ಹಿಮಾಚಲ ಪ್ರದೇಶ, ಉತ್ತರಾಖಂಡ್‌ನಲ್ಲಿ ಮೇಘಸ್ಫೋಟ – ಸಾವಿನ ಸಂಖ್ಯೆ 55ಕ್ಕೆ ಏರಿಕೆ

ಹಿಮಾಚಲ ಪ್ರದೇಶ, ಉತ್ತರಾಖಂಡ್‌ನಲ್ಲಿ ಮೇಘಸ್ಫೋಟ – ಸಾವಿನ ಸಂಖ್ಯೆ 55ಕ್ಕೆ ಏರಿಕೆ

ಹಿಮಾಚಲ ಪ್ರದೇಶ ಹಾಗೂ ಉತ್ತರಾಖಂಡ ರಾಜ್ಯಗಳಲ್ಲಿ ಮೇಘಸ್ಫೋಟ ಸಂಭವಿಸಿದೆ. ಹಲವು ಪ್ರದೇಶಗಳಲ್ಲಿ ಭೂಕುಸಿತ, ಪ್ರವಾಹ ಉಂಟಾಗಿದೆ. ಮಳೆ ಸಂಬಂಧಿತ ಪ್ರಕರಣಗಳಲ್ಲಿ ಈವರೆಗೂ 55 ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ಕಳೆದ ಕೆಲವು ದಿನಗಳಿಂದ ಹಿಮಾಚಲಪ್ರದೇಶ ಹಾಗೂ ಉತ್ತರಾಖಂಡ್‌ ನಲ್ಲಿ ಭಾರಿ ಮಳೆ ಸುರಿಯುತ್ತಿದೆ. ಹಿಮಾಚಲ ಪ್ರದೇಶ ಒಂದರಲ್ಲಿ 51 ಜನ ಸಾವನ್ನಪ್ಪಿದ್ದು, ಉತ್ತರಾಖಂಡದಲ್ಲಿ 4 ಜನ ಮೃತಪಟ್ಟಿದ್ದಾರೆ. ಶಿಮ್ಲಾದಲ್ಲಿ ಸಂಭವಿಸಿದ ಎರಡು ಪ್ರತ್ಯೇಕ ಭೂ ಕುಸಿತದಲ್ಲಿ ಈವರೆಗೂ 14 ಶವಗಳನ್ನು ಹೊರತೆಗೆಯಲಾಗಿದೆ. ಸಮ್ಮರ್ ಹಿಲ್ ಪ್ರದೇಶದ ಶಿವ ದೇವಾಲಯದ ಅವಶೇಷಗಳ ಅಡಿಯಲ್ಲಿ ಇನ್ನೂ ಹೆಚ್ಚಿನ ಜನರು ಸಿಲುಕಿರುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಕೇದಾರನಾಥದಲ್ಲಿ ಗುಡ್ಡಗಳು ಛಿದ್ರ.. ಬೃಹತ್ ಬಂಡೆಗಳು ಕುಸಿತ – ಶಿವನ ದರ್ಶನಕ್ಕೆ ತೆರಳಿದ್ದ 40 ಕನ್ನಡಿಗರಿಗೆ ಸಂಕಷ್ಟ

ಮುಂದಿನ 24 ಗಂಟೆಗಳ ಅವಧಿಯಲ್ಲಿ ಕುಲು, ಕಿನ್ನೌರ್, ಲಾಹೌಲ್ ಮತ್ತು ಸ್ಪಿತಿ ಹೊರತುಪಡಿಸಿ ರಾಜ್ಯದ 12 ಜಿಲ್ಲೆಗಳ ಪೈಕಿ ಒಂಬತ್ತು ಜಿಲ್ಲೆಗಳಲ್ಲಿ ಅತಿ ಹೆಚ್ಚು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಬದರಿನಾಥ್, ಕೇದಾರನಾಥ ಮತ್ತು ಗಂಗೋತ್ರಿ ದೇಗುಲಗಳಿಗೆ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಗಳ ಬಳಿ ಭಾರಿ ಭೂಕುಸಿತ ಸಂಭವಿಸಿದ್ದು, ರಸ್ತೆ ಸಂಪರ್ಕ ಕಡಿತವಾಗಿದೆ. ಇದರ ಬೆನ್ನಲ್ಲೇ ಚಾರ್ಧಾಮ್ ಯಾತ್ರೆಯನ್ನು ಎರಡು ದಿನಗಳ ಕಾಲ ಸ್ಥಗಿತಗೊಳಿಸಲಾಗಿದೆ. ಕೇದಾರನಾಥ ಟ್ರೆಕ್ ಮಾರ್ಗದಲ್ಲಿ ಲಿಂಚೋಲಿಯಲ್ಲಿ ಕ್ಯಾಂಪ್‍ಗೆ ಭೂಕುಸಿತ ಸಂಭವಿಸಿದ್ದು, ನಾಲ್ಕು ಅಂಗಡಿಗಳಿಗೆ ಹಾನಿಯಾಗಿದೆ.

ಋಷಿಕೇಶ-ಕರ್ಣಪ್ರಯಾಗ ರೈಲು ಮಾರ್ಗ ಯೋಜನೆಯ `ಎಡಿಟ್ II’ ಎಂಬ ಹೆಸರಿನ ಸುರಂಗದಲ್ಲಿ ನೀರು ನುಗ್ಗಿ 114 ಕಾರ್ಮಿಕರು ಸಿಲುಕಿಕೊಂಡಿದ್ದರು. ಪೊಲೀಸರು ಸ್ಥಳಕ್ಕೆ ಧಾವಿಸಿ ಸುರಂಗದೊಳಗೆ ಸಂಗ್ರಹವಾದ ನೀರನ್ನು ಹೊರಹಾಕಿದ್ದಾರೆ. ಬಳಿಕ ಎಲ್ಲಾ 114 ಕಾರ್ಮಿಕರನ್ನು ಹಗ್ಗಗಳ ಸಹಾಯದಿಂದ ರಕ್ಷಿಸಲಾಗಿದೆ.

ತೆಹ್ರಿ, ಹರಿದ್ವಾರ ಮತ್ತು ಋಷಿಕೇಶದಲ್ಲಿ ಗಂಗಾ ಸೇರಿದಂತೆ ಬಹುತೇಕ ನದಿಗಳು ತುಂಬಿ ಹರಿಯುತ್ತಿವೆ. ಹರಿದ್ವಾರದಲ್ಲಿ ಗಂಗಾ ನದಿಯು 295.60 ಮೀಟರ್, ಅಪಾಯದ ಮಟ್ಟಕ್ಕಿಂತ 1.60 ಮೀಟರ್ ಎತ್ತರದಲ್ಲಿ ಹರಿಯುತ್ತಿರುವುದರಿಂದ ಪರಿಸ್ಥಿತಿ ಆತಂಕಕಾರಿಯಾಗಿದೆ. ಗಂಗಾ ನದಿಯಿಂದ ಹರಿದ್ವಾರದ ಬೈರಾಗಿ ಶಿಬಿರಕ್ಕೂ ನೀರು ನುಗ್ಗಿದೆ. ರುದ್ರಪ್ರಯಾಗ, ಶ್ರೀನಗರ, ದೇವಪ್ರಯಾಗದ ಅಲಕನಂದಾ, ಮಂದಾಕಿನಿ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ ಎಂದು ಡೆಹ್ರಾಡೂನ್‍ನ ವಿಪತ್ತು ನಿಯಂತ್ರಣಾಲಯ ತಿಳಿಸಿದೆ.

suddiyaana