ಕಾಶ್ಮೀರದಲ್ಲಿ ಭಾರಿ ಮಳೆ, ಹಲವೆಡೆ ಭೂಕುಸಿತ – ಅಮರನಾಥ ಯಾತ್ರೆ ಸ್ಥಗಿತ
ಶ್ರೀನಗರ: ಜಮ್ಮು – ಕಾಶ್ಮೀರದಲ್ಲಿ ಭಾರಿ ಮಳೆಯಾಗುತ್ತಿದೆ. ರಣ ಮಳೆಯಿಂದಾಗಿ ಹಲವೆಡೆ ಭೂಕುಸಿತ ಸಂಭವಿಸಿದೆ. ಇದರಿಂದಾಗಿ ರಾಷ್ಟ್ರೀಯ ಹೆದ್ದಾರಿಯನ್ನು ಬಂದ್ ಮಾಡಲಾಗಿದೆ. ಭಾರಿ ಮಳೆಯಾಗುತ್ತಿರುವ ಹಿನ್ನೆಲೆ ಅಮರನಾಥ ಯಾತ್ರೆಯನ್ನು ಮುಂದಿನ ಆದೇಶದವರೆಗೆ ಸ್ಥಗಿತಗೊಳಿಸಲಾಗಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಬಿಸಿಲನಾಡಿನಲ್ಲಿ ಮುಂದುವರಿದ ವರುಣಾರ್ಭಟ – ತಗ್ಗು ಪ್ರದೇಶಗಳು ಜಲಾವೃತ, ಹಲವು ಗ್ರಾಮಗಳ ಸಂಪರ್ಕ ಕಡಿತ
ಜಮ್ಮು ಕಾಶ್ಮೀರದಲ್ಲಿ ನಿರಂತವಾಗಿ ಮಳೆ ಸುರಿಯುತ್ತಿದೆ. ಪ್ರತಿಕೂಲ ಹವಾಮಾನದ ಹಿನ್ನೆಲೆ ಜಮ್ಮುವಿನ ಶಿಬಿರದಿಂದ ಕಾಶ್ಮೀರಕ್ಕೆ ಹೊರಟಿದ್ದ 3,000ಕ್ಕೂ ಹೆಚ್ಚು ಅಮರನಾಥ ಯಾತ್ರಿಕರ ಹೊಸ ಬ್ಯಾಚ್ ಅನ್ನು ರಾಂಬನ್ನಲ್ಲಿ ತಡೆಯಲಾಗಿದೆ. ಮಳೆಯಿಂದಾಗಿ 270 ಕಿ.ಮೀ ಉದ್ದದ ಮೆಹರ್ ಮತ್ತು ದಲ್ವಾಸ್ ಹೆದ್ದಾರಿಯಲ್ಲಿ ಭೂಕುಸಿತ ಸಂಭವಿಸಿರುವುದರಿಂದ ಮುಂದಿನ ಆದೇಶದವರೆಗೆ ಯಾತ್ರೆ ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
3,472 ಯಾತ್ರಾರ್ಥಿಗಳ 20ನೇ ಬ್ಯಾಚ್ ಶನಿವಾರ ಮುಂಜಾನೆ ಜಮ್ಮುವಿನ ಮೂಲ ಶಿಬಿರದಿಂದ 132 ವಾಹನಗಳಲ್ಲಿ ಹೊರಟಿತು. ಆದರೆ, ಹೆದ್ದಾರಿಯನ್ನು ಮುಚ್ಚಿದ್ದರಿಂದ ಬೆಂಗಾವಲು ಪಡೆ ಚಂದರ್ಕೋಟೆಯಲ್ಲಿ ನಿಲ್ಲಿಸಲಾಯಿತು ಎಂದು ಮಾಹಿತಿ ನೀಡಿದ್ದಾರೆ. ಜುಲೈ 1ರಿಂದ ಅಮರನಾಥ ಯಾತ್ರೆ ಆರಂಭವಾದಾಗಿನಿಂದ ಇಲ್ಲಿಯವರೆಗೆ 3 ಲಕ್ಷಕ್ಕೂ ಹೆಚ್ಚು ಭಕ್ತರು ದೇಗುಲಕ್ಕೆ ಭೇಟಿ ನೀಡಿದ್ದಾರೆ.