ಗುಜರಾತ್ ಆಯ್ತು ಈಗ ರಾಜಸ್ಥಾನಕ್ಕೆ ಪ್ರವೇಶಿಸಲಿರುವ ಬಿಪರ್ ಜಾಯ್ ಚಂಡಮಾರುತ – ರೈಲು ಸಂಚಾರ ಸ್ಥಗಿತ
ಜೈಪುರ: ಕರಾವಳಿ ಪ್ರದೇಶಗಳಲ್ಲಿ ಬಿಪರ್ ಜಾಯ್ ಚಂಡಮಾರುತ ಅಬ್ಬರ ಹೆಚ್ಚಾಗಿದೆ. ಅಲ್ಲಿನ ಜನರು ಮನೆಯಿಂದ ಹೊರಬರಲಾಗದೇ ಭಯದಿಂದ ಕಾಲಕಳೆಯುತ್ತಿದ್ದಾರೆ. ಗುಜರಾತ್‌ನಲ್ಲಿ ಚಂಡಮಾರುತಕ್ಕೆ ಇಬ್ಬರು ಬಲಿಯಾಗಿದ್ದಾರೆ. ಗುಜರಾತ್‌ಗೆ ಅಪ್ಪಳಿಸಿ, ಅಬ್ಬರಿಸುತ್ತಿರುವ ಬಿಪೊರ್‌ಜಾಯ್ ಚಂಡಮಾರುತ ಈಗ ರಾಜಸ್ಥಾನದ ಕಡೆ ಮುಖ ಮಾಡಿದೆ.
ಇದನ್ನೂ ಓದಿ: ʼಬಿಪರ್ ಜಾಯ್ʼ ಹೊಡೆತಕ್ಕೆ ಗುಜರಾತ್ ಗಢಗಢ! – ಚಂಡಮಾರುತಕ್ಕೆ ತಂದೆ ಮಗ ಸಾವು
ಗುಜರಾತ್‌ಗೆ ಪ್ರಬಲವಾಗಿ ಅಪ್ಪಳಿಸಿದ್ದ ಬಿಪರ್ ಜಾಯ್ ಚಂಡಮಾರುತ ಇದೀಗ ಸೌರಾಷ್ಟ್ರ ಮತ್ತು ಕಳ್ ಮೂಲಕ ಶುಕ್ರವಾರ ಸಂಜೆ ದಕ್ಷಿಣ ರಾಜಸ್ಥಾನ ಪ್ರವೇಶಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಈ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆಯು ಬಾರ್ಮರ್, ಜಾಲೋರ್, ಜೈಸಲ್ಮರ್, ಸಿರೋಹಿ, ಜೋದ್‌ಪುರ, ಪಾಲಿ ಜಿಲ್ಲೆಗಳಲ್ಲಿ ‘ಆರೆಂಜ್ ಅಲರ್ಟ್’ ಘೋಷಣೆ ಮಾಡಿದೆ.
ಬಿಪರ್ ಜಾಯ್ ಚಂಡಮಾರುತ ರಾಜಸ್ಥಾನಕ್ಕೆ ಪ್ರವೇಶಿಸಲಿರುವ ಹಿನ್ನೆಲೆ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದೆ. ಈ ಹಿನ್ನೆಲೆ ಜೋಧಪುರ ವಿಶ್ವವಿದ್ಯಾಲಯವು ಶುಕ್ರವಾರ ಮತ್ತು ಶನಿವಾರದಂದು ನಡೆಯಬೇಕಿದ್ದ ಪರೀಕ್ಷೆಗಳನ್ನು ಮುಂದೂಡಿದೆ.
ಬಾರ್ಮೆರ್-ಜೋಧಪುರ ನಡುವೆ ಸಂಚರಿಸಬೇಕಿದ್ದ ಪ್ಯಾಸೆಂಜರ್ ರೈಲುಗಳನ್ನು ಎರಡು ದಿನ ರದ್ದು ಮಾಡಲಾಗಿದೆ. ಬಾರ್ಮೆರ್ ಮತ್ತು ಜಾಲೋರ್‌ನಲ್ಲಿ ತಗ್ಗು ಪ್ರದೇಶಗಳಲ್ಲಿ ವಾಸಿಸುತ್ತಿರುವವರಿಗೆ ಬೇರೆಡೆ ತೆರಳುವಂತೆ ಸೂಚನೆ ನೀಡಲಾಗಿದೆ. ಜೈಸರ್‌ನ ಡಬ್ಬಾ ಗ್ರಾಮದಿಂದ 450 ಜನರನ್ನು ಸ್ಥಳಾಂತರಿಸಲಾಗಿದೆ. ಚಂಡಮಾರುತ ಪೀಡಿತ ಪ್ರದೇಶಗಳಲ್ಲಿ, ನರೇಗಾ ಕಾಮಗಾರಿಗಳನ್ನು ನಿಲ್ಲಿಸಲಾಗಿದೆ.
ಬಾರ್ಮೆರ್, ಜಲೋರ್, ಜೈಸರ್‌ನಲ್ಲಿ ಗುರುವಾರ ಮಧ್ಯಾಹ್ನ ಬಲವಾದ ಗಾಳಿ ಬೀಸುತ್ತಿದ್ದು, ಹಲವೆಡೆ ಸಾಧಾರಣ ಮಳೆಯಾಗಿದೆ. ಬಾರ್ಮೆರ್‌ನ ಗ್ರಾಮೀಣ ಪ್ರದೇಶಗಳಲ್ಲಿ ಗುರುವಾರ ಸಂಜೆಯವರೆಗೆ 20 ಮಿ.ಮೀ ಮಳೆ ದಾಖಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.