‌ಲಕ್ಷ್ಮೀ ಹೆಬ್ಬಾಳ್ಕರ್‌ ತವರಲ್ಲೇ ಗೃಹಲಕ್ಷ್ಮೀ ಯೋಜನೆಗೆ ಚಾಲನೆ!

‌ಲಕ್ಷ್ಮೀ ಹೆಬ್ಬಾಳ್ಕರ್‌ ತವರಲ್ಲೇ ಗೃಹಲಕ್ಷ್ಮೀ ಯೋಜನೆಗೆ ಚಾಲನೆ!

ಬೆಂಗಳೂರು: ವಿಧಾನಸಭಾ ಚುನಾವಣೆ ವೇಳೆ ರಾಜ್ಯ ಕಾಂಗ್ರೆಸ್‌ ಗೃಹ ಲಕ್ಷ್ಮೀ ಯೋಜನೆಯನ್ನು ಘೋಷಿಸಿತ್ತು. ಇದೀಗ ಈ ಯೋಜನೆಯನ್ನು ಆಗಸ್ಟ್‌ 17 ಅಥವಾ 18 ರಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತವರು ಜಿಲ್ಲೆ ಬೆಳಗಾವಿಯಲ್ಲಿ ಅದ್ಧೂರಿಯಾಗಿ ಚಾಲನೆ ನೀಡುವ ಕುರಿತು ಕಾಂಗ್ರೆಸ್‌ ಪಾಳಯದಲ್ಲಿ ಚರ್ಚೆಗಳು ನಡೆದಿವೆ.

ಇದನ್ನೂ ಓದಿ: ಜೂನ್‌ 11 ರಂದು ಶಕ್ತಿ ಯೋಜನೆಗೆ ಚಾಲನೆ – ಟಿಕೆಟ್‌.. ಟಿಕೆಟ್.. ಎಂದು ಕಂಡಕ್ಟರ್‌ ಆಗಲಿದ್ದಾರೆ ಸಿಎಂ ಸಿದ್ದರಾಮಯ್ಯ!

ಇನ್ನು ಲಕ್ಷ್ಮೀ ಹೆಬ್ಬಾಳ್ಕರ್ ತವರು ಜಿಲ್ಲೆಯಲ್ಲೇ ಯಾಕೆ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗುವುದು ಎಂಬುವುದಕ್ಕೆ ಕೆಲವು ಕಾರಣಗಳನ್ನು ನೀಡಲಾಗುತ್ತಿದೆ. ಬೆಳಗಾವಿಯಿಂದ ಈ ಯೋಜನೆಗೆ ಚಾಲನೆ ನೀಡಿದರೆ ಉತ್ತರ ಕರ್ನಾಟಕ ಭಾಗದ ಹಲವು ಜಿಲ್ಲೆಗಳಿಗೆ ಸಂದೇಶ ರವಾನೆಯಾಗಲಿದೆ. ಈ ಮೂಲಕ ಮುಂದಿನ ಲೋಕಸಭೆ ಚುನಾವಣೆ ದೃಷ್ಟಿಯಿಂದಲೂ ಹೊಸ ಸಂದೇಶ ನೀಡಿದಂತಾಗುತ್ತದೆ. ಬೆಂಗಳೂರು ಬಿಟ್ಟರೆ ಅತಿ ಹೆಚ್ಚಿನ ಸೀಟುಗಳನ್ನು ಗೆದ್ದಿರುವ ಜಿಲ್ಲೆ ಬೆಳಗಾವಿ. ಹೀಗಾಗಿ ಬೆಳಗಾವಿಯಿಂದ ಗೃಹ ಲಕ್ಷ್ಮಿ ಲಾಂಚ್ ಮಾಡಿದರೆ ಕನಿಷ್ಟ 8ರಿಂದ 10 ಜಿಲ್ಲೆಗಳ ಸಂಘಟನೆಗೆ ಅನುಕೂಲವಾಗಲಿದೆ ಎನ್ನುವ ಲೆಕ್ಕಾಚಾರ ಕಾಂಗ್ರೆಸ್​ ನಾಯಕರದ್ದಾಗಿದೆ ಎನ್ನಲಾಗುತ್ತಿದೆ.

ಗೃಹ ಲಕ್ಷ್ಮಿ ಯೋಜನೆಯಲ್ಲಿ, ಜೂನ್ 15 ರಿಂದ ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದು. ಪ್ರತ್ಯೇಕ ಕೌಂಟರ್‌ಗಳನ್ನು ಸ್ಥಾಪಿಸಲಾಗಿರುವ ಸ್ಥಳೀಯ ಕಂದಾಯ ಕಚೇರಿಗಳಲ್ಲಿ (ನಾಡಕಚೇರಿಗಳು) ಅರ್ಜಿಗಳನ್ನು ಸಲ್ಲಿಸಬಹುದು. ಅರ್ಜಿದಾರರು ಪಡಿತರ ಚೀಟಿ, ಆಧಾರ್ ಕಾರ್ಡ್ ಮತ್ತು ಆಧಾರ್‌ಗೆ ಲಿಂಕ್ ಮಾಡಿದ ಬ್ಯಾಂಕ್ ಖಾತೆಗಳಂತಹ ದಾಖಲೆಗಳನ್ನು ಒದಗಿಸಬೇಕು. ಫಲಾನುಭವಿಗಳು ಡಿಬಿಟಿ ಮೂಲಕ ಹಣ ಪಡೆಯುತ್ತಾರೆ. ರಾಜ್ಯದಲ್ಲಿ ಶೇಕಡಾ 85ರಷ್ಟು ಕುಟುಂಬಗಳಿಗೆ ಈ ಯೋಜನೆ ತಲುಪಲಿದೆ ಎಂದು ಅಂದಾಜಿಸಲಾಗಿದೆ, ಜಿಎಸ್‌ಟಿ ಮತ್ತು ಆದಾಯ ತೆರಿಗೆ ಸಲ್ಲಿಸದಿರುವ ಎಪಿಎಲ್ ಕಾರ್ಡ್‌ದಾರರಿಗೂ ಈ ಸೌಲಭ್ಯ ಸಿಗಲಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

suddiyaana