ಕಣ್ಣಾಮುಚ್ಚಾಲೆ ಆಡುವಾಗ ಕಂಟೈನರ್ ಹತ್ತಿದ – ಬಾಂಗ್ಲಾದ ಬಾಲಕ ಮಲೇಷಿಯಾದಲ್ಲಿ ಪತ್ತೆ!  
ಆರು ದಿನಗಳ ಕಾಲ ಊಟ, ನೀರು ಇಲ್ಲದೆ ಬಾಲಕ ಬದುಕಿದ್ದೇ ಹೆಚ್ಚು!

ಕಣ್ಣಾಮುಚ್ಚಾಲೆ ಆಡುವಾಗ ಕಂಟೈನರ್ ಹತ್ತಿದ – ಬಾಂಗ್ಲಾದ ಬಾಲಕ ಮಲೇಷಿಯಾದಲ್ಲಿ ಪತ್ತೆ!  ಆರು ದಿನಗಳ ಕಾಲ ಊಟ, ನೀರು ಇಲ್ಲದೆ ಬಾಲಕ ಬದುಕಿದ್ದೇ ಹೆಚ್ಚು!

ಮೊದಲೆಲ್ಲಾ ಮಕ್ಕಳು ಅಂದ್ರೆ ಯಾವಾಗ್ಲೂ ಆಟ ಆಟ ಅನ್ನುತ್ತಿದ್ರು. ಆದ್ರೀಗ ಮೊಬೈಲ್​ಗಳಲ್ಲೇ ಮುಳುಗಿ ಹೋಗಿರುತ್ತಾರೆ. ಆದ್ರೆ ಹಳ್ಳಿಗಳ ಕಡೆ ಈಗಲೂ ಒಂದಷ್ಟು ಮಕ್ಕಳು ಒಟ್ಟಿಗೆ ಸೇರಿ ಆಡೋದುಂಟು. ಹೀಗೆ ಪುಟಾಣಿಗಳೆಲ್ಲಾ ಸೇರಿ ಕಣ್ಣಾಮುಚ್ಚಾಲೆ (Hide And Seek) ಆಡುವಾಗ ದೊಡ್ಡ ಎಡವಟ್ಟೇ ಆಗೋಗಿದೆ.

ಕಣ್ಣಾಮುಚ್ಚಾಲೆ ಆಟದಲ್ಲಿ ಒಬ್ಬ ಕಣ್ಣು ಮುಚ್ಚಿಕೊಂಡರೆ ಉಳಿದವರೆಲ್ಲಾ ಅಡಗಿಕೊಳ್ಳುತ್ತಾರೆ. ಬಳಿಕ ಕಣ್ಣು ಮುಚ್ಚಿಕೊಂಡಿದ್ದ ಹುಡುಗ ಅಡಗಿಕೊಂಡವರನ್ನ ಹುಡುಕಲು ಆರಂಭಿಸುತ್ತಾನೆ. ಹೀಗೆ ಹುಡುಕಾಡುವಾಗ ಯಾರು ಮೊದಲು ಕಾಣಿಸಿಕೊಳ್ಳುತ್ತಾರೋ ಅವರು ಔಟ್ ಎಂದು ಲೆಕ್ಕ. ಆದ್ರೆ ಇಲ್ಲೊಬ್ಬ ಕಣ್ಣಾಮುಚ್ಚಾಲೆ ಆಡುತ್ತಾ 6 ದಿನಗಳ ಕಾಲ ಪ್ರಯಾಣಿಸಿ ಬೇರೆ ದೇಶಕ್ಕೇ ಹೋಗಿದ್ದಾನೆ. ಯಾಕಂದ್ರೆ ಅವನು ಅಡಗಿಕುಳಿತುಕೊಳ್ಳಲು ಆಯ್ಕೆ ಮಾಡಿಕೊಂಡ ಜಾಗವೇ ಅಂಥಾದ್ದು.

ಇದನ್ನೂ ಓದಿ : ‘Google’ಗೆ ಬ್ರೇಕ್ ಹಾಕುತ್ತಾ ‘ChatGPT’? – ವಿದ್ಯಾರ್ಥಿಗಳಿಗೆ ವರವೋ.. ಶಾಪವೋ..!?

