ಮೂರೇ ದಿನದಲ್ಲಿ ಮಹಾ ಮಳೆಗೆ 34 ಮಂದಿ ಸಾವು
ಲಕ್ನೋ: ಕಳೆದ ಮೂರು ದಿನಗಳಿಂದ ಉತ್ತರಭಾರತದಲ್ಲಿ ಭಾರಿ ಮಳೆಯಾಗುತ್ತಿದೆ. ಎಡೆಬಿಡದೆ ಸುರಿಯುವ ರಣ ಮಳೆ ದೊಡ್ಡ ಅವಾಂತರ ಸೃಷ್ಟಿಸಿದೆ. ಸಾಕಷ್ಟು ಆಸ್ತಿ-ಪಾಸ್ತಿ ಹಾನಿಯಾಗಿದೆ. ಮನೆಗೆ ನೀರು ನುಗ್ಗಿ ಜನ ನಿದ್ದೆ ಇಲ್ಲದೆ ಜಾಗರಣೆ ಮಾಡಿದ್ದಾರೆ. ಉತ್ತರ ಪ್ರದೇಶದಲ್ಲಿ ಕಳೆದ ಮೂರು ದಿನಗಳಲ್ಲಿ ಮಳೆ ಸಂಬಂಧಿತ ಘಟನೆಗಳಲ್ಲಿ 34 ಜನರು ಸಾವನ್ನಪ್ಪಿದ್ದಾರೆ. ಕಳೆದ 24 ಗಂಟೆಗಳಲ್ಲಿ 10 ಮಂದಿ ಸಾವನ್ನಪ್ಪಿರುವ ಬಗ್ಗೆ ವರದಿಯಾಗಿವೆ.
ಇದನ್ನೂ ಓದಿ: ಮಹಾಮಳೆಯ ರೌದ್ರ ನರ್ತನ – ಆಟಿಕೆಗಳಂತೆ ಕೊಚ್ಚಿ ಹೋಗುತ್ತಿರುವ ವಾಹನಗಳು!
ಸರ್ಕಾರದ ಅಂಕಿಅಂಶಗಳ ಪ್ರಕಾರ, 34 ರಲ್ಲಿ 17 ಮಂದಿ ಸಿಡಿಲು ಬಡಿತದಿಂದ, 12 ಮಂದಿ ಮುಳುಗುವಿಕೆಯಿಂದ ಮತ್ತು ಐವರು ಭಾರೀ ಮಳೆಯಿಂದ ಉಂಟಾದ ಪ್ರವಾಹ ಮತ್ತು ಭೂಕುಸಿತದಲ್ಲಿ ಸಾವನ್ನಪ್ಪಿದ್ದಾರೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮೃತರ ಕುಟುಂಬಕ್ಕೆ 4 ಲಕ್ಷ ರೂ. ಪರಿಹಾರವನ್ನು ಘೋಷಿಸಿ, ಪ್ರಕೃತಿ ವಿಕೋಪಗಳಲ್ಲಿ ಗಾಯಗೊಂಡವರಿಗೆ ಸೂಕ್ತ ಚಿಕಿತ್ಸೆ ನೀಡುವ ಭರವಸೆ ನೀಡಿದ್ದಾರೆ.
ಉತ್ತರ ಪ್ರದೇಶದಲ್ಲಿ ಈಗಾಗಲೇ 11 ಪ್ರತಿಶತ ಅಧಿಕ ಮಳೆಯಾಗಿದೆ. ಇದು ನದಿಯ ನೀರಿನ ಮಟ್ಟದಲ್ಲಿ ಏರಿಕೆಗೆ ಕಾರಣವಾಗಿದೆ. ತಗ್ಗು ಪ್ರದೇಶಗಳನ್ನು ಜಲಾವೃತಗೊಂಡಿದೆ.
ಹವಾಮಾನ ಇಲಾಖೆ ಅಂಕಿ ಅಂಶಗಳ ಪ್ರಕಾರ ರಾಜ್ಯದ 75 ಜಿಲ್ಲೆಗಳ ಪೈಕಿ ಸುಮಾರು 68 ಜಿಲ್ಲೆಗಳಲ್ಲಿ ಮಳೆಯಾಗಿದೆ. ಭಾರೀ ಮಳೆಯಿಂದಾಗಿ ಗಂಗಾ, ರಾಮಗಂಗಾ, ಯಮುನಾ, ರಾಪ್ತಿ ಸೇರಿದಂತೆ ರಾಜ್ಯಾದ್ಯಂತ ಹರಿಯುವ ನದಿಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ.