ಉದ್ಘಾಟನೆಯಾದ ಒಂದೇ ವಾರಕ್ಕೆ ಅವಾಂತರ – ಹೊಳೆಯಂತಾದ ಬೆಂಗಳೂರು-ಮೈಸೂರು ದಶಪಥ
ರಾಮನಗರ: ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ಸಮಸ್ಯೆಗಳ ಗೂಡಾಗಿದೆ. ಕಳೆದ ರಾತ್ರಿ ಸುರಿದ ಭಾರೀ ಮಳೆಗೆ ಹೆದ್ದಾರಿ ಸಂಪೂರ್ಣ ಜಲಾವೃತವಾಗಿದೆ.
ರಾಮನಗರ ಸಮೀಪದ ಸಂಘಬಸವನ ದೊಡ್ಡಿ ಗ್ರಾಮದ ಬಳಿ ಹೆದ್ದಾರಿಯಲ್ಲಿ ಭಾರಿ ಪ್ರಮಾಣದ ಮಳೆ ನೀರು ನಿಂತಿದೆ. ಇದರಿಂದಾಗಿ ವಾಹನ ಸವಾರರು ಪರದಾಡುವಂತೆ ಆಗಿದೆ.
ಇದನ್ನೂ ಓದಿ: ಕಟ್ಟಡದ ಮೇಲಿದ್ದ ಮೊಬೈಲ್ ಟವರ್ ಮಾಯ – ಮಾಲೀಕ ಕೊಟ್ಟ ಉತ್ತರ ಏನು ಗೊತ್ತಾ?
ರಸ್ತೆಯಲ್ಲಿ ಭಾರಿ ಪ್ರಮಾಣದ ನೀರು ನಿಂತಿದ್ದರಿಂದ ಕೆಲ ವಾಹನಗಳು ಕೆಟ್ಟು ನಿಂತಿದೆ. ಇದರಿಂದಾಗಿ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದ್ದು, ವಾಹನಗಳ ನಡುವೆ ಸರಣಿ ಅಪಘಾತ ಸಂಭವಿಸಿದೆ.
ಕಳೆದ ಆರು ದಿನಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇಯನ್ನು ಉದ್ಘಾಟಿಸಿದ್ದರು. ಉದ್ಘಾಟನೆಯಾದ 6 ದಿನಕ್ಕೇ ಎಕ್ಸ್ಪ್ರೆಸ್ ವೇನಲ್ಲಿ ಹತ್ತಾರು ಸಮಸ್ಯೆಗಳು ಕಾಣಿಸಿಕೊಂಡಿವೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯಲ್ಲಿ ಮಳೆಯಿಂದ ಯಾವುದೇ ಸಮಸ್ಯೆ ಆಗೋದಿಲ್ಲ ಎಂದಿತ್ತು. ಆದರೆ ಉದ್ಘಾಟನೆಯಾದ ಆರೇ ದಿನಕ್ಕೆ ಮಳೆಯಿಂದ ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಇದೀಗ ಹೆದ್ದಾರಿ ಪ್ರಾಧಿಕಾರದ ವಿರುದ್ಧ ವಾಹನ ಸವಾರರು ಆಕ್ರೋಶ ಹೊರಹಾಕಿದ್ದಾರೆ.
ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಅಪಘಾತ ಪ್ರಕರಣಗಳು ಮುಂದುವರಿದಿದ್ದು, ನಿನ್ನೆ ರಾಮನಗರ ತಾಲೂಕಿನ ಬಸವನಪುರ ಬಳಿ ಮೇಲ್ಸೇತುವೆಯ ತಡೆಗೋಡೆಗೆ ಲಾರಿಯೊಂದು ಡಿಕ್ಕಿ ಹೊಡೆದಿದೆ. ಈ ವೇಳೆ ಲಾರಿ ಹಾಗೂ ಕಾರು ಚಾಲಕರು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದರು. ಸ್ಥಳಕ್ಕೆ ಆಗಮಿಸಿದ ರಾಮನಗರ ಸಂಚಾರಿ ಠಾಣಾ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.