LPG ಸಿಲಿಂಡರ್‌ ಸಿಗುತ್ತಿಲ್ಲ ಎಂದು ಟೆನ್ಷನ್‌ ಬೇಡ! – ಈ ಟ್ರಿಕ್ಸ್‌ ಬಳಸಿ ಗ್ಯಾಸ್‌ ಉಳಿತಾಯ ಮಾಡಿ!

LPG ಸಿಲಿಂಡರ್‌ ಸಿಗುತ್ತಿಲ್ಲ ಎಂದು ಟೆನ್ಷನ್‌ ಬೇಡ! – ಈ ಟ್ರಿಕ್ಸ್‌ ಬಳಸಿ ಗ್ಯಾಸ್‌ ಉಳಿತಾಯ ಮಾಡಿ!

ಇರಾನ್ ಮತ್ತು ಇಸ್ರೇಲ್ ನಡುವಿನ ಯುದ್ಧದ ಪರಿಣಾಮವಾಗಿ ಜಾಗತಿಕ ಇಂಧನ ಪೂರೈಕೆಯಲ್ಲಿ ಉಂಟಾಗಿರುವ ವ್ಯತ್ಯಯದಿಂದಾಗಿ, ಕರ್ನಾಟಕ ಸೇರಿದಂತೆ ಭಾರತದಾದ್ಯಂತ ಕಮರ್ಷಿಯಲ್ ಎಲ್‌ಪಿಜಿ ಸಿಲಿಂಡರ್‌ಗಳ ತೀವ್ರ ಕೊರತೆ ಎದುರಾಗಿದೆ. ಹೀಗಾಗಿ ಗ್ಯಾಸ್‌ ಸಿಲಿಂಡರ್‌ ಸಿಗುವುದು ಕಷ್ಟವಾಗಿದೆ. ಆದ್ರೆ ಮನೆಯಲ್ಲಿ LPG ಗ್ಯಾಸ್‌ ಬೇಗ ಖಾಲಿಯಾಗದಂತೆ ತಡೆಯಲು ಈ ಟ್ರಿಕ್ಸ್‌ ಫಾಲೋ ಮಾಡಿ.

ಇದನ್ನೂ ಓದಿ: ಅಬ್ಬಬ್ಬಾ.. ಮಗುವಿನ ಕೈಯಲ್ಲೇ ಸ್ಪೋಟವಾಯ್ತು ಮೊಬೈಲ್!‌ – ಪುಟ್ಟ ಕಂದನಿಗೆ ಏನಾಯ್ತು?

ಯುದ್ದದಿಂದಾಗಿ ಅಡುಗೆ ಅನಿಲ ಪೂರೈಕೆಯಾಗುತ್ತಿಲ್ಲ. ಹೀಗಾಗಿ ನೀವು ಮನೆಯಲ್ಲಿ ಉಪಯೋಗಿಸುತ್ತಿರುವಂತಹ ಗ್ಯಾಸ್‌ ಬೇಗ ಖಾಲಿಯಾಗಬಾರದು, ಹೆಚ್ಚು ಸಮಯದವರೆಗೆ ಬಾಳಿಕೆ ಬರಬೇಕು ಅಂತಾದ್ರೆ, ಅಡುಗೆ ಮಾಡುವ ಸಂದರ್ಭದಲ್ಲಿ ಈ ಕೆಲವೊಂದು ಸಲಹೆಗಳನ್ನು ಪಾಲಿಸಿ. ಈ ಮೂಲಕ ಗ್ಯಾಸ್‌ ವ್ಯರ್ಥವಾಗದಂತೆ ನೋಡಿಕೊಳ್ಳಬಹುದು.

ಗ್ಯಾಸ್‌ ಉಳಿತಾಯ ಮಾಡುವುದು ಹೇಗೆ?

