ಬಾಡಿಗೆದಾರರೇ ಬೇಡ ಆತಂಕ – ಈ ದಾಖಲೆಗಳಿದ್ರೆ ಕಟ್ ಆಗಲ್ಲ ಗೃಹಜ್ಯೋತಿ

ಸಾಕಷ್ಟು ಜನರಿಗೆ ಗೃಹಜ್ಯೋತಿ ಕಟ್ ಆಗುತ್ತೆ ಅನ್ನೋ ಆತಂಕ ಮನೆ ಮಾಡಿದೆ. ನಮ್ಗೆ ಫ್ರೀ ಕರೆಂಟ್ ಕಟ್ ಆಗುತ್ತ ಅನ್ನೋ ಭಯ ಬಾಡಿಗೆದಾರರನ್ನ ಕಾಡುತ್ತಿದೆ. ಆದ್ರೆ ಯಾವುದೇ ಭಯ ಬೇಡ ಅಂತ ಬೆಸ್ಕಾಂ ಹೇಳಿದೆ.
ಅಂದಹಾಗೇ 2023ರ ಜುಲೈ ತಿಂಗಳಲ್ಲಿ ಜಾರಿಗೆ ಬಂದಿರುವ ಗೃಹ ಜ್ಯೋತಿ ಯೋಜನೆಯ ಪುನರ್ ಪರಿಶೀಲನಾ ಕಾರ್ಯ ನಡೆಯುತ್ತಿದ್ದು, ಈ ಬಗ್ಗೆ ಸಾರ್ವಜನಿಕರಿಗೆ ಬೆಸ್ಕಾಂ ಮಾಹಿತಿ ನೀಡಿದೆ. ಅದರಲ್ಲೂ ಮುಖ್ಯವಾಗಿ ಬಾಡಿಗೆದಾರರ ಗೊಂದಲಗಳಿಗೆ ಸ್ಪಷ್ಟನೆ ನೀಡಿದೆ. ಎಸ್ಕಾಂಗಳ ಮೀಟರ್ ರೀಡರ್ ಗಳು ಹಾಗೂ ಎಸ್ಕಾಂ ಸಿಬ್ಬಂದಿ ಗ್ರಾಹಕರ ಮನೆಗಳಿಗೆ ಭೇಟಿ ನೀಡಿ, ಫಲಾನುಭವಿಗಳ ದಾಖಲೆ ಪರಿಶೀಲನೆ ನಡೆಸಿ ಅವರ ಮಾಹಿತಿ ಸಂಗ್ರಹಿಸಿ, ಘೋಷಣಾ ಪತ್ರ ಮೂಲಕ ಸಿಬ್ಬಂದಿಯೇ ಅರ್ಜಿ ಭರ್ತಿ ಮಾಡುವ ಪ್ರಕ್ರಿಯೆನ್ನು ಪೂರ್ಣಗೊಳಿಸಲಿದ್ದಾರೆ. ಹೀಗಾಗಿ ಬೆಸ್ಕಾಂ ಸಿಬ್ಬಂದಿ ಮನೆ-ಮನೆ ಭೇಟಿ ಸಂದರ್ಭದಲ್ಲಿ ಈ ಕೆಳಗಿನ ದಾಖಲೆಗಳನ್ನು ಸಿದ್ದವಿಟ್ಟುಕೊಂಡು ಸಿಬ್ಬಂದಿಗೆ ತೋರಿಸಲು ಬೆಸ್ಕಾಂ ವಿನಂತಿಸಿದೆ.
ಬೆಸ್ಕಾಂ ಮೀಟರ್ ರೀಡರ್ ಹಾಗೂ ಸಿಬ್ಬಂದಿ ಫಲಾನುಭವಿಗಳ ಮನೆ ಮನೆ ಸಮೀಕ್ಷೆ ಕಾರ್ಯ ನಡೆಸುವ ವೇಳೆ ಹಳೆ ಬಾಡಿಗೆದಾರರ ಆಧಾರ್ ವಿವರ ತೆಗೆದು ಹಾಕಿ ಈಗಿರುವ ಬಾಡಿಗೆದಾರರ ಆಧಾರ್ ವಿವರಗಳನ್ನು ಅಪ್ಡೇಟ್ ಮಾಡಿಕೊಳ್ಳಲಾಗುವುದು, ಹಾಗಾಗಿ ಯೋಜನೆ ಸ್ಥಗಿತಗೊಳ್ಳಲಿದೆ ಎಂಬ ಆತಂಕ ಬೇಡ. ಈ ಹಿಂದೆ ಇದ್ದ ಬಾಡಿಗೆದಾರರ ಆಧಾರ್ ಮಾಹಿತಿಯಿಂದಾಗಿ ತಮಗೆ ಯೋಜನೆ ಸ್ಥಗಿತಗೊಳ್ಳಲಿದೆಯೇ ಎಂಬ ಆತಂಕ ಈಗಿರುವ ಬಾಡಿಗೆದಾರರಿಗೆ ಬಂದಿರಿರುವ ಹಿನ್ನೆಲೆಯಲ್ಲಿ ಬೆಸ್ಕಾಂ ಈ ಸ್ಪಷ್ಟನೆ ನೀಡಿದೆ.
ಆಧಾರ್ ಕಾರ್ಡ್, ಫಲಾನುಭವಿಯ ಪಾಸ್ ಪೋರ್ಟ್ ಅಳತೆಯ ಭಾವಚಿತ್ರ, ಮತದಾರರ ಗುರುತಿನ ಚೀಟಿ , ಪ್ಯಾನ್ ಕಾರ್ಡ್, ಬಾಡಿಗೆ ಒಪ್ಪಂದದ ಪತ್ರಗಳು (ಅನ್ವಯಿಸುವಲ್ಲಿ ಮಾತ್ರ), ರೇಷನ್ ಕಾರ್ಡ್ ತೋರಿಸಲು ಕೋರಲಾಗಿದೆ. ಈ ಪ್ರಕ್ರಿಯೆಗೆ ಮೀಟರ್ ರೀಡರ್ ಮೂಲಕ ಸ್ಥಳದಲ್ಲೇ ಪರಿಶೀಲನೆ ಮಾಡುವುದು ಏಕೈಕ ಮಾರ್ಗವಾಗಿದ್ದು, ಗ್ರಾಹಕರು ಮತ್ತು ಫಲಾನುಭವಿಗಳು ಮೀಟರ್ ರೀಡರ್ ಗಳಿಗೆ ಸಂಪೂರ್ಣ ಸಹಕಾರ ನೀಡಿ, ಪರಿಶೀಲನೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಇಂಧನ ಇಲಾಖೆ ಮನವಿ ಮಾಡಿದೆ.

ನೋಡಿರಿ

