ಉತ್ತರಾಖಂಡದಲ್ಲಿ ಮಳೆಯ ಅಬ್ಬರ – ಕೇದಾರನಾಥ ಯಾತ್ರೆ ರದ್ದು
ಡೆಹ್ರಾಡೂನ್: ಕಳೆದ ಕೆಲವು ದಿನಗಳಿಂದ ಉತ್ತರಭಾರತದಾದ್ಯಂತ ಭಾರಿ ಮಳೆಯಾಗುತ್ತಿದೆ. ಸಾಕಷ್ಟು ಅವಾಂತರಗಳನ್ನು ಸೃಷ್ಟಿಸಿದೆ. ಉತ್ತರಾಖಂಡದ ಸೋನ್‌ಪ್ರಯಾಗ ಮತ್ತು ಗೌರಿಕುಂಡ್‌ನಲ್ಲಿ ಕೇದಾರನಾಥ ಯಾತ್ರೆಯನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಭಾರಿ ಮಳೆ ಹಾಗೂ ಪ್ರತಿಕೂಲ ಹವಾಮಾನದಿಂದಾಗಿ ಸೋನ್‌ಪ್ರಯಾಗ್ ಮತ್ತು ಗೌರಿಕುಂಡ್‌ನಲ್ಲಿ ಪ್ರತಿಕೂಲ ಹವಾಮಾನ ಇರುವ ಕಾರಣ ಪ್ರಯಾಣಿಕರ ಸುರಕ್ಷತೆಯನ್ನು ಗಮನದಲ್ಲಿರಿಸಿಕೊಂಡು ಜಿಲ್ಲಾಡಳಿತ ಈ ನಿರ್ಧಾರ ಕೈಗೊಂಡಿದೆ.
ಇದನ್ನೂ ಓದಿ: ರೈಲು ಪ್ರಯಾಣಿಕರಿಗೆ ಗುಡ್ ನ್ಯೂಸ್ – ಸೆ.15ರಿಂದ ಮುಂಬೈ-ಮಂಗಳೂರು ನಡುವೆ ಗಣೇಶ ಚತುರ್ಥಿ ವಿಶೇಷ ರೈಲು ಓಡಾಟ
ಭಾರೀ ಮಳೆ ಸುರಿಯುತ್ತಿರುವ ಕಾರಣ ಭಾರತೀಯ ಹವಾಮಾನ ಇಲಾಖೆ ಉತ್ತರಾಖಂಡದಲ್ಲಿ ಜುಲೈ 12ರಂದು ಆರೆಂಜ್ ಅಲರ್ಟ್ ಘೋಷಿಸಿದೆ. ಮಂಗಳವಾರ ಉತ್ತರಾಖಂಡದ ಗಂಗ್ನಾನಿ ಬಳಿಯ ಗಂಗೋತ್ರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಅವಶೇಷಗಳು ಬಿದ್ದು ನಾಲ್ವರು ಸಾವನ್ನಪ್ಪಿದ್ದು, 10 ಮಂದಿ ಗಾಯಗೊಂಡಿದ್ದಾರೆ. ಭಾರೀ ಮಳೆಯ ಪರಿಣಾಮ 4 ರಾಜ್ಯ ರಸ್ತೆ ಮತ್ತು 10 ಸಂಪರ್ಕ ರಸ್ತೆಗಳು ಮುಚ್ಚಿವೆ. ಅಲ್ಲದೇ ಧಾರಾಕಾರ ಮಳೆಯ ಪರಿಣಾಮ ಮಂದಾಕಿನಿ ಮತ್ತು ಅಲಕಾನಂದ ನದಿಗಳು ಉಕ್ಕಿ ಹರಿಯುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಜ್ಯದಲ್ಲಿ ಕೈಗೊಂಡಿರುವ ಮುಂಜಾಗ್ರತಾ ಕ್ರಮದ ಕುರಿತು ಮಾತನಾಡಿದ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ ಧಾಮಿ, ಪ್ರತಿವರ್ಷ ಇಲ್ಲಿ ಮಳೆಗಾಲದಲ್ಲಿ ಉಂಟಾಗುವ ಪ್ರಕೃತಿ ವಿಕೋಪಗಳನ್ನು ಎದುರಿಸಬೇಕಾಗುತ್ತದೆ. ಅತಿಯಾದ ಮಳೆಯಿಂದ ಭೂಕುಸಿತಗಳು ಉಂಟಾಗುತ್ತವೆ. ಅಲ್ಲದೇ ನದಿಗಳಲ್ಲಿ ನೀರಿನ ಮಟ್ಟವು ಹೆಚ್ಚಾಗುತ್ತದೆ. ನಾವು ಸಂಪೂರ್ಣ ಅಲರ್ಟ್ ಮೋಡ್‌ನಲ್ಲಿದ್ದು, ಎಲ್ಲಾ ಜಿಲ್ಲಾಡಳಿತ ಅಧಿಕಾರಿಗಳು ಮತ್ತು ವಿಪತ್ತು ನಿರ್ವಹಣಾ ಅಧಿಕಾರಿಗಳು ತಮ್ಮ ಕೆಲಸವನ್ನು ಮಾಡುತ್ತಿದ್ದಾರೆ. ಯಾವುದೇ ಪರಿಸ್ಥಿತಿ ಬಂದರೂ ಎದುರಿಸಲು ಅವರಿಗೆ ಅಲರ್ಟ್ ಮೋಡ್‌ನಲ್ಲಿರಲು ತಿಳಿಸಲಾಗಿದೆ ಎಂದರು.