ಮೋದಕ ಪ್ರಿಯ ಗಣೇಶ! – ಗಣಪತಿಗೆ ಮೋದಕ ನೈವೇದ್ಯವನ್ನೇ ಏಕೆ ಮಾಡಬೇಕು…?

ಮೋದಕ ಪ್ರಿಯ ಗಣೇಶ! – ಗಣಪತಿಗೆ ಮೋದಕ ನೈವೇದ್ಯವನ್ನೇ ಏಕೆ ಮಾಡಬೇಕು…?

ಗಣೇಶ ಚತುರ್ಥಿ ಹಬ್ಬ ಬಂದಾಗ ಗಜಾನನಿಗೆ ಇಷ್ಟವಾದ ಖಾದ್ಯಗಳನ್ನು ತಯಾರಿಸಿ ನೈವೇದ್ಯ ರೂಪದಲ್ಲಿ ಇಡಲಾಗುತ್ತದೆ. ಮೋದಕ ಸಿದ್ಧಿವಿನಾಯಕನಿಗೆ ಬಹಳ ಪ್ರಿಯವಾದ ಖಾದ್ಯ. ಗಣೇಶ ಹಬ್ಬ ಮೋದಕವಿಲ್ಲದೆ ಸಂಪೂರ್ಣವಾಗಲು ಸಾಧ್ಯವೇ ಇಲ್ಲ.ಗಣಪತಿಗೆ ಯಾಕೆ ಮೋದಕ ಇಷ್ಟ? ಪುರಾಣದ ಕತೆಗಳಲ್ಲಿ ಏನಿದೆ ಅನ್ನೋ ಮಾಹಿತಿ ಈ ಲೇಖನದಲ್ಲಿದೆ.

ಗಣೇಶನಿಗೆ ಎಳ್ಳುಂಡೆ, ಮೋದಕ, ಕಾಯಿಕಡುಬುಗಳನ್ನು ಕಡ್ಡಾಯವಾಗಿ ಮಾಡಿ ಸಮರ್ಪಣೆ ಮಾಡಲಾಗುತ್ತದೆ. ಗಣೇಶನ ಜನ್ಮದಿನದಂದು ಪಾರ್ವತಿ ಮಗನಿಗೆ ಇವೇ ಭಕ್ಷ್ಯಗಳನ್ನು ಮಾಡಿ ಉಣಬಡಿಸುತ್ತಿದ್ದಳು ಎನ್ನುತ್ತದೆ ಇನ್ನೊಂದು ಪೌರಾಣಿಕ ಮೂಲ. ಅದಕ್ಕಾಗಿ ಗಣೇಶ ಚತುರ್ಥಿಯಂದು ಇವನ್ನೇ ಮನೆಮನೆಗಳಲ್ಲಿ ಮಾಡಿ ನೈವೇದ್ಯಕ್ಕೆ ಇಡುವುದು ಪದ್ಧತಿ. ಚೌತಿಯ ದಿನ ಗಣೇಶನಿಗೆ ಪ್ರಿಯವಾದ ಮೋದಕ ತಯಾರಿಸಿ ನೈವೇದ್ಯ ಮಾಡದಿದ್ದರೆ ಹಬ್ಬವೇ ಅಪೂರ್ಣ. ಗಣಪತಿಗೆ ಯಾಕೆ ಮೋದಕ ಪ್ರಿಯವಾದದ್ದು ಎನ್ನುವುದನ್ನು ಪದ್ಮ ಪುರಾಣದಲ್ಲಿ ವರ್ಣಿಸಲಾಗಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಗೌರಿ ಗಣೇಶ ಹಬ್ಬದ ಸಂಭ್ರಮ – ನಗರ ಪೊಲೀಸ್ ಇಲಾಖೆಯಿಂದ ಗೈಡ್ ಲೈನ್ಸ್ ಬಿಡುಗಡೆ

ಪುರಾಣದ ಕತೆಗಳ ಪ್ರಕಾರ, ಒಮ್ಮೆ ದೇವಾನುದೇವತೆಗಳು ಕೈಲಾಸಕ್ಕೆ ಬರ್ತಾರೆ. ಆಗ ವಿಶಿಷ್ಟ ಪರಿಮಳ ಮತ್ತು ರುಚಿ ಇರುವ ಮೋದಕವನ್ನು ಪಾರ್ವತಿ‌ದೇವಿಗೆ ಕೊಡ್ತಾರೆ. ಇದನ್ನು ಸೇವಿಸಿದವರು ಬುದ್ಧಿಶಾಲಿಯೂ, ಶಕ್ತಿವಂತರೂ ಆಗುತ್ತಾರೆ ಎಂಬುದು ಪಾರ್ವತಿಯ ನಂಬಿಕೆ. ತನ್ನ ಕೈಯಲ್ಲಿದ್ದ ಒಂದೇ ಒಂದು ಮೋದಕವನ್ನು ಗಣೇಶ ಮತ್ತು ಕಾರ್ತಿಕ ಇಬ್ಬರಲ್ಲಿ ಯಾರಿಗೆ ಕೊಡೋದು ಅಂತಾ ಗೊಂದಲವಾಗುತ್ತೆ. ಪಾರ್ವತಿ, ಮಕ್ಕಳಿಬ್ಬರನ್ನು ಕರೆದು `ನಿಮ್ಮಿಬ್ಬರಲ್ಲಿ ಯಾರಲ್ಲಿ ನಿಜವಾದ ಶ್ರದ್ಧೆ, ಭಕ್ತಿ ಇದೆಯೆಂದು ಸಾಧಿಸಿ ತೋರಿಸುವಿರೋ ಅವರಿಗೆ ಮೋದಕ ಸಿಗುತ್ತದೆ ಅಂತಾ ಹೇಳುತ್ತಾಳೆ. ತಕ್ಷಣ ಕಾರ್ತಿಕ ಶ್ರದ್ಧೆ ಮತ್ತು ಭಕ್ತಿಯ ಹುಡುಕಾಟಕ್ಕಾಗಿ ತನ್ನ ವಾಹನ ನವಿಲನ್ನು ಏರಿ ಹೊರಡುತ್ತಾನೆ. ಆದ್ರೆ ಗಣೇಶ ಮಾತ್ರ ಶಿವ-ಪಾರ್ವತಿಯರ ಹತ್ತಿರವೇ  ಇದ್ದು, ಪ್ರೀತಿಯಿಂದ ಅವರ ಸೇವೆ ಮಾಡುತ್ತಿರುತ್ತಾನೆ. ಆತನ ಭಕ್ತಿ, ಪ್ರೀತಿಗೆ ಮೆಚ್ಚಿ ಪಾರ್ವತಿ ಮೋದಕವನ್ನು ಗಣೇಶನಿಗೆ ನೀಡುತ್ತಾಳೆ. ಅಂದಿನಿಂದ ಗಣೇಶನನ್ನು ಮೋದಕ ಪ್ರೀಯ ಎಂದು ಕರೆಯುತ್ತಾರೆ.

Shwetha M