ಅಡುಗೆಗೆ ಪ್ರೆಶರ್ ಕುಕ್ಕರ್ ಬಳಸಿ

ಪ್ರೆಶರ್ ಕುಕ್ಕರ್‌ಗಳನ್ನು ಅನಿಲ ಉಳಿಸಲು ಅತ್ಯಂತ ಪರಿಣಾಮಕಾರಿ ಮಾರ್ಗವೆಂದು ಪರಿಗಣಿಸಲಾಗುತ್ತದೆ. ಕುಕ್ಕರ್‌ನಲ್ಲಿ ಆಹಾರ ಬೇಗನೆ ಬೇಯುತ್ತದೆ. ಆದ್ದರಿಂದ ಅನ್ನ, ಬೇಳೆ, ತರಕಾರಿಗಳನ್ನು ಆದಷ್ಟು ಕುಕ್ಕರ್‌ನಲ್ಲಿಯೇ ಬೇಯಿಸಿ.

ಅನಿಲ ಹಚ್ಚುವ ಮೊದಲು ತಯಾರಿ ಮಾಡಿ

ಅನೇಕ ಬಾರಿ, ಜನರು ಗ್ಯಾಸ್ ಸ್ಟೌವ್ ಹಚ್ಚಿ ನಂತರ ತರಕಾರಿಗಳನ್ನು ಕತ್ತರಿಸಲು ಅಥವಾ ಬೇಕಾಗಿರುವ ಮಸಾಲೆಗಳನ್ನು ತಯಾರಿಸಲು ಪ್ರಾರಂಭಿಸುತ್ತಾರೆ, ಇದರಿಂದಾಗಿ ಗ್ಯಾಸ್ ಅನಗತ್ಯವಾಗಿ ಉರಿಯುತ್ತದೆ. ಆದ್ದರಿಂದ ಅಡುಗೆ ಮಾಡಲು ಬೇಕಾದ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳಿ. ಇದು ಅಡುಗೆಯನ್ನು ವೇಗಗೊಳಿಸುತ್ತದೆ ಮತ್ತು ಅನಿಲವನ್ನು ಉಳಿಸುತ್ತದೆ.

ಮಧ್ಯಮ ಉರಿಯಲ್ಲಿ ಆಹಾರವನ್ನು ಬೇಯಿಸಿ

ಹೆಚ್ಚಿನ ಉರಿಯಲ್ಲಿ ಆಹಾರ ವೇಗವಾಗಿ ಬೇಯುತ್ತದೆ ಎಂದು ಜನರು ಸಾಮಾನ್ಯವಾಗಿ ಭಾವಿಸುತ್ತಾರೆ, ಆದರೆ ಹೆಚ್ಚಿನ ಶಾಖವು ಆಹಾರವನ್ನು ಬೇಗನೆ ಸುಡಬಹುದು ಮತ್ತು ಅನಿಲ ಬಳಕೆಯೂ ಹೆಚ್ಚಾಗಿರುತ್ತದೆ. ಆದ್ದರಿಂದ, ಬೇಳೆ, ತರಕಾರಿಗಳು ಹಾಗೂ ಅನ್ನ ಬೇಯಿಸುವ ಸಂದರ್ಭದಲ್ಲಿ  ಮಧ್ಯಮ ಉರಿಯಲ್ಲಿ ಅವುಗಳನ್ನು ಬೇಯಿಸುವುದು ಉತ್ತಮ. ಇದರಿಂದ ಆಹಾರ ಸರಿಯಾಗಿ ಬೇಯುತ್ತದೆ ಜೊತೆಗೆ ಇದು ಅನಿಲವನ್ನು ಉಳಿಸುತ್ತದೆ.