ಅಧಿಕಾರಿಗಳ ಪ್ರಕಾರ ಬಾಲಕನನ್ನು ಫಹೀಮ್ ಎಂದು ಗುರುತಿಸಲಾಗಿದ್ದು, ಅವನು ಕಣ್ಣಾಮುಚ್ಚಾಲೆ ಆಡುವಾಗ ಕಂಟೈನರ್‌ನಲ್ಲಿ ಮಲಗಿದ್ದಾಗಿ ಹೇಳಿದ್ದಾನೆ. ಆದರೆ, ಎದ್ದು ಹೊರಗೆ ಹೋಗಲು ಯತ್ನಿಸಿದಾಗ ಕಂಟೈನರ್ ಲಾಕ್ ಆಗಿತ್ತು. ಅವನು ಕಿರುಚಿದ್ದಾನೆ, ಅತ್ತಿದ್ದಾನೆ, ಆದರೆ ತನ್ನ ಧ್ವನಿ ಯಾರಿಗೂ ಕೇಳಿಸಲಿಲ್ಲ ಎಂದು ಬಾಲಕ ಹೇಳಿದ್ದಾನೆ.  ಕಂಟೈನರ್​ಲ್ಲಿ ಮಗು 6 ದಿನಗಳ ಕಾಲ ಏನನ್ನೂ ತಿನ್ನದೆ, ಕುಡಿಯದೆ ಜೀವಂತವಾಗಿತ್ತು. ಆ ಮಗು ಇಷ್ಟು ದಿನ ತಿನ್ನದೇ ಬದುಕಿದ್ದು ಅವನ ಅದೃಷ್ಟ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಲೇಷಿಯಾದ ಅಧಿಕಾರಿಗಳು ಮಗುವನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ.

ಕಂಟೈನರ್​ನಲ್ಲಿ ಬಾಲಕ ಪತ್ತೆಯಾದಾಗ ಇದು ಮಾನವ ಕಳ್ಳಸಾಗಣೆ ಎಂದು ಊಹಿಸಲಾಗಿತ್ತು. ಆದ್ರೆ ತನಿಖೆ ವೇಳೆ ಇದು ಮಾನವ ಕಳ್ಳಸಾಗಾಣೆ ಅಲ್ಲ. ಮಗು ಹೇಳಿದ್ದು ನಿಜ, ಫಹೀಂನನ್ನು ಆತನ ಮನೆಗೆ ಕಳುಹಿಸಲು ನಾವು ಬಾಂಗ್ಲಾದೇಶದ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದೇವೆ ಎಂದು ಮಲೇಷಿಯಾ ಅಧಿಕಾರಿಗಳು ಹೇಳಿದ್ದಾರೆ.

ಹೌದು, ಈ ಮಗು ಕಣ್ಣಾಮುಚ್ಚಾಲೆ ಆಡುತ್ತಲೇ ಒಂದು ದೇಶದಿಂದ ಇನ್ನೊಂದು ದೇಶಕ್ಕೆ ತಲುಪಿದೆ. ಅಚ್ಚರಿಯ ಸಂಗತಿ ಎಂದರೆ ಅವರ ಮನೆಯವರಿಗೂ ಈ ವಿಚಾರ ಗೊತ್ತಿರಲಿಲ್ಲ. ಈ ಮಗು ಕಣ್ಣಾಮುಚ್ಚಾಲೆ ಆಡುತ್ತಾ ಸಾಗರ ದಾಟಿದೆ. ವಾಸ್ತವವಾಗಿ, ಜನವರಿ 11 ರಂದು, ಬಾಂಗ್ಲಾದೇಶದಲ್ಲಿ ಮಗುವೊಂದು ಇದ್ದಕ್ಕಿದ್ದಂತೆ ಕಣ್ಮರೆಯಾಗಿತ್ತು. ಮೊದಲು ಆತ ತನ್ನ ಸ್ನೇಹಿತರೊಂದಿಗೆ ಕಣ್ಣಾಮುಚ್ಚಾಲೆ ಆಡುತ್ತಿದ್ದ. ಎಲ್ಲಾ ಕಡೆ ಹುಡುಕಾಡಿದರೂ ಮಗು ಪತ್ತೆಯಾಗಿಲ್ಲ. ಈ ಘಟನೆ ನಡೆದು 6 ದಿನಗಳ ನಂತರ ಮಲೇಷ್ಯಾದಲ್ಲಿ ಆ ಮಗು ಪತ್ತೆಯಾಗಿದೆ. ಇದು ಎಲ್ಲರನ್ನೂ ಅಚ್ಚರಿಗೀಡು ಮಾಡಿದೆ. ಸದ್ಯ ಚಿಕಿತ್ಸೆ ಬಳಿಕ ಬಾಲಕನನ್ನ ಮರಳಿ ಬಾಂಗ್ಲಾಗೆ ಕಳಿಸಿಕೊಡಲಾಗಿದೆ.

suddiyaana