ಗುಜರಾತ್‌ನಲ್ಲಿ ಭಾರಿ ಮಳೆ – ಸಿಡಿಲು ಬಡಿದು 20 ಮಂದಿ ಸಾವು

ಗುಜರಾತ್‌ನಲ್ಲಿ ಭಾರಿ ಮಳೆ – ಸಿಡಿಲು ಬಡಿದು 20 ಮಂದಿ ಸಾವು

ಗುಜರಾತ್‌ ನಲ್ಲಿ ಭಾನುವಾರದಿಂದ ಭಾರಿ ಮಳೆಯಾಗುತ್ತಿದ್ದು, ಸಿಡಿಲು ಬಡಿದು ಸುಮಾರು 20 ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ಭಾನುವಾರ ಗುಜರಾತ್‌ನ ಹಲವು ಭಾಗಗಳಲ್ಲಿ ಗುಡುಗು ಸಹಿತ ಭಾರಿ ಮಳೆಯಾಗಿದೆ. ಭಾನುವಾರ ಸಿಡಿಲು ಬಡಿದು 8 ಮಂದಿ ಸಾವನ್ನಪ್ಪಿದ್ದರು. ಸೋಮವಾರ ಕೂಡ ಮಳೆ ಮುಂದುವರಿದಿದ್ದು, ಇದುವರೆಗೆ 20 ಮಂದಿ ಸಾವನ್ನಪ್ಪಿದ್ದು, ಹಲವು ಮಂದಿ ಗಾಯಗೊಂಡಿದ್ದಾರೆ. ಭಾರಿ ಮಳೆಯಿಂದಾಗಿ ಹಲವು ಹಲವು ಪ್ರದೇಶಗಳಲ್ಲಿ ಬೆಳೆ ಹಾನಿಯಾಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಚೀನಾದಲ್ಲಿ ನ್ಯುಮೋನಿಯಾ ಹೆಚ್ಚಳ – ಭಾರತದಲ್ಲಿ ಹೈ ಅಲರ್ಟ್‌ ಘೋಷಣೆ!

ಈ ಅವಘಡದಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ. ಸ್ಥಳೀಯ ಆಡಳಿತ ಮಂಡಳಿ ಮೃತರ ಕುಟುಂಬಗಳಿಗೆ ಪರಿಹಾರ ಒದಗಿಸುವ ಕಾರ್ಯದಲ್ಲಿ ತೊಡಗಿದೆ.

ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಪ್ರಕಾರ, ಸೋಮವಾರ (ನ.27) ರಂದು ಮಳೆ ಕಡಿಮೆಯಾಗುವ ನಿರೀಕ್ಷೆಯಿದೆ. ಗುಜರಾತ್‌ನ 252 ತಾಲೂಕುಗಳ ಪೈಕಿ 234 ತಾಲೂಕುಗಳಲ್ಲಿ ಭಾನುವಾರ ಮಳೆಯಾಗಿದೆ ಎಂದು ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರದ (ಎಸ್‌ಇಒಸಿ) ದತ್ತಾಂಶ ತಿಳಿಸುತ್ತದೆ. ಸೂರತ್, ಸುರೇಂದ್ರನಗರ, ಖೇಡಾ, ತಾಪಿ, ಭರೂಚ್ ಮತ್ತು ಅಮ್ರೇಲಿಯಂತಹ ಜಿಲ್ಲೆಗಲ್ಲಿ ಭಾರೀ ಮಳೆಯಾಗಿದೆ. ಕೇವಲ 16 ಗಂಟೆಗಳಲ್ಲಿ 50 ರಿಂದ 117 ಮಿ.ಮೀ. ನಷ್ಟು ಮಳೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೇಂದ್ರ ಗೃಹಸಚಿವ ಅಮಿತ್‌ ಶಾ ಅವರು ಸಂತ್ರಸ್ತರ ಕುಟುಂಬಗಳಿಗೆ ಸಾಂತ್ವನ ಹೇಳಿದ್ದಾರೆ. ಗುಜರಾತ್‌ನ ವಿವಿಧ ನಗರಗಳಲ್ಲಿ ಪ್ರತಿಕೂಲ ಹವಾಮಾನ ಮತ್ತು ಸಿಡಿಲಿನಿಂದ ಅನೇಕರು ಸಾವನ್ನಪ್ಪಿದ್ದಾರೆ. ಸುದ್ದಿ ತಿಳಿದು ಅತೀವ ದುಃಖವಾಗಿದೆ. ಈ ದುರಂತದಲ್ಲಿ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರಿಗೆ ತುಂಬಲಾರದ ನಷ್ಟವಾಗಿದೆ. ಅದಕ್ಕೆ ನಾನು ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಶಾ ಸಂತಾಪ ಸೂಚಿಸಿದ್ದಾರೆ.

Shwetha M