ಅಡುಗೆ ಮಾಡುವಾಗ ಯಾವಾಗಲೂ ಮುಚ್ಚಳವನ್ನು ಮುಚ್ಚಿ

ಗ್ಯಾಸ್‌ ಬೇಗ ಖಾಲಿಯಾಗಬಾರದೆಂದರೆ ಅಡುಗೆ ಮಾಡುವಾಗ ಪ್ಯಾನ್ ಅನ್ನು ಯಾವಾಗಲೂ ಮುಚ್ಚಿಡಬೇಕು. ಮುಚ್ಚಳ ಮುಚ್ಚದೆ ಆಹಾರವನ್ನು ಬೇಯಿಸಿದಾಗ, ಶಾಖವು ಉಗಿಯೊಂದಿಗೆ ಹೊರಹೋಗುತ್ತದೆ ಮತ್ತು ಇದರಿಂದಾಗಿ ಆಹಾರ ಬೇಯಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಅದೇ ಮುಚ್ಚಳ ಮುಚ್ಚುವುದರಿಂದ, ಪಾತ್ರೆಯ ಆ ಮುಚ್ಚಳವು ಉಗಿಯನ್ನು ಒಳಗೆ ಇಡುತ್ತದೆ, ಇದು ಆಹಾರವನ್ನು ವೇಗವಾಗಿ ಬೇಯಿಸುತ್ತದೆ ಮತ್ತು ಸುಮಾರು 20-25% ಅನಿಲವನ್ನು ಉಳಿಸುತ್ತದೆ.

ಸರಿಯಾದ ಗಾತ್ರದ ಪಾತ್ರೆ ಬಳಸಿ

ನೀವು ಚಿಕ್ಕ ಗ್ಯಾಸ್ ಬರ್ನರ್‌ನಲ್ಲಿ ಅಡುಗೆ ಮಾಡುತ್ತೀರಿ ಎಂದಾದರೆ  ಅದಕ್ಕೆ ತಕ್ಕಂತೆ ಚಿಕ್ಕ ಪಾತ್ರೆಯನ್ನೇ ಬಳಸಿ. ಸಣ್ಣ ಬರ್ನರ್ ಮೇಲೆ ದೊಡ್ಡ ಪಾತ್ರೆಯನ್ನು ಇಡುವುದರಿಂದ ಹೆಚ್ಚಿನ ಅನಿಲ ಖರ್ಚಾಗುತ್ತದೆ.

ಅಡುಗೆಗೂ ಮುನ್ನ ಕಾಳುಗಳನ್ನು ಬಿಸಿ ನೀರಿನಲ್ಲಿ ನೆನೆಸಿಡಿ

ನೀವು ಬೇಳೆ,  ಅಥವಾ ಯಾವುದೇ ದ್ವಿದಳ ಧಾನ್ಯ ಕಾಳುಗಳನ್ನು ಬೇಯಿಸುತ್ತಿದ್ದೀರಿ ಎಂದಾದ್ರೆ ಅಡುಗೆ ಮಾಡುವ ಮೊದಲು ಅವುಗಳನ್ನು ಕನಿಷ್ಠ ಅರ್ಧ ಗಂಟೆಗಳ ಕಾಲ  ಬೆಚ್ಚಗಿನ ನೀರಿನಲ್ಲಿ ನೆನೆಸಿಡಿ. ಇದು ಧಾನ್ಯಗಳನ್ನು ಮೃದುಗೊಳಿಸುತ್ತದೆ ಮತ್ತು ಕುಕ್ಕರ್‌ನಲ್ಲಿ ವೇಗವಾಗಿ ಬೇಯಿಸಲು ಸಹಾಯ ಮಾಡುತ್ತದೆ. ಈ ಸರಳ ಅಭ್ಯಾಸವು  ಗ್ಯಾಸ್‌ ಉಳಿಸಲು ಸಹ ಸಹಕಾರಿ.

ಬರ್ನರ್  ಸ್ವಚ್ಛಗೊಳಿಸಿ

ಬರ್ನರ್ ಜ್ವಾಲೆಯು ಹಳದಿ ಅಥವಾ ಕಿತ್ತಳೆ ಬಣ್ಣದಲ್ಲಿ ಕಾಣಿಸಿಕೊಂಡರೆ, ಬರ್ನರ್ ರಂಧ್ರಗಳು ಮುಚ್ಚಿಹೋಗಿವೆ ಮತ್ತು ಅನಿಲ ಸರಿಯಾಗಿ ಉರಿಯದೆ ಅನಿಲ ವ್ಯರ್ಥವಾಗುತ್ತಿದೆ ಎಂದರ್ಥ. ಹಾಗಾಗಿ ನೀಲಿ ಜ್ವಾಲೆಗಾಗಿ, ಬರ್ನರ್ ಅನ್ನು ನಿಯಮಿತವಾಗಿ ಸ್ವಚ್ಛಗೊಳಿಸಿ.

Shwetha M