ ತಲೆಕೆಡಿಸಿಕೊಂಡಿದ್ದಾರೆ. ಮತದಾನ ನಡೆಯುವ ದಿನ ಮತಗಟ್ಟೆ ಹಾಗೂ ಅದರ ಸುತ್ತಮುತ್ತ ಎಲ್ಲೂ ಪೊರಕೆ ಅಥವಾ ಪೊರಕೆಯ ಚಿತ್ರ ಕಾಣದಂತೆ ನೋಡಿಕೊಳ್ಳಬೇಕಿದೆ. ಒಂದು ವೇಳೆ ಮತಗಟ್ಟೆಯಲ್ಲಿ ಎಲ್ಲಾದರೂ ಪೊರಕೆ ಕಾಣಿಸಿಕೊಂಡರೆ ನೀತಿ ಸಂಹಿತೆ ಉಲ್ಲಂಘನೆಯಾಗದಂತಾಗುತ್ತದೆ.

ಚುನಾವಣೆಗೆ ಸ್ಪರ್ಧಿಸುತ್ತಿರುವ ಪಕ್ಷಗಳ ಚಿಹ್ನೆಯಾಗಲಿ ಅಥವಾ ಪ್ರತಿನಿಧಿಸುವ ವಸ್ತು ಮತ್ತು ಚಿತ್ರಗಳನ್ನು ಮತದಾರರಿಂದ ಮರೆಮಾಚಬೇಕು ಅನ್ನೋ ನಿಯಮ ಇದೆ. ಹೀಗಾಗಿ ಶಿವಮೊಗ್ಗ ಏರ್​ಪೋರ್ಟ್ ಕೂಡ ಕಮಲಾಕಾರದಲ್ಲಿದ್ದು ಅದು ಕೂಡ ಮತದಾರರ ಮೇಲೆ ಪ್ರಭಾವ ಬೀರಬಹುದು ಹಾಗಾಗಿ ಏರ್​ಪೋರ್ಟ್ ಅನ್ನು ಕಾಣದಂತೆ ಪರದೆ ಮುಚ್ಚಬೇಕು ಎಂಬ ಕೂಗು ಕೆಲ ದಿನಗಳ ಹಿಂದೆ ಜೋರಾಗಿತ್ತು. ಇದಕ್ಕೆ ಕೆಲವರು ಕಾಂಗ್ರೆಸ್ ಚಿಹ್ನೆ ಕೈ ಎಂದು ಕೈ ಕತ್ತರಿಸಲಾಗುವುದೇ? ಎಂದು ಟೀಕೆ ಮಾಡಿದ್ದರು.

suddiyaana