ಮಿಚಾಂಗ್ ಚಂಡಮಾರುತದ ಅಬ್ಬರಕ್ಕೆ ಚೆನ್ನೈನಲ್ಲಿ ಐವರು ಬಲಿ – ಆಂಧ್ರ ಪ್ರದೇಶದ ಬಾಪಟ್ಲಾಗೆ ಅಪ್ಪಳಿಸಲಿದೆ ಸೈಕ್ಲೋನ್!
ಮಿಚಾಂಗ್ ಚಂಡಮಾರುತ ಕ್ಷಣ ಕ್ಷಣಕ್ಕೂ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಚಂಡಮಾರುತದ ರೌದ್ರಾವತಾರಕ್ಕೆ ತಮಿಳುನಾಡು, ಆಂಧ್ರದಲ್ಲಿ ಭಾರೀ ಮಳೆಯಾಗುತ್ತಿದೆ. ಕಳೆದ 80 ವರ್ಷಗಳಲ್ಲಿ ಕಂಡು ಕೇಳರಿಯದ ಭಾರೀ ಬಿರುಗಾಳಿ ಸಹಿತ ಮಳೆಗೆ ಚೆನ್ನೈ ನಗರದಲ್ಲಿ ಪ್ರವಾಹ ಸ್ಥಿತಿ ನಿರ್ಮಾಣವಾಗಿದೆ. ಚೆನ್ನೈನಲ್ಲಿ ಮಹಾಮಳೆಗೆ ಇದುವರೆಗೆ 5 ಮಂದಿ ಬಲಿಯಾಗಿದ್ದು, ಆಂದ್ರಪ್ರದೇಶದಲ್ಲಿ ಬಾಲಕನೊಬ್ಬ ಮೃತಪಟ್ಟಿದ್ದಾನೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಮಿಚಾಂಗ್ ಚಂಡಮಾರುತ ಆರ್ಭಟ – ಮಳೆಗೆ ಜನಜೀವನ ತತ್ತರ, ಮೂವರು ಬಲಿ
ಭಾರಿ ಮಳೆಯಿಂದಾಗಿ ಚೆನ್ನೈ ನಗರದ 14 ರೈಲ್ವೇ ಸಬ್‍ವೇಗಳು ಬಂದ್ ಆಗಿವೆ. ರೈಲು-ವಿಮಾನ-ರಸ್ತೆ ಸಂಚಾರದಲ್ಲಿ ತೀವ್ರ ವ್ಯತ್ಯಯವಾಗಿವೆ. ಚೆನ್ನೈ ಏರ್ ಪೋರ್ಟ್‍ನಲ್ಲಿ ನೀರು ಆವರಿಸಿದೆ. ಪ್ರಮುಖ ರಸ್ತೆಗಳು ಜಲಮಯವಾಗಿವೆ. ಚೆನ್ನೈ ಸಾರಿಗೆ ಬಸ್‍ಗಳು ಸಹ ರಸ್ತೆಗೆ ಇಳಿದಿಲ್ಲ. ಮನೆಗಳಿಗೂ ನೀರು ನುಗ್ಗಿದೆ. ವಾಹನಗಳು ನೀರಲ್ಲಿ ಮುಳುಗಿವೆ. ನೀರುಪಾಲಾಗುತ್ತಿದ್ದ 20ಕ್ಕೂ ಹೆಚ್ಚು ಜನರನ್ನು ರಕ್ಷಣಾ ಪಡೆಗಳು ಕಾಪಾಡಿದ್ದಾರೆ. ಭಾರಿ ಮಳೆಯಿಂದಾಗಿ ಕೋರ್ಟ್-ಕಚೇರಿ, ಶಾಲೆ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ವಿದ್ಯುತ್, ನೀರು ಸರಬರಾಜು ವ್ಯವಸ್ಥೆ ಅಸ್ಥವ್ಯಸ್ತವಾಗಿದೆ. ಸಾಧ್ಯವಾದಷ್ಟು ಜನ ಮನೆಗೆ ಸೀಮಿತ ಆಗಬೇಕು ಎಂದು ಸರ್ಕಾರ ಕೋರಿದೆ.
ಕಾಂಚಿಪುರಂ, ಚೆಂಗಲ್‍ಪಟ್ಟು, ತಿರುವಳ್ಳುವರ್ ಜಿಲ್ಲೆಗಳಲ್ಲೂ ವ್ಯಾಪಕ ಮಳೆ ಆಗುತ್ತಿದೆ. ಆಂಧ್ರದ ಕರಾವಳಿ ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಮಳೆ ಆಗುತ್ತಿದೆ. ತಿರುಮಲದಲ್ಲಿ ಮಳೆ ಕಾರಣ ಭಕ್ತರು ಪರದಾಡಿದರು. ಮಂಗಳವಾರ ಮಧ್ಯಾಹ್ನ 12 ಗಂಟೆಗೆ ಮಿಚೌಂಗ್ ಚಂಡಮಾರುತ ನಿಜಾಂಪಟ್ಟಣಂ ಬಳಿ ತೀರ ದಾಟಲಿದೆ. ನಂತರ ಕೋಸ್ತಾ ಆಂಧ್ರ ತೀರಕ್ಕೆ ಸಮನಾಂತವಾರವಾಗಿ ಚಲಿಸಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಸದ್ಯ ಚೆನ್ನೈನಿಂದ 90 ಕಿಲೋಮೀಟರ್ ದೂರದಲ್ಲಿ ಚಲಿಸುತ್ತಿದೆ. 90ರಿಂದ 100 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸುತ್ತಿದ್ದು, ಸಮುದ್ರ ಪ್ರಕುಬ್ಧಗೊಂಡಿದೆ. ಚೆನ್ನೈ ತಲುಪಬೇಕಿದ್ದ 27ಕ್ಕೂ ಹೆಚ್ಚು ವಿಮಾನಗಳು ಬೆಂಗಳೂರು ಸೇರಿವೆ. ಕರ್ನಾಟಕದಿಂದ ತಮಿಳುನಾಡಿಗೆ ತೆರಳುವ ರೈಲು ಸೇವೆ ಕೂಡ ಬಂದ್ ಆಗಿದೆ.