ಹೆಲಿಕಾಪ್ಟರ್ ಪತನ – ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ, ವಿದೇಶಾಂಗ ಸಚಿವ ದುರ್ಮರಣ
ಇರಾನ್ ಅಧ್ಯಕ್ಷ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಭಾನುವಾರ ಪತನಗೊಂಡಿದೆ. ಈ ದುರ್ಘಟನೆಯಲ್ಲಿ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಸೇರಿ ಹೆಲಿಕಾಪ್ಟರ್‌ನಲ್ಲಿದ್ದ ಎಲ್ಲರೂ ಮೃತಪಟ್ಟಿರುವುದಾಗಿ ಇರಾನ್ ಮಾಧ್ಯಮಗಳು ವರದಿ ಮಾಡಿವೆ.
ಇದನ್ನೂ ಓದಿ: ಹೆಚ್. ಡಿ ರೇವಣ್ಣಗೆ ಟೆನ್ಶನ್ ಟೆನ್ಶನ್.. – ಮತ್ತೆ ಜೈಲಿಗೆ ಹೋಗ್ತಾರಾ ಮಾಜಿ ಸಚಿವ?
ರೈಸಿ ನೆರೆಯ ರಾಷ್ಟ್ರವಾದ ಅಝರ್ಬೈಜಾನ್ನಲ್ಲಿ ಆ ದೇಶದ ಅಧ್ಯಕ್ಷ ಇಲ್ಹಾಮ್ ಅಲಿಯಎವ್ ಜತೆ ಅಣೆಕಟ್ಟು ಉದ್ಘಾಟನೆ ಕಾರ್ಯಕ್ರಮಕ್ಕೆ ತೆರಳಿದ್ದರು. ಉಭಯ ರಾಷ್ಟ್ರಗಳು ಅರಾಸ್ ನದಿಗೆ ನಿರ್ಮಿಸಿದ ಮೂರನೇ ಅಣೆಕಟ್ಟು ಇದಾಗಿದೆ. ಕಾರ್ಯಕ್ರಮ ಮುಗಿಸಿ ಹಿಂತಿರುಗುವ ವೇಳೆ ಈ ದುರ್ಘಟನೆ ನಡೆದುಹೋಗಿದೆ. ಇಬ್ರಾಹಿಂ ರೈಸಿ ಸಜೀವದಹನವಾಗಿದ್ದಾರೆ. ಈ ದುರ್ಘಟನೆಯಲ್ಲಿ ವಿದೇಶಾಂಗ ಸಚಿವ ಹುಸೇನ್ ಅಮೀರ್ ಅಬ್ದುಲ್ಲಾಹಿಯಾನ್, ಪೂರ್ವ ಅಜೆರ್ಬೈಜಾನ್ ಪ್ರಾಂತ್ಯದ ಗವರ್ನರ್ ಮಾಲೆಕ್ ರಹಮತಿ, ತಬ್ರಿಜ್‌ನ ಇಮಾಮ್ ಮೊಹಮ್ಮದ್ ಅಲಿ ಅಲೆಹಶೆಮ್, ಪೈಲಟ್, ಕೋ ಪೈಲಟ್, ಸಿಬ್ಬಂದಿ ಮುಖ್ಯಸ್ಥ, ಭದ್ರತಾ ಮುಖ್ಯಸ್ಥ ಹಾಗೂ ಗನ್‌ಮ್ಯಾನ್‌ಗಳು ಮೃತಪಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.
ರೈಸಿ ಅವರಿದ್ದ ಹೆಲಿಕಾಪ್ಟರ್ನೊಂದಿಗೆ ಪ್ರಯಾಣಿಸುತ್ತಿದ್ದ ಇತರೆ ಎರಡು ಬೆಂಗಾವಲು ಹೆಲಿಕಾಪ್ಟರ್ಗಳು ಸುರಕ್ಷಿತವಾಗಿ ಹಿಂದಿರುಗಿವೆ. ಬೆಂಗಾವಲು ಹೆಲಿಕಾಪ್ಟರ್ಗಳಲ್ಲಿ ಇಂಧನ ಸಚಿವ ಅಲಿ ಅಕ್ಬರ್ ಮೆಹ್ರಾಬಿಯಾನ್ ಹಾಗೂ ವಸತಿ ಸಚಿವ ಮೆಹ್ರದಾದ್ ಇದ್ದು ಅವರು ಸುರಕ್ಷಿತವಾಗಿ ಮರಳಿದ್ದಾರೆ.
ರೆಡ್ ಕ್ರೆಸೆಂಟ್ ಅನ್ನು ಉಲ್ಲೇಖಿಸಿ ಹಲವಾರು ಇರಾನಿನ ಮಾಧ್ಯಮ ಚಾನೆಲ್‌ಗಳು, ರಕ್ಷಣಾ ತಂಡಗಳು ರೈಸಿಯ ಹೆಲಿಕಾಪ್ಟರ್‌ನ ಅವಶೇಷಗಳನ್ನು ಪತ್ತೆಮಾಡಿದ್ದವು. ರೆಡ್ ಕ್ರೆಸೆಂಟ್ ಅಧ್ಯಕ್ಷ ಮತ್ತು ಅವರ ಸಹಚರರು ಬದುಕುಳಿದಿದ್ದಾರೆಯೇ ಎಂಬ ಮಾಹಿತಿಯನ್ನು ನೀಡಿರಲಿಲ್ಲ. ಅಪಘಾತದ ಸ್ಥಳದಲ್ಲಿ ಯಾರೂ ಜೀವಂತವಾಗಿರುವ ಯಾವುದೇ ಕುರುಹು ಕಂಡುಬಂದಿರಲಿಲ್ಲ. ಇದೀಗ ಇಬ್ರಾಹಿಂ ರೈಸಿ ಮೃತಪಟ್ಟಿರುವ ಬಗ್ಗೆ ಅಧಿಕೃತ ಮಾಹಿತಿ ಹೊರಬಿದ್ದಿದೆ.